58 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

7
ದಕ್ಷಿಣ ಕನ್ನಡ ಜಿಲ್ಲೆ: 17.11 ಲಕ್ಷ ಮಂದಿಗೆ ಮತ ಚಲಾಯಿಸುವ ಅರ್ಹತೆ

58 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

Published:
Updated:
58 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಮಂಗಳೂರು: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ನಡೆದಿದ್ದು, ಎಂಟು ಕ್ಷೇತ್ರಗಳಲ್ಲಿ ಕಣದಲ್ಲಿರುವ 58 ಅಭ್ಯರ್ಥಿಗಳ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 17,11,848 ಮಂದಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ.

ಜಿಲ್ಲೆಯ ಎಲ್ಲ ಹಾಲಿ ಶಾಸಕರು ಮತ್ತೆ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕಣದಲ್ಲಿವೆ. ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಎಂಇಪಿ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಎಂ ನಾಲ್ಕು ಕ್ಷೇತ್ರಗಳಲ್ಲಿ, ಜೆಡಿಎಸ್‌ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಹಿಂದೂ ಮಹಾಸಭಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, 17 ಮಂದಿ ಪಕ್ಷೇತರರು ಚುನಾವಣಾ ಕಣದಲ್ಲಿದ್ದಾರೆ.

ಮಂಗಳೂರು ನಗರ ದಕ್ಷಿಣ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ಅತ್ಯಧಿಕ ತಲಾ 11 ಅಭ್ಯರ್ಥಿಗಳಿದ್ದಾರೆ. ಮೂಡುಬಿದಿರೆ ಮತ್ತು ಮಂಗಳೂರು ನಗರ ಉತ್ತರದಲ್ಲಿ ತಲಾ ಏಳು, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿ ತಲಾ ಆರು ಹಾಗೂ ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ತಲಾ ಐವರು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗುರುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು. ಶುಕ್ರವಾರ ಇಡೀ ದಿನ ಆಯಾ ಪ್ರದೇಶಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ಬೆಂಬಲಿಗರು ಮನೆ, ಮನೆಗೆ ತೆರಳಿ ಮತದಾರರನ್ನು ಮನವೊಲಿಸುವ ಅಂತಿಮ ಹಂತದ ಕಸರತ್ತು ನಡೆಸಿದರು. ಜಿಲ್ಲೆಯಾದ್ಯಂತ ಮನೆ, ಮನೆ ಪ್ರಚಾರ ಬಿರುಸಾಗಿಯೇ ನಡೆಯಿತು.

ಮತದಾನದ ಹಿಂದಿನ ದಿನ ಫೇಸ್‌ಬುಕ್‌, ವಾಟ್ಸ್ ಆ್ಯಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳು, ಅವರ ಬೆಂಬಲಿಗರು ಬಿರುಸಾಗಿಯೇ ಪ್ರಚಾರ ನಡೆಸಿದರು. ತಮಗೇ ಮತ ನೀಡುವಂತೆ ಹಾಗೂ ವಿರೋಧ ಪಕ್ಷಗಳನ್ನು ತಿರಸ್ಕರಿಸುವಂತೆ ಮನವಿ ಮಾಡುವ ಸಂದೇಶಗಳು ಭಾರಿ ಸಂಖ್ಯೆಯಲ್ಲಿ ಹರಿದಾಡಿದವು.

ಮತಗಟ್ಟೆ ಸಿದ್ಧತೆ ಜೋರು:

ಜಿಲ್ಲೆಯ 1,858 ಮತಗಟ್ಟೆಗಳಲ್ಲಿ ಶಾಂತಿಯುತ ಮತ್ತು ಸುಗಮ ಮತದಾನ ಪ್ರಕ್ರಿಯೆ ನಡೆಸುವುದಕ್ಕಾಗಿ 13,176 ಮತಗಟ್ಟೆ ಸಿಬ್ಬಂದಿ ಹಾಗೂ ಏಳು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಹಂತದ ಮತಗಟ್ಟೆ ಸಿಬ್ಬಂದಿ ಹಂಚಿಕೆ ಹಾಗೂ ಮತಯಂತ್ರಗಳ ವಿತರಣೆ ಶುಕ್ರವಾರ ಬೆಳಿಗ್ಗೆ ನಗರದಲ್ಲೇ ನಡೆಯಿತು.

ಮೂಡುಬಿದರೆ ಕ್ಷೇತ್ರಕ್ಕೆ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ, ಮಂಗಳೂರು ಉತ್ತರ ಕ್ಷೇತ್ರಕ್ಕೆ ರೊಸಾರಿಯೋ ಪದವಿಪೂರ್ವ ಕಾಲೇಜಿನಲ್ಲಿ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಉರ್ವದ ಕೆನರಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಮಂಗಳೂರು ಕ್ಷೇತ್ರಕ್ಕೆ ಬಂಟ್ಸ್‌ ಹಾಸ್ಟೆಲ್‌ನ ರಾಮಕೃಷ್ಣ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಿಬ್ಬಂದಿ, ಮತಯಂತ್ರಗಳ ಹಂಚಿಕೆ ನಡೆಯಿತು.

ಬೆಳ್ತಂಗಡಿ ಕ್ಷೇತ್ರಕ್ಕೆ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಬಂಟ್ವಾಳ ಕ್ಷೇತ್ರಕ್ಕೆ ಮೊಡಂಕಾಪುವಿನ ಇನ್‌ಫೆಂಟ್‌ ಜೀಸಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆ, ಪುತ್ತೂರು ಕ್ಷೇತ್ರಕ್ಕೆ ತೆಂಕಿಲದ ವಿವೇಕಾನಂದ ಇಂಗ್ಲಿಷ್‌ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಳ್ಯ ಕ್ಷೇತ್ರಕ್ಕೆ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಸಿಬ್ಬಂದಿ ಹಾಗೂ ಮತಯಂತ್ರಗಳ ಹಂಚಿಕೆ ಮಾಡಲಾಯಿತು.

ಮಸ್ಟರಿಂಗ್‌ ಕೇಂದ್ರಗಳಿಂದ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ ಮತ್ತು ಮತಗಟ್ಟೆ ಸಲಕರಣೆಗಳೊಂದಿಗೆ ಹಂತ ಹಂತವಾಗಿ ಹೊರಟ ಚುನಾವಣಾ ಸಿಬ್ಬಂದಿ ಆಯಾ ಮತಗಟ್ಟೆಗಳನ್ನು ತಲುಪಿದ್ದಾರೆ. ಸಂಜೆಯ ವೇಳೆಗೆ ಎಲ್ಲ ಕಡೆಗಳಲ್ಲೂ ಮತಗಟ್ಟೆಯನ್ನು ಸಜ್ಜುಗೊಳಿಸುವ ಕೆಲಸ ಆರಂಭವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry