ಶುಕ್ರವಾರ, ಫೆಬ್ರವರಿ 26, 2021
22 °C

ಕನಸು ಕಾಣದ ವಿಮರ್ಶಾಲೋಕಕ್ಕೆ ಬಂದ ‘ಸಿಪಾಯಿ’

ಸಿ. ಕೆ. ಮಹೇಂದ್ರ Updated:

ಅಕ್ಷರ ಗಾತ್ರ : | |

ಕನಸು ಕಾಣದ ವಿಮರ್ಶಾಲೋಕಕ್ಕೆ ಬಂದ ‘ಸಿಪಾಯಿ’

ಹುಬ್ಬಳ್ಳಿ: ಗಂಭೀರ ಮುಖದ ಗಿರಡ್ಡಿ ಗೋವಿಂದರಾಜ ಅವರನ್ನು ಪಿ.ಲಂಕೇಶ್‌ ‘ರಜೆಯಲ್ಲಿ ಮನೆಗೆ ಬಂದ ಸೈನಿಕ’ ಎಂದು ಕರೆದಿದ್ದರು. ತಮಗೆ ಅನ್ನಿಸಿದ್ದನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಗಿರಡ್ಡಿ, ವಿಮರ್ಶಾ ಲೋಕದೆಡೆಗೆ ನಡೆದು ಬಂದ ಸಿಪಾಯಿಯೇ ಆಗಿ ಹೋದರು.

ವಿಮರ್ಶೆಯ ಕನಸು ಕಾಣದ ಅವರು ಸೃಜನಶೀಲ ಬರಹಗಾರನಾಗಬೇಕೆಂಬ ಕನಸು ಸಣ್ಣವನಿರುವಾಗಲೇ ಕಂಡಿದ್ದರು. ಆದರೆ ಸಂಕ್ರಮಣ ಪತ್ರಿಕೆ ಅವರನ್ನು ವಿಮರ್ಶಕನಾಗಿ ಮಾಡಿತು. ಈ ರೀತಿ ಸೃಜನಶೀಲತೆಯ ಕನಸಿನಿಂದ ವಿಮರ್ಶೆಯಡೆಗೆ ನಡೆದು ಬಂದವರು ಅವರು.

‘ಗಿರಡ್ಡಿ ಅವರ ವಿಮರ್ಶಾ ಬರಹಗಳನ್ನು ಓದಿದ್ದ ನಾನು ಅವರನ್ನು ಗಂಡುಮುಖದ, ಬಿಗಿ ಹುಬ್ಬಿನ ಮನುಷ್ಯನೆಂದು ಕಲ್ಪಿಸಿಕೊಂಡಿದ್ದೆ. ಅವರ ಒಡನಾಟದ ನಂತರ ಅವರು ಗೆಳೆಯರ ಬಳಿ ಹರಟೆ ಹೊಡೆಯುವಾಗ ಅವರ ತುಂಟತನ, ಹಾಸ್ಯ ಪ್ರಜ್ಞೆ ಅವರ ಬರವಣಿಗೆಯಲ್ಲಿ ಏಕೆ ಕಾಣಲಿಲ್ಲ ಎಂದು ಅನ್ನಿಸುತ್ತದೆ’ ಎಂದು ವಿಮರ್ಶಕ ಟಿ.ಪಿ.ಅಶೋಕ ತಮ್ಮ ಬರಹದಲ್ಲಿ ನೆನಪಿಸಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಓದಿದ್ದಕ್ಕಿಂತಲೂ ಇಂಗ್ಲಿಷ್‌ ಸಾಹಿತ್ಯ ಓದಿದ್ದೇ ಹೆಚ್ಚು ಎನ್ನುತ್ತಿದ್ದ ಗಿರಡ್ಡಿ, ಇಂಗ್ಲಿಷ್‌ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಬಳಿಕವೇ ಕನ್ನಡ ಸಾಹಿತ್ಯವನ್ನು ಹೆಚ್ಚು ಓದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಸೃಜನಶೀಲ ಬರಹಗಾರನ ಕನಸು ಕಾಣುವಾಗ ಅನಕೃ ಪ್ರಭಾವ ಇತ್ತು. ಕಾಲೇಜು ದಿನಗಳಲ್ಲಿ ಅನಕೃ ಅವರ ಪ್ರಭಾವದಿಂದ ದೂರವಾದ ಅವರು, ನಂತರ ಕೀರ್ತಿನಾಥ ಕುರ್ತಕೋಟಿ, ಟಿ.ಎಸ್‌.ಎಲಿಯಟ್‌ ಪ್ರಭಾವಕ್ಕೆ ಒಳಗಾಗಿದ್ದನ್ನು ಅವರೇ ಹೇಳಿಕೊಂಡಿದ್ದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ  ಅಧ್ಯಾಪಕರಾಗಿದ್ದಾಗ ಚಂಪಾ, ಪಟ್ಟಣಶೆಟ್ಟಿ ಅವರೊಂದಿಗೆ ಸೇರಿಕೊಂಡು ಸಂಕ್ರಮಣ ದ್ವೈಮಾಸಿಕ ಪತ್ರಿಕೆ ತಂದರು. ಈ ಪತ್ರಿಕೆ ಸಾಹಿತ್ಯ ಲೋಕದಲ್ಲಿ ಒತ್ತಿದ ಛಾಪು ಹೊಸದಾಗಿ ಹೇಳಬೇಕಾಗಿಲ್ಲ. ಸಂಕ್ರಮಣದ ಸಂಪಾದಕನಾಗಿದ್ದಾಗಲೇ ‘ಗಿರಡ್ಡಿ ಎಂಬ ವಿಮರ್ಶಾಲೋಕ’ ತೆರೆದುಕೊಳ್ಳಲು ಸಾಧ್ಯವಾಯಿತು. ಸಣ್ಣವನಿದ್ದಾಗಲೇ ಕನ್ನಡದ ಸಾಹಿತ್ಯ ಲೋಕಕ್ಕೆ ಆಕರ್ಷಿತರಾಗಿದ್ದ ಅವರು ಕಥೆ, ಕವನಗಳನ್ನು ಓದುತ್ತಿದ್ದರು. ಅಲ್ಲಿಯೇ  ಸೃಜನಶೀಲ ಬರಹಗಾರನಾಗಬೇಕೆಂಬ ಅವರ ಆಸೆ ಚಿಗುರುತ್ತಿತ್ತು. ಆದರೆ ಆದದ್ದು, ಸಾಹಿತ್ಯಲೋಕ ಗುರುತಿಸಿದ್ದು, ಕನ್ನಡದ ಗಂಭೀರ ವಿಮರ್ಶಕನೆಂದೇ.

‘ಸಂಕ್ರಮಣ’ದ ಸಂಪಾದಕನ ಜವಾಬ್ದಾರಿ ನನ್ನನ್ನು ವಿಮರ್ಶಕನಾಗಿ ರೂಪಿಸಿತು. ಒಂದು ಸಲ ವಿಮರ್ಶಕನಾದ ಮೇಲೆ ಅದನ್ನು ಬಿಡುವುದು ಕಷ್ಟ,  ವಿಮರ್ಶಕನನ್ನಾಗಿ ಕಟ್ಟಿ ಹಾಕಿತು ಎನ್ನುತ್ತಿದ್ದ ಅವರು ಸೃಜನಶೀಲ ಬರವಣಿಗೆಯೇ ಚೆಂದ ಎಂದೂ ಹೇಳುತ್ತಿದ್ದರು. ಅವರು ಪ್ರಬಂಧಗಳನ್ನು ರಚಿಸಲು ಸೃಜನಶೀಲ ಬರವಣಿಗೆಯ ಮೇಲಿದ್ದ ಅವರ ವ್ಯಾಮೋಹವೂ ಕಾರಣ.

ವಿಮರ್ಶೆಯ ಖುಷಿ ಬೇರೆ, ಸೃಜನಶೀಲ ಬರಹದ ಖುಷಿ ಬೇರೆ ಎಂದು ಅವರು ಬಲವಾಗಿ ನಂಬಿದ್ದರು. ಒತ್ತಾಯಕ್ಕೆ ಕಟ್ಟುಬಿದ್ದು ಮಾಡಿದ್ದ ವಿಮರ್ಶೆಯೇ ಹೆಚ್ಚು. ‘ಸಣ್ಣ ಕಥೆಯ ಹೊಸ ಒಲವುಗಳು’, ‘ವಚನ ವಿನ್ಯಾಸ’, ‘ಕನ್ನಡ ಕಾವ್ಯಪರಂಪರೆ’, ‘ಬೇಂದ್ರೆಯವರ ಕಾವ್ಯ’ ತಮ್ಮ ಇಷ್ಟದ ವಿಮರ್ಶೆಗಳು ಎನ್ನುತ್ತಿದ್ದರು.

ಬಂಡಾಯ ಸಾಹಿತ್ಯ ಅವರಿಗೆ ಇಷ್ಟವಾಗುತ್ತಿರಲಿಲ್ಲ ಎನ್ನುವುದಕ್ಕಿಂತಲೂ ಸಾಹಿತ್ಯದ ಸೃಜನಶೀಲತೆ ಅಲ್ಲಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಅವರು ಎಂದೂ ಯಾರೊಂದಿಗೂ ರಾಜೀ ಮಾಡಿಕೊಳ್ಳದ ಬಂಡಾಯಗಾರರೇ ಆಗಿದ್ದರು. 1970ರಲ್ಲಿ ಕಲಬುರ್ಗಿಯಲ್ಲಿ ಪ್ರಾಧ್ಯಾಪರಾಗಿದ್ದಾಗ ಅಲ್ಲಿನ ಸ್ನೇಹಿತರೊಂದಿಗೆ ಸೇರಿ  ’ರಂಗ ಮಾಧ್ಯಮ’ ರಂಗ ತಂಡ ಕಟ್ಟಿದ್ದರು.

ದಕ್ಷಿಣ ಕನ್ನಡದಲ್ಲಿ ಆಗುತ್ತಿರುವ ಬಲಪಂಥೀಯ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು. ಸಂಶೋಧಕ ಎಂ.ಎಂ.ಕಲಬುರ್ಗಿ ಹಂತಕರನ್ನು ಸರ್ಕಾರ ಪತ್ತೆ ಮಾಡದ ಬಗ್ಗೆಯೂ ಅವರಲ್ಲಿ ಬೇಸರವಿತ್ತು. ಅದೇ ರೀತಿ ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದಲ್ಲಿ ಸ್ವತಂತ್ರ ಸಂಶೋಧನಾ ಸಂಸ್ಥೆ ಆರಂಭಿಸಬೇಕೆಂಬ ಅವರ ಆಸೆಯೂ ಈಡೇರಲಿಲ್ಲ. ಈ ಬಗ್ಗೆ ಅವರು ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದರು. ಸರ್ಕಾರ ಯಾವುದೇ ನಿಲುವು ವ್ಯಕ್ತಪಡಿಸದ ಬಗ್ಗೆಯೂ ಅವರಲ್ಲಿ ನೋವಿತ್ತು. ಎಡ–ಬಲ ಯಾವುದೂ ಬೇಡ ಎನ್ನುತ್ತಿದ್ದ ಅವರು ನಿಜವಾದ ಮಾನವೀಯತೆಯ ಪರವಾದ ದೀಪವಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.