ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಿದ್ಧತೆ ಪೂರ್ಣ

ಮತದಾನ ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅವಕಾಶ, ಬಿಗಿ ಪೊಲೀಸ್‌ ಭದ್ರತೆ
Last Updated 12 ಮೇ 2018, 4:42 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 12ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಕ್ಕು ಚಲಾಯಿಸಲು ಮತದಾರರೂ ಸಜ್ಜಾಗಿದ್ದಾರೆ.

4416 ಮತಗಟ್ಟೆಗಳನ್ನು ತೆರೆಯಲಾಗಿದೆ. 18,88,415 ಪುರುಷರು, 18,34,894 ಮಹಿಳೆಯರು, 276 ಇತರರು, 14302 ಸೇವಾ ಮತದಾರರು ಸೇರಿ 37,37,887 ಮತದಾರರಿದ್ದಾರೆ. ಈ ಪೈಕಿ 24,650 ಅಂಗವಿಕಲರು.

ಇಲ್ಲಿನ ಸರ್ದಾರ್‌ ಪ್ರೌಢಶಾಲೆ ಆವರಣ ಸೇರಿದಂತೆ, ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸಿಬ್ಬಂದಿ ನಿಯೋಜಿಸುವುದು ಹಾಗೂ ಮತಗಟ್ಟೆಗಳ ಹಂಚಿಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ, ಪೊಲೀಸರು ಹಾಗೂ ಮತಗಟ್ಟೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರ ಮತ್ತಿತರ ಪರಿಕರಗಳೊಂದಿಗೆ ತಮಗೆ ನಿಗದಿಯಾದ ಗ್ರಾಮಗಳಲ್ಲಿನ ಮತಗಟ್ಟೆಗಳನ್ನು ತಲುಪಿದ್ದಾರೆ.

ನ್ಯಾಯಸಮ್ಮತವಾಗಿ ನಡೆಸಲು:

‘ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ 100ರಷ್ಟು ಮತದಾನವಾಗಲು ಸಹಕರಿಸಬೇಕು. ಪ್ರಜಾಪ್ರಭುತ್ವ ಎತ್ತಿಹಿಡಿಯಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್‌. ಜಿಯಾವುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಮತದಾರರು ಮತ ಕೇಂದ್ರದ ಮಾಹಿತಿಯನ್ನು KAEPIC<SPACE><EPICNUMBER> ನಮೂದಿಸಿ ಮೊ: 97319 79899 ಎಸ್‌ಎಂಎಸ್ ಮಾಡಿ ತಿಳಿದುಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಚುನಾವಣಾ ಆಯೋಗದ ಜಾಲತಾಣ ವೀಕ್ಷಿಸಬಹುದು. ದೂ: 0831– 2565555 ಸಂಪರ್ಕಿಸಬಹುದು. ಮತಗಟ್ಟೆ ಹೊರಗೆ ಸೇವಾ ಕೇಂದ್ರ ತೆರೆಯಲಾಗುವುದು. ಮತದಾರರು ಅಲ್ಲಿರುವ ಮತಗಟ್ಟೆ ಅಧಿಕಾರಿಯಿಂದ ಮಾಹಿತಿ ಪಡೆಯಬಹುದು’ ಎಂದು ತಿಳಿಸಿದರು.

ಮೂಲ ಸೌಲಭ್ಯ:

‘ಮತಗಟ್ಟೆಗಳಲ್ಲಿ ಆಯೋಗದ ನಿರ್ದೇಶನದಂತೆ, ರ‍್ಯಾಂಪ್‌, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಪೀಠೋಪಕರಣ, ನಿರೀಕ್ಷಣಾ ಕೊಠಡಿ, ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ನಿರೀಕ್ಷಣಾ ಕೊಠಡಿ ಸೌಲಭ್ಯ ಇಲ್ಲದಿರುವೆಡೆ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರ ಅನುಕೂಲಕ್ಕಾಗಿ ವೀಲ್‌ಚೇರ್‌, ದೃಷ್ಟಿದೋಷ ಇರುವವರಿಗೆ ಮಸೂರದ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಕುಡಚಿ (ಪ.ಜಾತಿ) ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, 19 ಉಮೇದುವಾರರು ಇರುವುದರಿಂದ, ಪ್ರತಿ ಮತಗಟ್ಟೆಯಲ್ಲಿ 2 ಬ್ಯಾಲೆಟ್‌ ಯುನಿಟ್‌ ಒದಗಿಸಲಾಗಿದೆ. ಉಳಿದ 17 ಕ್ಷೇತ್ರಗಳಿಗೆ ಒಂದು ಬ್ಯಾಲೆಟ್‌ ಯುನಿಟ್‌ ಮಾತ್ರ ನೀಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, 4 ಸಹಾಯಕ ಮತಗಟ್ಟೆ ಅಧಿಕಾರಿ, ಒಬ್ಬ ಪೊಲೀಸ್‌ ಸಿಬ್ಬಂದಿ ಸೇರಿ ಒಟ್ಟು 24,228 ಮಂದಿ ನಿಯೋಜಿಸಲಾಗಿದೆ. ಮಹಿಳಾ ಸಿಬ್ಬಂದಿಯನ್ನು ಅವರ ವಾಸದ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಪುರುಷರನ್ನು ಹೊರಗಿನ ಕ್ಷೇತ್ರಗಳಿಗೆ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಎಲ್ಲರೂ ಮಹಿಳೆಯರೇ:

‘ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವ ಕಡೆಗಳಲ್ಲಿ 50 ‘ಪಿಂಕ್ ಮತಗಟ್ಟೆ’ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಅವರು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿರುತ್ತಾರೆ. ಭದ್ರತೆಗೂ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಮಹಿಳಾ ಮತದಾರರು ಮತಗಟ್ಟೆಗಳಿಗೆ ಬರುವಂತೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿದೆ’ ವಿವರಿಸಿದರು.

‘124 ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್‌, 180 ವಿಡಿಯೊಗ್ರಫಿ, 359 ಮೈಕ್ರೋ ಆಬ್ಸರ್ವರ್‌ಗಳ ಮೂಲಕ ನಿಗಾ ವಹಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ಸಿ.ಪಿ.ಎಂ.ಎಫ್‌ ಸುರಕ್ಷಾ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್‌, ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ, ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಬಿ. ಬೂದೆಪ್ಪ, ಅಬಕಾರಿ ಉಪ ಆಯುಕ್ತ ಅರುಣ್‌ಕುಮಾರ್‌ ಇದ್ದರು.

**
ಸಂಜೆ 6ರ ನಂತರ ಮಳೆಯಾಗುವ ಮುನ್ಸೂಚನೆ ಇದೆ. 6ರ ಒಳಗೆ ಸಾಲಿನಲ್ಲಿ ನಿಂತವರೆಲ್ಲರಿಗೂ ಮತದಾನಕ್ಕೆ ಅವಕಾಶವಿರುತ್ತದೆ
- ಎಸ್‌. ಜಿಯಾವುಲ್ಲಾ, ಜಿಲ್ಲಾ ಚುಣಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT