ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಎಟಿಎಸ್‌ ಮಾಜಿ ಮುಖ್ಯಸ್ಥ ರಾಯ್‌ ಆತ್ಮಹತ್ಯೆ

ಆಪ್ತ ಬಳಗದಲ್ಲಿ ಅರ್ನಾಲ್ಡ್‌ ಶ್ವಾಜ್‌ನೇಗರ್ ಎಂಬ ಖ್ಯಾತಿ
Last Updated 11 ಮೇ 2018, 20:23 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮಾಜಿ ಮುಖ್ಯಸ್ಥ ಹಿಮಾಂಶು ರಾಯ್‌ ತಮ್ಮ ಸರ್ವೀಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

1988ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾಯ್‌ ಪ್ರಸ್ತುತ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಅಸ್ವಸ್ಥರಾಗಿದ್ದ ಅವರನ್ನು ಬಾಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ರಾಯ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಯ್‌, ಇದೇ ಕಾರಣಕ್ಕೆ ಒಂದು ವರ್ಷದಿಂದ ರಜೆ ಮೇಲಿದ್ದರು.

ಎತ್ತರದ ನಿಲುವು, ನಿತ್ಯವೂ ದೇಹದಂಡನೆ ಮೂಲಕ ಸದೃಢ ಶರೀರ ಹೊಂದಿದ್ದ ಸ್ಫುರದ್ರೂಪಿ ಹಿಮಾಂಶು ರಾಯ್‌ ಅವರನ್ನು ಆಪ್ತ ವಲಯದಲ್ಲಿ ಹಾಲಿವುಡ್‌ ತಾರೆ ಅರ್ನಾಲ್ಡ್‌ ಶ್ವಾಜ್‌ನೇಗರ್ ಎಂದೇ ಕರೆಯಲಾಗುತ್ತಿತ್ತು.

2008ರಲ್ಲಿ ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಉಗ್ರ ಅಜ್ಮಲ್‌ ಕಸಬ್‌ನನ್ನು ಮುಂಬೈನ ಆರ್ಥರ್‌ ರೋಡ್‌ ಜೈಲಿನಿಂದ ಪುಣೆಯ ಯೆರವಾಡ ಜೈಲಿಗೆ ಸಾಗಿಸುವ ಪೊಲೀಸ್ ಅಧಿಕಾರಿಗಳ ತಂಡದಲ್ಲಿ ರಾಯ್‌ ನಿಯೋಜನೆಗೊಂಡಿದ್ದರು.

2012–14ರಲ್ಲಿ ಜಂಟಿ ಪೊಲೀಸ್‌ ಆಯುಕ್ತರಾಗಿದ್ದ ರಾಯ್‌ಗೆ ಐಪಿಎಲ್‌ ಬೆಟ್ಟಿಂಗ್‌ ಹಗರಣ ಕುರಿತು ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು. ಬಾಂದ್ರಾ ಕುರ್ಲಾದಲ್ಲಿರುವ ಅಮೆರಿಕನ್‌ ಸ್ಕೂಲ್‌ ಕಟ್ಟಡವನ್ನು ಸ್ಫೋಟಿಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್ ಅನೀಸ್‌ ಅನ್ಸಾರಿಯನ್ನು ರಾಯ್‌ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT