ಇಂದು ಮತಯಂತ್ರದಲ್ಲಿ ಅಭ್ಯರ್ಥಿ ‘ಭವಿಷ್ಯ’

7
ವಿಧಾನಸಭೆ ಚುನಾವಣೆ ಮತದಾನಕ್ಕೆ 1,269 ಮತಗಟ್ಟೆಗಳ ಸಜ್ಜು, ಗಮನ ಸೆಳೆಯುತ್ತಿರುವ ‘ಸಖಿ’ ಕೇಂದ್ರಗಳು

ಇಂದು ಮತಯಂತ್ರದಲ್ಲಿ ಅಭ್ಯರ್ಥಿ ‘ಭವಿಷ್ಯ’

Published:
Updated:

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯ ಮತದಾನ ಶನಿವಾರ (ಮೇ 12) ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ನಡೆಯಲಿದೆ. ಜಿಲ್ಲೆಯ ಐದು ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿರುವ 77 ಅಭ್ಯರ್ಥಿಗಳ ‘ಭವಿಷ್ಯ’ ಇಂದು ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಜಿಲ್ಲೆಯಲ್ಲಿ 5,05,089 ಪುರುಷ, 5,05,542 ಮಹಿಳೆ ಮತ್ತು 104 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,10,735 ಮತದಾರರಿದ್ದಾರೆ. ಮತದಾನಕ್ಕಾಗಿ ಜಿಲ್ಲೆಯಾದ್ಯಂತ 14 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,419 ಮತಗಟ್ಟೆ ಅಧಿಕಾರಿ, 1,192 ಸಹಾಯಕ ಮತಗಟ್ಟೆ ಅಧಿಕಾರಿ, 4,483 ಮತಗಟ್ಟೆ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಚುನಾವಣೆಗೆ ನಿಯೋಜಿತ ಅಧಿಕಾರಿ ಗಳು ಮತ್ತು ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಸಂಬಂಧಪಟ್ಟ ಮಸ್ಟರಿಂಗ್ (ಮತದಾನದ ಹಿಂದಿನ ದಿನ ಮತಯಂತ್ರಗಳನ್ನು ಇಡುವ ಕೇಂದ್ರ) ಕೇಂದ್ರಕ್ಕೆ ತೆರಳಿ ತಮ್ಮ ನಿಯೋಜಿತ ಸ್ಥಳದ ಮಾಹಿತಿಯನ್ನು ಪಡೆದುಕೊಂಡರು.

ಬಳಿಕ ಮತಯಂತ್ರ, ಮತ ಖಾತರಿ ಯಂತ್ರ, ನಿಯಂತ್ರಣ ಘಟಕ, ಅಳಿಸಲಾಗದ ಶಾಹಿ, ವಿವಿಧ ಲಕೋಟೆ, ಘೋಷಣಾ ಪತ್ರಗಳು, ಕೈಪಿಡಿ, ರಬ್ಬರ್ ಮೊಹರು, ಸ್ಟೇಷನರಿ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆದು ಪರಿಶೀಲನೆ ನಡೆಸಿದರು.

ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಸಂಪ ನ್ಮೂಲ ವ್ಯಕ್ತಿಗಳು ಮತಗಟ್ಟೆಯಲ್ಲಿ ಪಾಲಿಸಬೇಕಾದ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಸಿಬ್ಬಂದಿ ಅರೆಸೇನಾ ಪಡೆ ಯೋಧರು, ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಜತೆ ವಾಹನಗಳಲ್ಲಿ ಸಂಬಂಧಪಟ್ಟ ಮತಗಟ್ಟೆಗಳತ್ತ ಪ್ರಯಾಣ ಬೆಳೆಸಿದರು.

ಪ್ರತಿ ಮಸ್ಟರಿಂಗ್ ಕೇಂದ್ರದಲ್ಲಿ ಸಿಬ್ಬಂದಿಗೆ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆ ಸಿಬ್ಬಂದಿಗಳ ಪ್ರಯಾಣಕ್ಕಾಗಿ ಜಿಲ್ಲೆಯಲ್ಲಿ 293 ರಾಜ್ಯ ರಸ್ತೆ ಸಾರಿಗ ಸಂಸ್ಥೆ ಬಸ್‌ಗಳು ಸೇರಿದಂತೆ ಅನೇಕ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ಸೆಕ್ಟರ್ ಅಧಿಕಾರಿಗಳ ಎರಡು ಹೆಚ್ಚುವರಿ ಮತಯಂತ್ರಗಳನ್ನು ನೀಡಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ಮೀಸಲು ಸಿಬ್ಬಂದಿ ಕಾಯ್ದಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಮತಗಟ್ಟೆಗೆ ಒಬ್ಬ ಕಾನ್‌ಸ್ಟೆಬಲ್, ಸೂಕ್ಷ್ಮ ಕೇಂದ್ರಕ್ಕೆ ಇಬ್ಬರು, ಅತಿ ಸೂಕ್ಷ್ಮ ಕೇಂದ್ರಕ್ಕೆ ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್ ನಿಯೋಜಿಸಲಾಗುತ್ತಿದೆ. ಅತಿ ಹೆಚ್ಚು ಸೂಕ್ಷ ಮತಗಟ್ಟೆಗಳ ಬಳಿ ಅರೆ ಸೇನಾ ಪಡೆ ಯೋಧರನ್ನು ನಿಯೋಜಿಸಿದೆ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮೇ 13ರ ಸಂಜೆ 6 ಗಂಟೆ ವರೆಗೆ ಎಲ್ಲಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿ ಕಾರಿ ದೀಪ್ತಿ ಕಾನಡೆ ಆದೇಶ ಹೊರಡಿಸಿದ್ದಾರೆ. ಜತೆಗೆ ಶನಿವಾರ ಮಧ್ಯರಾತ್ರಿ 12 ವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡದ ಬಳಿ ಇರುವ ಷಾ ಶಿಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 15 ರಂದು ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

ಭಾವಚಿತ್ರ ನೋಡಿ ಮತ ಹಾಕಿ

ಕೆಲ ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾ ಕಣದಲ್ಲಿ ಒಂದೇ ಹೆಸರು ಹೋಲುವ ಅನೇಕ ಅಭ್ಯರ್ಥಿಗಳಿದ್ದಾರೆ. ಇದು ಅನೇಕ ಮತದಾರರಿಗೆ ಗೊಂದಲ ಮೂಡಿಸುವುದು ಸಹಜ. ಈ ಗೊಂದಲ ನಿವಾರಣೆಗಾಗಿಯೇ ಇದೇ ಮೊದಲ ಬಾರಿ ರಾಜ್ಯದಾದ್ಯಂತ ಸಾರ್ವತ್ರಿಕ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಭಾವಚಿತ್ರಗಳು ಅಚ್ಚಾಗಿವೆ.

ಮತದಾರರು ಈ ಬಾರಿ ಇವಿಎಂ ಮೇಲೆ ಇರುವ ಅಭ್ಯರ್ಥಿಯ ಹೆಸರು ಮಾತ್ರವಲ್ಲದೆ ಪಕ್ಕದಲ್ಲಿಯೇ ಇರುವ ಅವರ ಭಾವಚಿತ್ರವನ್ನು ನೋಡಿ ತಮ್ಮ ಅಭ್ಯರ್ಥಿಯನ್ನು ಖಚಿತಪಡಿಸಿಕೊಂಡು ಗೊಂದಲವಿಲ್ಲದೆ ಮತ ಚಲಾಯಿಸಬಹುದು.

ಎಲ್ಲವೂ ಗುಲಾಬಿಮಯ...

ಮಹಿಳಾ ಸಬಲೀಕರಣದ ಸಂದೇಶ ಸಾರುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಬಾರಿ ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳನ್ನು ಗುರುತಿಸಿ ಅವುಗಳಲ್ಲಿ ಆಯ್ದ ಮತಗಟ್ಟೆಗಳಿಗೆ ‘ಸಖಿ’ ಮತಗಟ್ಟೆಗಳು ಎಂದು ನಾಮಕರಣ ಮಾಡಿ ಅಲ್ಲಿ ಕರ್ತವ್ಯಕ್ಕೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದೆ.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ತಲಾ 6 ರಂತೆ ಒಟ್ಟು 30 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಮತಗಟ್ಟೆಗಳು ಸಂಪೂರ್ಣ ಗುಲಾಬಿ ಬಣ್ಣಮಯವಾಗಿದ್ದು ಜನರನ್ನು ಸೆಳೆಯುತ್ತಿವೆ. ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು ಸಹಾಯಕ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಗುಲಾಬಿ ಬಣ್ಣದ ಉಡುಗೆ ನೀಡಲಾಗಿದೆ.

ವಿಶೇಷ ರೀತಿಯಲ್ಲಿ ಅಲಂಕರಿಸಿರುವ ಈ ಮತಗಟ್ಟೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವು ಗುಲಾಬಿ ಬಣ್ಣದಿಂದ ಕೂಡಿವೆ. ಕುಡಿಯುವ ನೀರಿನ ಬಾಟಲಿ, ಪೆನ್, ಸಿಬ್ಬಂದಿ ಬಳೆ, ಬಿಂದಿ, ರಿಬ್ಬನ್‌, ಎಲ್ಲವೂ ಗುಲಾಬಿ ವರ್ಣದಿಂದ ಕೂಡಿವೆ.

ಸಂಜೆ 6ರ ಒಳಗೆ ಮತಗಟ್ಟೆಯಲ್ಲಿರಿ

ಮತದಾನ ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಒಂದೊಮ್ಮೆ ಕೊನೆಗೊಳ್ಳುವ ನಿಗದಿತ ಸಮಯದ ವೇಳೆ ಮತಗಟ್ಟೆ ಸರದಿ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಇದ್ದರೆ, ಮತಗಟ್ಟೆ ಅಧಿಕಾರಿ 6ಗಂಟೆ ಒಳಗೆ ಮತಗಟ್ಟೆ ಆವರಣದೊಳಗೆ ಇರುವವರಿಗೆ ಟೋಕನ್ ವಿತರಿಸುತ್ತಾರೆ. ಟೋಕನ್ ಪಡೆದವರು ಮಾತ್ರ ಮತದಾನ ಮಾಡಬಹುದು. ನಿಗದಿತ ಸಮಯದ ನಂತರ ಬರುವವರಿಗೆ ಮತದಾನಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ಮತ ಚಲಾಯಿಸುವವರು ಸಂಜೆ 6ರ ಒಳಗೆ ಮತಗಟ್ಟೆಗೆ ಹೋಗುವುದು ಒಳಿತು.

ಸಹಾಯ ಕೇಂದ್ರದ ನೆರವು ಪಡೆಯಿರಿ

ಮತದಾರರಿಗೆ ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ, ಇಲ್ಲವೋ ಎಂಬ ಸಂದೇಹವಿದ್ದರೆ ಮತಗಟ್ಟೆ ಬಳಿ ತೆರೆಯುವ ಮತದಾರರ ಸಹಾಯ ಕೇಂದ್ರದಲ್ಲಿ ಆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಜತೆಗೆ ಅಲ್ಲಿಯೇ ಮತದಾರರ ಚೀಟಿ ಮತ್ತು ಮಾರ್ಗದರ್ಶಿ ಸೂಚಿ ಪಡೆದುಕೊಳ್ಳಲು ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry