ಮತದಾನ ಹೆಚ್ಚಳಕ್ಕೆ ವಿಶಿಷ್ಟ ಪ್ರಯತ್ನ

7
ಪ್ರಜಾಪ್ರಭುತ್ವದ ಹಬ್ಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಶೃಂಗಾರ

ಮತದಾನ ಹೆಚ್ಚಳಕ್ಕೆ ವಿಶಿಷ್ಟ ಪ್ರಯತ್ನ

Published:
Updated:

ಮಂಗಳೂರು: ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಲಾಗಿರುವ ಮತದಾನ ಪ್ರಕ್ರಿಯೆಗೆ ಎಲ್ಲ ಬಗೆಯ ಸಿದ್ಧತೆಗಳು ಪೂರ್ಣಗೊಂಡಿವೆ. ಮತಗಟ್ಟೆಯಲ್ಲಿ ಅಂಗವಿಕಲರಿಗೆ ಸೌಲಭ್ಯ, ಮಹಿಳೆಯರಿಗೆ ವಿಶೇಷ ಮತಗಟ್ಟೆ ಸೇರಿದಂತೆ ವಿಶೇಷ ಸೌಕರ್ಯಗಳನ್ನು ಒದಗಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಾರಿಯ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಮತದಾನ ಹಬ್ಬವಾಗಿ ಆಚರಿಸಲು ತೀರ್ಮಾನಿಸಿದ್ದು, ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೋತ್ಸಾಹ ನೀಡುತ್ತಿದೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಕರಾವಳಿಯಲ್ಲಿ ಮತಗಟ್ಟೆಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿದೆ. ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದ ಮತಗಟ್ಟೆಗಳಿಗೆ ತುಳು ಸಂಸ್ಕೃತಿಯ ಲೇಪ ನೀಡಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ನೆರಿಯ ಮತಗಟ್ಟೆಯಲ್ಲಿ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸ್ವಾಗತ ದ್ವಾರ ನಿರ್ಮಿಸಿದೆ. ಕೆಲ ಮತ ಕೇಂದ್ರಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಆಕರ್ಷಕಗೊಳಿಸಲಾಗಿದೆ. ಇನ್ನು ಎಥ್ನಿಕ್‌ ಮತಗಟ್ಟೆ, ಮಹಿಳಾ ಸ್ನೇಹಿ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ಬುಡಕಟ್ಟು ಸಮುದಾಯ ಹೆಚ್ಚು ವಾಸವಿರುವ ಎಂಟು ಜಿಲ್ಲೆಗಳಲ್ಲಿ, ಸಾಂಪ್ರದಾಯಿಕ ಎಥ್ನಿಕ್‌ ಮತಗಟ್ಟೆಗಳನ್ನು ತೆರೆಯಲಾಗಿದೆ.

ಬುಡಕಟ್ಟು ಸಮುದಾಯ ಮತ ಚಲಾಯಿಸಲು ಈ ಕೇಂದ್ರಗಳಿಗೆ ತೆರಳಬಹುದಾಗಿದ್ದು, ಈ ಮತಗಟ್ಟೆಗಳನ್ನು ಸಾಂಪ್ರದಾಯಿಕವಾಗಿ ವಿನ್ಯಾಸಗೊಳಿಸಲಾಗಿದೆ. ಬುಡಕಟ್ಟು ಜನಾಂಗ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿ ಮತ ಚಲಾಯಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಎಥ್ನಿಕ್ ಬೂತ್‌ಗಳನ್ನು ತೆರೆಯಲಾಗಿದೆ.

ಬೆಳ್ತಂಗಡಿ ಕ್ಷೇತ್ರದ ನೆರಿಯ, ಮೂಡುಬಿದಿರೆ ಕ್ಷೇತ್ರದ ಕೆರೆಕಾಡು ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರು ಉತ್ತರ ಕ್ಷೇತ್ರದ ಸುರತ್ಕಲ್‌ನ ಮಧ್ಯದ ಕೇಂದ್ರಿಯ ಮಾದರಿ ವಸತಿ ಶಾಲೆ, ಪುತ್ತೂರು ಕ್ಷೇತ್ರದ ಬಲ್ನಾಡಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಕ್ಷೇತ್ರದ ಸುಬ್ರಹ್ಮಣ್ಯದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಥನಿಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

20 ಮಹಿಳಾ ಸ್ನೇಹಿ ಪಿಂಕ್‌ ಮತಗಟ್ಟೆ: ಮಹಿಳೆಯರು ಮತದಾನ ಪ್ರಕ್ರಿಯೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಜಿಲ್ಲೆಯ 8 ಕ್ಷೇತ್ರಗಳ ವ್ಯಾಪ್ತಿಯಲ್ಲಿ 20 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಕ್ಷೇತ್ರದಲ್ಲಿ ತಲಾ ಒಂದು, ಮೂಡುಬಿದಿರೆ, ಮಂಗಳೂರು ಉತ್ತರ ತಲಾ ಮೂರು, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಕ್ಷೇತ್ರದಲ್ಲಿ ತಲಾ 5 ಪಿಂಕ್‌ ಮತಗಟ್ಟೆಗಳನ್ನು ರೂಪಿಸಲಾಗಿದೆ.

ಮತ ಜಾಗೃತಿ: ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಸಂಸ್ಥೆ, ಕೆಎಂಎಫ್ ಕೂಡ ಮುಂದಾಗಿವೆ. ನಂದಿನಿ ಹಾಲಿನ ಪ್ಯಾಕೆಟ್, ಬಸ್ ಟಿಕೆಟ್ ಮೇಲೆ ಇದೇ 12ರಂದು ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶವನ್ನು ಮುದ್ರಿಸಲಾಗಿದ್ದು, ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಾಗಿದೆ.

ನಂದಿನಿ ಹಾಲು, ಮೊಸರು, ಮಜ್ಜಿಗೆಯ ಪ್ರತಿಯೊಂದು ಪ್ಯಾಕೆಟ್‌ ಮೇಲೆ ಮತಗಟ್ಟೆಗೆ ಬಂದು ಮತದಾನ ಮಾಡಿ ಎನ್ನುವ ಸಂದೇಶವನ್ನು ಮುದ್ರಿಸಲಾಗುತ್ತಿದೆ. ಇದರ ಜತೆಗೆ ಮತದಾನ ಕೇಂದ್ರಕ್ಕೆ ಬರುವಂತೆ ಆಹ್ವಾನಿಸಲು ಮದುವೆ ಆಮಂತ್ರಣ ಮಾದರಿಯ ಪತ್ರಿಕೆಗಳನ್ನು ಮುದ್ರಿಸಲಾಗಿದ್ದು, ಒಟ್ಟಾರೆ, ಈ ಬಾರಿ ಶೇ 75ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

2013 ರ ಮತದಾನದ ವಿವರ

ಒಟ್ಟು ಮತದಾರರು; 11,25,888

ಮತ ಚಲಾವಣೆ; 11,18,025

ಪುರುಷರು;  5,54,544

ಮಹಿಳೆಯರು; 5,63481

ಶೇಕಡಾವಾರು; 74.91

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry