ಭಾನುವಾರ, ಮಾರ್ಚ್ 26, 2023
31 °C

ಮತದಾನದ ಜಾಗೃತಿಗೆ ಲೇಸರ್‌ ಲೈಟ್ ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನದ ಜಾಗೃತಿಗೆ ಲೇಸರ್‌ ಲೈಟ್ ಷೋ

ಮಂಡ್ಯ: ಮತದಾರರ ಕರ್ತವ್ಯಗಳು, ವಿದ್ಯುನ್ಮಾನ ಮತಯಂತ್ರ, ಮತ ಖಾತರಿ ಯಂತ್ರ ಬಳಕೆ ಕುರಿತು ಶುಕ್ರವಾರ ಸಂಜೆ ನಗರದ ಕಲಾಮಂದಿರದಲ್ಲಿ ನಡೆದ ಲೇಸರ್‌ ಷೋನಲ್ಲಿ ಜಾಗೃತಿ ಮೂಡಿಸಲಾಯಿತು.

ಕತ್ತಲೆ–ಬೆಳಕಿನ ನಡುವೆ ಮೂಡಿ ಬಂದ ಬೆಳಕಿನ ಕಿರಣಗಳು ಮತದಾರರ ಕರ್ತವ್ಯವನ್ನು ಒತ್ತಿ ಹೇಳಿದವು. ಮತದಾನಕ್ಕೆ ಇರುವ ಮಹತ್ವವನ್ನು ಲೇಸರ್‌ ಪ್ರದರ್ಶನದ ಮೂಲಕ ಅನಾ ವರಣಗೊಳಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ‘ಸ್ವೀಪ್’ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ‘ಶನಿವಾರ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಆ ಮೂಲಕ ಸಂವಿಧಾನ ನೀಡಿರು ಜವಾಬ್ದಾರಿ ನಿರ್ವಹಣೆ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ಹೇಳಿದರು.

‘ನಾವೆಲ್ಲರೂ ಕಡ್ಡಾಯವಾಗಿ  ಮತದಾನ ಮಾಡಬೇಕು. ಮತದಾನ ಮಾಡುವುದರಿಂದ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮತದಾನ ಮಾಡಿ ಉತ್ತಮ ವ್ಯಕ್ತಿಯನ್ನು ನಾವು ವಿಧಾನಸಭೆಗೆ ಆರಿಸುವ ಮೂಲಕ ನಮ್ಮ ಹಾಗೂ ರಾಜ್ಯದ ಅಭಿವೃದ್ಧಿಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಮತದಾನದ ಜಾಗೃತಿ ಮೂಡಿಸಲು ಶುಕ್ರವಾರ ಕೊನೆಯ ದಿನವಾಗಿದ್ದು, ಲೇಸರ್‌ ಷೊ, ಸಾಕ್ಷ್ಯ ಚಿತ್ರ ಹಾಗೂ ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್ ಮಾತನಾಡಿ ‘ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಚುನಾವಣೆ ಘೋಷಣೆಯಾದ ದಿನದಿಂದ ಅಂತಿಮ ದಿನದವರೆಗೂ ಜಿಲ್ಲೆಯಾದ್ಯಂತ ಪ್ರತಿಯೊಂದು ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಸ್ವೀಪ್ ಸಮಿತಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ಮಾಡಿ ಇವಿಎಂ ಹಾಗೂ ವಿವಿಪ್ಯಾಟ್ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲಾಗಿದೆ. ಸಾರಿಗೆ ಬಸ್‌ನಿಲ್ದಾಣ ಮತ್ತಿತರ ಪ್ರದೇಶದಲ್ಲಿ ಜಾಗೃತಿ ಮೂಡಿಸಿದ್ದೇವೆ. ಬಸ್‌ಗಳ ಮೇಲೆ ಜಾಗೃತಿ ಪತ್ರ ಅಂಟಿಸುವ ಮೂಲಕ, ಮೋಂಬತ್ತಿ ಪ್ರಚಾರ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.