ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ತಟ್ಟಿದ ಚುನಾವಣಾ ಬಿಸಿ

ಬಸ್ ಇಲ್ಲದ ನಿಲ್ದಾಣದಲ್ಲಿ ಗಂಟೆ ಗಟ್ಟಲೆ ಪರದಾಡಿದ ಪ್ರಯಾಣಿಕರು, ನಿಂತ್ಕೊಂಡು ಹೋಗೋಣ ಎನ್ನುವವರಿಗೂ ಬಸ್ ಸಿಗಲಿಲ್ಲ
Last Updated 12 ಮೇ 2018, 6:26 IST
ಅಕ್ಷರ ಗಾತ್ರ

ತುಮಕೂರು: ಅಯ್ಯೊ ಬಸ್ ಬಂತ್ ಬಸ್... ನೋಡ್ರಿ... ಯಾವ ಊರಂತೆ? ಸೀಟ್ ಸಿಕ್ಕದೇ ಇದ್ದರೂ ಪರವಾಗಿಲ್ಲ. ನಿತ್ಕೊಂಡೇ ಹೋಗೋಣ... ಬೇಗ ಹತ್ತಿ...

ಅಯ್ಯೊ ಯಾಕಾದ್ರೂ ಬಂದ್ವೊ... ರಾತ್ರಿಯಾದರೂ ಊರು ಸೇರುತ್ತಿವೊ ಇಲ್ವೊ... ಏನ್ಮಾಡೋದು... ಟ್ಯಾಕ್ಸಿಯವರಿಗೆ ಸಾವಿರಾರು ಕೊಟ್ಟು ಹೋಗೋಕಾಗುತ್ತಾ?

ಹೀಗೆ ಭಿನ್ನ ವಿಭಿನ್ನ ರೀತಿಯಲ್ಲಿ ಚಡಪಡಿಸಿದವರು ಪ್ರಯಾಣಿಕರು. ಶನಿವಾರ ನಡೆಯಲಿರುವ ಚುನಾವಣೆಗೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಸಾರಿಗೆ ನಿಗಮದ ಬಸ್‌ಗಳನ್ನು ಚುನಾವಣಾ ಆಯೋಗ ಬಳಸಿಕೊಂಡಿರುವುದೇ ಇದಕ್ಕೆ ಕಾರಣ. ಬಸ್ ಸಿಗದೇ ಗೋಳಾಡಿದ ಪ್ರಯಾಣಿಕರು ಚುನಾವಣೆ ಯಾಕಾದ್ರೂ ಬಂತಪ್ಪಾ? ಎಂದು ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಸಂಜೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಗಂಟೆ ಗಟ್ಟಲೆ ಕಾದು ನಿಂತಿದ್ದ ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು.

ಆಗೊಂದು ಈಗೊಂದು ದೂರ ಮಾರ್ಗದ ಬಸ್ ಬಂದರೂ ನುಗ್ಗಿ ಪ್ರಯಾಣಿಕರು ಹತ್ತುತ್ತಿದ್ದುದು ಕಂಡು ಬಂದಿತು. ಮಹಿಳೆಯರು, ವೃದ್ಧರು ಹೀಗೆ ನುಗ್ಗಿ ಬಸ್ ಹತ್ತಲಾರದೇ ಪರದಾಡಿದರು.

ಅದರಲ್ಲೂ ಅರಸೀಕೆರೆ, ಹಾಸನ, ತಿಪಟೂರು, ಹೊಸದುರ್ಗ, ಶಿವಮೊಗ್ಗದ ಕಡೆಗೆ ತೆರಳುವ ಪ್ರಯಾಣಿಕರು ಹೆಚ್ಚು ಪರದಾಡಿದರು. ಅಲ್ಲದೇ ದಾವಣಗೆರೆ, ಹುಬ್ಬಳ್ಳಿ ,ಬಳ್ಳಾರಿಗೆ ಹೋಗಬೇಕಾದ ಪ್ರಯಾಣಿಕರು ದಿಕ್ಕು ತೋಚದೇ ನಿಂತಿದ್ದರು. ಸಂಜೆಯವರೆಗೂ ಕಾಯುತ್ತೇವೆ. ಇಲ್ಲದೇ ಇದ್ದರೆ ಹೆದ್ದಾರಿಗೆ ಹೋಗಿ ಸಿಕ್ಕ ಬಸ್ ಹತ್ತಿಕೊಂಡು ಹೋಗುತ್ತೇವೆ ಎಂದು ಬಳ್ಳಾರಿಯ ವೆಂಕಟೇಶ್ ಹೇಳಿದರು.

ಎರಡು ಗಂಟೆಯಿಂದ ಬಸ್‌ಗಾಗಿ ಕಾದಿದ್ದೇವೆ. ಬಸ್ ಬಂದಿಲ್ಲ. ಅನಿವಾರ್ಯ ಕಾಯಲೇಬೇಕು ಎಂದು ದಾವಣಗೆರೆಯ ನಟರಾಜ್ ತಿಳಿಸಿದರು.

ಹಾಸನ, ತಿಪಟೂರು, ಹೊಸದುರ್ಗ, ಅರಸೀಕೆರೆ ಕಡೆಗೆ ಪ್ರತಿ ದಿನ 15 ನಿಮಿಷಕ್ಕೊಂದು ಬಸ್ ಸಂಚರಿಸುತ್ತಿದ್ದವು. ಇಂದು 2 ಗಂಟೆಗೊಂದು ಬಸ್ ಬರುತ್ತಿಲ್ಲ ಎಂದು ಪ್ರಯಾಣಿಕರು ದೂರಿದರು.

ಜಿಲ್ಲೆಯಲ್ಲಿ 433 ಬಸ್ ಬಳಕೆ

ತುಮಕೂರು ಜಿಲ್ಲೆಯ ವಿವಿಧ ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ಕರೆದೊಯ್ಯಲು 433 ಬಸ್, 120 ಮಿನಿ ಬಸ್‌ಗಳನ್ನು ಚುನಾವಣಾ ಆಯೋಗವು ತೆಗೆದುಕೊಂಡಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಸಾರಿಗೆ ನಿಗಮದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ. ಪ್ರಯಾಣಿಕರಿಗೆ ಅನನುಕೂಲ ಆಗದಂತೆ 140 ಬಸ್‌ಗಳನ್ನು ಸಂಚಾರಕ್ಕೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT