ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಸೇರಿದ ಮತಯಂತ್ರ; ಇಂದು ಮತದಾನ

ನಗರದ ಮೂರು ಕಡೆ ಮಸ್ಟರಿಂಗ್‌; ಗೊಂದಲಗಳಿಲ್ಲದೆ ನಡೆದ ಪ್ರಕ್ರಿಯೆ
Last Updated 12 ಮೇ 2018, 5:00 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡಿರುವ ಮತಗಟ್ಟೆ ಸಿಬ್ಬಂದಿ ಶುಕ್ರವಾರ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಮತದಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಪಡೆದುಕೊಂಡು ಮತಗಟ್ಟೆಗಳಿಗೆ ತೆರಳಿದರು.

ನಗರದ ಮೋತಿ ವೀರಪ್ಪ ಶಾಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ನಡೆದರೆ, ಡಿಆರ್‌ಆರ್‌ ಕಾಲೇಜಿನಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹಾಗೂ ಯುಬಿಡಿಟಿ ಕಾಲೇಜಿನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಬಾ ಕ್ಷೇತ್ರದ ಮಸ್ಟರಿಂಗ್ ನಡೆಯಿತು.

ಮೂರೂ ಕ್ಷೇತ್ರಗಳ ವ್ಯಾಪ್ತಿಯ ಸಿಬ್ಬಂದಿ ಬೆಳಿಗ್ಗೆ 8ಕ್ಕೆ ಕೇಂದ್ರಗಳಲ್ಲಿ ಹಾಜರಿದ್ದು, ಸಂಬಂಧಪಟ್ಟ ಮತಗಟ್ಟೆ ಸಂಖ್ಯೆ, ಬೂತ್ ಸಂಖ್ಯೆ ಹಾಗೂ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು. ಐವರು ಮತಗಟ್ಟೆ ಸಿಬ್ಬಂದಿಯನ್ನು ಒಳಗೊಂಡ ತಂಡಕ್ಕೆ ಪರಿಕರಗಳನ್ನು ವಿತರಿಸಲಾಯಿತು.

ತಂಡದಲ್ಲಿ ಯಾರಿರುತ್ತಾರೆ? ತಂಡದಲ್ಲಿ ಪಿಆರ್‌ಒ, ಎಪಿಆರ್‌ಒ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳು ಸೇರಿ ಐವರು ಇರುತ್ತಾರೆ. ಇವರಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಾಡಿದರೆ, ಅಥವಾ ಅಕ್ರಮಗಳಲ್ಲಿ ಭಾಗಿಯಾಗಿ ಚುನಾವಣಾ ಕರ್ತವ್ಯದಿಂದ ಬಿಡುಗಡೆಯಾದರೆ, ಬದಲಿ ಸಿಬ್ಬಂದಿಯ ವ್ಯವಸ್ಥೆಯೂ ಇರುತ್ತದೆ.

ಮತಗಟ್ಟೆ ಸಿಬ್ಬಂದಿಗೆ ವಿವಿ ಪ್ಯಾಟ್‌ ಮಷಿನ್‌, ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯುನಿಟ್‌, ಮೆಡಿಕಲ್‌ ಕಿಟ್‌, ಮತದಾರರ ಪಟ್ಟಿ, ಚುನಾವಣೆಗೆ ಸಂಬಂಧಿಸಿದ ಫಾರಂಗಳು, ಮೆಡಿಕಲ್‌ ಕಿಟ್‌ಗಳನ್ನು ಪೂರೈಸಲಾಯಿತು. ಜತೆಗೆ ಸ್ಥಳದಲ್ಲೇ ಪರೀಕ್ಷಿಸಿಕೊಂಡು, ದೋಷಗಳು ಕಂಡಬಂದರೆ ಗಮನಕ್ಕೆ ತರುವಂತೆ ಅಧಿಕಾರಿಗಳು ಸೂಚಿಸಿದರು.

ಅದರಂತೆ, ಬ್ಯಾಲೆಟ್‌ ಯುನಿಟ್‌, ಕಂಟ್ರೋಲ್‌ ಯುನಿಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ, ಬ್ಯಾಟರಿ ಚಾರ್ಚ್‌ ಆಗಿದೆಯೇ, ಪರಿಕರಗಳು ಸರಿಯಾಗಿವೆಯೇ ಎಂಬ ಬಗ್ಗೆ ಸಿಬ್ಬಂದಿ ಖಾತ್ರಿ ಪಡಿಸಿಕೊಂಡರು.

ಸಾರಿಗೆ ವ್ಯವಸ್ಥೆ: ಮತಗಟ್ಟೆಗೆ ತೆರಳಲು ಕೆಎಸ್‌ಆರ್‌ಟಿಸಿ ಸೇರಿದಂತೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಯಾವ ಮತಗಟ್ಟೆಗೆ ಯಾವ ಬಸ್‌ನಲ್ಲಿ ತೆರಳಬೇಕು, ಯಾವ ಮಾರ್ಗದಲ್ಲಿ ಹೋಗಬೇಕು, ಬಸ್‌ ಬಿಡುವ ಸಮಯ, ತಲುಪಬೇಕಾದ ಸಮಯ ಹೀಗೆ ಎಲ್ಲ ಮಾಹಿತಿಗಳನ್ನು ಸಿಬ್ಬಂದಿಗೆ ನೀಡಿ ಕಡ್ಡಾಯವಾಗಿ ಪಾಲಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದರು. ಅದರಂತೆ, ಮಧ್ಯಾಹ್ನ ಭೋಜನ ಮುಗಿಸಿಕೊಂಡು ಸಿಬ್ಬಂದಿ ಮತಗಟ್ಟೆಗಳತ್ತ ಪಯಣ ಬೆಳೆಸಿದರು.

ಅಚ್ಚುಕಟ್ಟಾದ ವ್ಯವಸ್ಥೆ: ಈ ಬಾರಿಯ ಮಸ್ಟರಿಂಗ್ ಕಾರ್ಯ ಗೊಂದಲಗಳಿಲ್ಲದೆ ನಡೆಯಿತು. ಮಸ್ಟರಿಂಗ್ ಕೇಂದ್ರಗಳಿಗೆ ಸಿಬ್ಬಂದಿಯನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು, ಯಾವ ಮತಗಟ್ಟೆಗೆ ತೆರಳಬೇಕು ಎಂಬ ಸೂಚನೆಯನ್ನು ನೀಡಲಾಯಿತು. ಟೇಬಲ್‌, ಕುರ್ಚಿ, ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯ ವ್ಯವಸ್ಥೆ ಇತ್ತು.

ಉಪಾಹಾರ, ಭೋಜನ: ಉಪಾಹಾರ ಹಾಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕುಡಿಯಲು ಶುದ್ಧ ನೀರು ನೀಡಲಾಯಿತು. ಈ ಬಾರಿ ಮಸ್ಟರಿಂಗ್ ಪ್ರಕ್ರಿಯೆ ಸುವ್ಯವಸ್ಥಿತವಾಗಿತ್ತು. ಗೊಂದಲ, ಸಮಸ್ಯೆಗಳೂ ಎದುರಾಗಲಿಲ್ಲ ಎಂದು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪ್ರಾಧ್ಯಾಪಕ ಎ.ಬಿ.ರಾಮಚಂದ್ರಪ್ಪ ಹೇಳಿದರು.

ಮೆಡಿಕಲ್‌ ಕಿಟ್‌: ಸಿಬ್ಬಂದಿಗೆ ಅನಾರೋಗ್ಯ ಎದುರಾದರೆ, ಬಳಸಿಕೊಳ್ಳಲು ಮೆಡಿಕಲ್‌ ಕಿಟ್‌ ವಿತರಿಸಲಾಗಿದೆ. ಅದರಲ್ಲಿ ಒಆರ್‌ಎಸ್‌ ಪಾಕೆಟ್‌ಗಳು, ಗ್ಲುಕೋಸ್‌, ಕೆಮ್ಮು, ಶೀತ, ತಲೆನೋವು, ಮೈಕೈ ನೋವು, ಜ್ವರ ನಿವಾರಕ ಮಾತ್ರೆಗಳನ್ನು ನೀಡಲಾಗಿದೆ. ಜತೆಗೆ ಇತರ ತುರ್ತು ಔಷಧಗಳನ್ನು ಪೂರೈಕೆ ಮಾಡಲಾಗಿದೆ ಎಂದರು ಸಿಬ್ಬಂದಿ.

ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಹಲವು ಹಂತಗಳಲ್ಲಿ ತರಬೇತಿ ನೀಡಿದೆ. ಜತೆಗೆ ಆತ್ಮವಿಶ್ವಾಸವನ್ನೂ ತುಂಬಿದೆ. ಇದುವರೆಗೂ ಸಮಸ್ಯೆ ಎದುರಾಗಿಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

‘ಮಕ್ಕಳನ್ನು ಕರೆತಂದಿದ್ದರು’

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹಲವು ಪೋಷಕರು ಮಕ್ಕಳೊಂದಿಗೆ ಮಸ್ಟರಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂತು. ಮಕ್ಕಳನ್ನು ಒಂಟಿಯಾಗಿ ಮನೆಯಲ್ಲೇ ಬಿಟ್ಟುಹೋಗಲು ಸಾಧ್ಯವಿಲ್ಲ. ಮತ್ತೊಂದೆಡೆ ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲೇ ಬೇಕಿರುವುದರಿಂದ ಅವರನ್ನೂ ಕರೆತಂದಿರುವುದಾಗಿ ಪೋಷಕರು ತಿಳಿಸಿದರು.

‘ಕಠಿಣ ನಿಯಮ’

ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷಗಳಾಗದಂತೆ ಚುನಾವಣಾ ಆಯೋಗ ಕಠಿಣ ನಿಯಮಗಳನ್ನು ಹಾಕಿದೆ. ಮಸ್ಟರಿಂಗ್ ಕಾರ್ಯದಲ್ಲಿ ಮತದಾನ ಪರಿಕರಗಳನ್ನು ಪಡೆದ ಸಿಬ್ಬಂದಿಯು ಕಡ್ಡಾಯವಾಗಿ ಸೂಚಿಸಿದ ಬಸ್‌ನಲ್ಲಿಯೇ ಮತಗಟ್ಟೆಗೆ ತೆರಳಬೇಕು. ಬಳಿಕ ಕೇಂದ್ರದೊಳಗೆ ಗಾಳಿ–ಬೆಳಕಿನ ವ್ಯವಸ್ಥೆ ನೋಡಿಕೊಂಡು ಪರಿಕರಗಳನ್ನು ಇರಿಸಬೇಕು. ಮುಖ್ಯವಾಗಿ ಮತಚಲಾಯಿಸುವ ಬ್ಯಾಲೆಟ್‌ ಯಂತ್ರವನ್ನು ಹೊರಗಿನವರಿಗೆ ಕಾಣದಂತೆ ಮರೆಯಾಗಿ ಇಡಬೇಕು.

ಮತದಾನ ಮುಗಿದು, ಡಿ–ಮಸ್ಟರಿಂಗ್ ಕಾರ್ಯ ಪೂರ್ಣಗೊಳ್ಳುವರೆಗೂ ಮನೆಗೆ ತೆರಳುವಂತಿಲ್ಲ.  ಅಧಿಕಾರಿಗಳನ್ನು ಬಿಟ್ಟರೆ ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಕಡ್ಡಾಯವಾಗಿ ಮತಗಟ್ಟೆಯಲ್ಲಿಯೇ ರಾತ್ರಿ ವಾಸ್ತವ್ಯ ಮಾಡಬೇಕು. ಅಲ್ಲಿಯೇ ತಯಾರಿಸಿದ ಊಟ ಮಾಡಬೇಕು. ಮತದಾನ ಮುಗಿದ ಬಳಿಕ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರಗಳನ್ನು ಒಪ್ಪಿಸಿದ ನಂತರವಷ್ಟೆ ಮನೆಗೆ ತೆರಳಬೇಕು ಎನ್ನುತ್ತಾರೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT