ಗುರುವಾರ , ಮಾರ್ಚ್ 4, 2021
17 °C
ಸೇಡಂ: ಸಂಪೂರ್ಣ ಮಹಿಳಾ ಸಿಬ್ಬಂದಿ ನಿಯೋಜನೆ

ಸಖಿ ಮತಗಟ್ಟೆಗೆ ಗುಲಾಬಿ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಖಿ ಮತಗಟ್ಟೆಗೆ ಗುಲಾಬಿ ಬಣ್ಣ

ಸೇಡಂ: ಪಟ್ಟಣದ ವಿದ್ಯಾನಗರ ಬಡಾವಣೆ ಮತಗಟ್ಟೆ ಸಂಖ್ಯೆ 109ಕ್ಕೆ ಪಿಂಕ್ (ಗುಲಾಬಿ) ಬಣ್ಣ ಬಳಿದು ವಿಶೇಷವಾಗಿ ಅಲಂಕೃತಗೊಳಿಸುವ ಮೂಲಕ ಗಮನ ಸೆಳೆಯಲಾಗಿದೆ.

ಮತಗಟ್ಟೆ ಕೇಂದ್ರ ಎರಡು ಕೋಣೆ ಹೊಂದಿದ್ದು, ಸಂಪೂರ್ಣ ಪಿಂಕ್ ಬಣ್ಣ ಬಳಿಯಲಾಗಿದೆ. ಗೋಡೆಯ ಮೇಲೆ ಮತದಾನಕ್ಕೆ ಸಂಬಂಧಿಸಿದಂತೆ ‘ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಹೆಮ್ಮೆಯಿಂದ’ ಹಾಗೂ ‘ನಮ್ಮ ಮತವೇ ನಮ್ಮ ಧ್ವನಿ’ ಎಂಬ ಜಾಗೃತಿ ಸಂದೇಶಗಳನ್ನು ಬರೆಯಲಾಗಿದೆ. ಗೋಡೆಯ ಮೇಲೆ ಯುವತಿಯೊಬ್ಬಳು ವೃದ್ಧ ಮಹಿಳೆಯನ್ನು ಮತದಾನ ಕೇಂದ್ರಕ್ಕೆ ಕರೆತರುವ ಚಿತ್ರ ಬಿಡಿಸಲಾಗಿದೆ.

ಪಕ್ಕದ ಗೋಡೆಯ ಮೇಲೆ ಲಂಬಾಣಿ ಸಮುದಾಯದ ಮಹಿಳೆಯರು ಮತದಾನ ಮಾಡಿ ತೋರು ಬೆರಳು ತೋರಿಸುವ ಚಿತ್ರವನ್ನು ಬಿಡಿಸಲಾಗಿದೆ. ಅದರ ಪಕ್ಕದಲ್ಲಿ ಮಗು ಹೊತ್ತ ಮಹಿಳೆಯ ಚಿತ್ ಬಿಡಿಸಿ ಮುಂದಿನ ‘ಪೀಳಿಗೆಗೆ ನಮ್ಮ ಮತ ಗಟ್ಟಿಧ್ವನಿ’ ಎಂಬ ಸಂದೇಶ ಬರೆಯಲಾಗಿದೆ. ಬಾಗಿಲ ಹೊರಗಡೆ ಪಿಂಕ್ ಕಲರ್ ಶಾಮಿಯಾನ ಹಾಕಲಾಗಿದ್ದು, ಬಾಗಿಲಿಗೆ ಅಲಂಕಾರ ಹಾಗೂ ಅಲಂಕೃತ ವಸ್ತುಗಳನ್ನು ಪಿಂಕ್ ಕಲರ್‌ನಿಂದ ಜೋತು ಹಾಕಲಾಗಿದೆ. ಸ್ವಾಗತ ಕೋರುವ ಮಹಿಳಾ ಮೂರ್ತಿಗಳನ್ನು ಎರಡು ಕಡೆಗಳಲ್ಲಿ ಇಡಲಾಗಿದೆ. ಒಟ್ಟಾರೆ ಮತಗಟ್ಟೆ ಕೇಂದ್ರ

ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು ‘ಸಖಿ’ ಎಂದು ಹೆಸರು ಇಡಲಾಗಿದೆ.

‘ಪ್ರಜಾಪ್ರಭುತ್ವದಲ್ಲಿ ಕಡ್ಡಾಯ ಮತದಾನ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾನಗರದ ಮತಗಟ್ಟೆ ಕೇಂದ್ರಕ್ಕೆ ಪಿಂಕ್ ಬಣ್ಣ ಬಳಿಯಲಾಗಿದೆ. ವಿ‍ಶೇಷವಾಗಿ ಅಲಂಕಾರಗೊಳಿಸಲಾಗಿದೆ.

ಪಿಂಕ್ ಬಣ್ಣವನ್ನು ಮಹಿಳೆಯರು ಹೆಚ್ಚು ಇಷ್ಟಪಡುವುದರಿಂದ ಅದನ್ನು ಬಳಿಯಲಾಗಿದೆ. ಮತಗಟ್ಟೆ ಕೇಂದ್ರವನ್ನು ಅತ್ಯಂತ ವಿಶೇಷ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಅತಿ ಹೆಚ್ಚು ಮಹಿಳೆ ಮತದಾರರು ಇಲ್ಲಿದ್ದಾರೆ.ಅಲ್ಲದೆ ಸಂಪೂರ್ಣವಾಗಿ

ಮಹಿಳಾ ಸಿಬ್ಬಂದಿಯನ್ನೇ  ನಿಯೋಜಿಸಿಸಲಾಗಿದೆ’ ಎಂದು ಚುನಾವಣಾ ಅಧಿಕಾರಿ ಬಿ. ಸುಶೀಲಾ ತಿಳಿಸಿದ್ದಾರೆ.

**

ಪ್ರತಿಯೊಬ್ಬರೂ ಮತ ಚಲಾಯಿಸಲಿ ಎಂಬ ಉದ್ದೇಶದಿಂದ ವಿದ್ಯಾನಗರ ಮತಗಟ್ಟೆ ಕೇಂದ್ರವನ್ನು ಪಿಂಕ್ ಬಣ್ಣ ಬಳಿದು ಅಲಂಕೃತಗೊಳಿಸಲಾಗಿದೆ

-  ಬಿ.ಸುಶೀಲಾ, ಚುನಾವಣಾಧಿಕಾರಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.