ಬಸ್‌ಗಳಿಲ್ಲದೆ ಪರದಾಡಿದ ಪ್ರಯಾಣಿಕರು

7
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ 198 ಕೆ.ಎಸ್‌.ಆರ್‌.ಟಿ.ಸಿ. ಬಸ್‌

ಬಸ್‌ಗಳಿಲ್ಲದೆ ಪರದಾಡಿದ ಪ್ರಯಾಣಿಕರು

Published:
Updated:

ಶಿವಮೊಗ್ಗ: ವಿಧಾನಸಭೆ ಚುನಾವಣೆಗಾಗಿ ಸರ್ಕಾರಿ ಬಸ್‌ಗಳನ್ನು ಬಳಸಿಕೊಂಡಿರುವುದರಿಂದ ಶಿವಮೊಗ್ಗದಿಂದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರು ಶುಕ್ರವಾರ ಪರದಾಡುವಂತಾಯಿತು.

ಚುನಾವಣೆ ನಿಮಿತ್ತ ಬಸ್‌ಗಳು ಮತಗಟ್ಟೆಗಳಿಗೆ ತೆರಳಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಸ್ ಸಂಪರ್ಕ ವಿರಳವಾಗಿತ್ತು. ದೂರದ ಊರುಗಳಿಗೆ ತೆರಳಲು ಬಸ್‌ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೆ ಕಾದು ಕಾದು ಹೈರಾಣಾದರು. ಪೂರ್ವ ಮಾಹಿತಿ ಇಲ್ಲದೇ ಬಸ್‌ನಿಲ್ದಾಣಕ್ಕೆ ಬಂದ ವೃದ್ಧರು, ಮಹಿಳೆಯರೂ ತಮ್ಮ ಊರಿಗೆ ತಲುಪಲು ಹರಸಾಹಸ ಪಟ್ಟರು.

ಪಟ್ಟಣಕ್ಕೆ ಬಂದಿದ್ದ ಬಹುತೇಕ ಜನ ಬಸ್‌ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮತ್ತೆ ಕೆಲವು ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಖಾಸಗಿ ಬಸ್‌, ಜೀಪ್, ಟಂಟಂಗಳ ಮೊರೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶಿವಮೊಗ್ಗ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಘಟಕದಲ್ಲಿ ಒಟ್ಟು 300 ಬಸ್‌ಗಳಿದ್ದು, ಈ ಪೈಕಿ 198 ಬಸ್‌ಗಳು ಚುನಾವಣೆ ಕರ್ತವ್ಯದ ಮೇಲೆ ರವಾನಿಸಲಾಗಿದೆ. ಉಳಿದ ಬಸ್‌ಗಳನ್ನು ಪ್ರಯಾಣಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಹೆಚ್ಚು ಓಡಾಡುವ ಊರುಗಳಿಗೆ ಸ್ಥಳೀಯ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಮತ ಚಲಾಯಿಸಲು ಬರುವ ಮತದಾರರಿಗೆ ಅನುಕೂಲವಾಗಲಿ ಎಂದು 30 ಬಸ್‌ಗಳನ್ನು ಕಳುಹಿಸಲಾಗಿದೆ ಎಂದು ಡಿಪೊ ಅಧಿಕಾರಿಗಳು ಮಾಹಿತಿ ನೀಡಿದರು.

ಬಸ್‌ ದರ ದುಪ್ಪಟ್ಟು

ರಾಜ್ಯ ವಿಧಾನಸಭೆ ಚುನಾವಣೆ, ರಜೆ ಹಾಗೂ ಸರ್ಕಾರಿ ಬಸ್‌ಗಳ ಕೊರತೆಯ ಲಾಭ ಪಡೆಯಲು ಮುಂದಾಗಿರುವ ಕೆಲ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿವೆ. ಮತದಾನದ ಹಿನ್ನೆಲೆಯಲ್ಲಿ ಮೇ 12ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್‌ಗಳು ಪ್ರಯಾಣದರವನ್ನು ಎಂದಿಗಿಂತ ಹೆಚ್ಚಿಸಿವೆ. ಊರಿಗೆ ತೆರಳುವ ಅನಿವಾರ್ಯದಲ್ಲಿರುವ ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ಹಿಡಿಶಾಪ ಹಾಕುತ್ತಲೇ ಪ್ರಯಾಣಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry