ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಸಮಾಜಕ್ಕೆ ಪುಸ್ತಕ ಸಂಸ್ಕೃತಿ ಪೂರಕ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ
Last Updated 12 ಮೇ 2018, 8:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಯುವಕರು ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದರಿಂದ ದೇಶದ ಭವಿಷ್ಯವನ್ನು ಇನ್ನಷ್ಟು ಸದೃಢಗೊಳಿಸಬಹುದು’ ಎಂದು ಶಿಕ್ಷಣ ತಜ್ಞ ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌, ಎನ್‌ಸಿಸಿ, ಯುವರೆಡ್‌ಕ್ರಾಸ್‌, ರೇಂಜರ್ಸ್‌ ಮತ್ತು ರೋವರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಯುವಕರು ಜ್ಞಾನ ಸಂಪಾದನೆಯ ಮಾರ್ಗವನ್ನು ಕಂಡುಕೊಳ್ಳಬೇಕು. ಅನೇಕ ಮಹನೀಯರ ಇತಿಹಾಸದ ಚರಿತ್ರೆ, ಸಂವಿಧಾನ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸುವ ಜತೆಯಲ್ಲೇ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಬೇಕು’ ಎಂದು ಹೇಳಿದರು.

‘ದೇಶದಲ್ಲಿ ಉನ್ನತ ಶಿಕ್ಷಣ ದಿನೇ ದಿನೇ ವಾಣಿಜ್ಯೀಕರಣಗೊಳ್ಳುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇವತ್ತು ಸರ್ಕಾರಿ ಕಾಲೇಜುಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಕಾಲೇಜು ಹಂತದಲ್ಲಿ ಕಲೆ, ಸಂಸ್ಕೃತಿ, ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗಲಿದೆ’ ಎಂದು ತಿಳಿಸಿದರು.

‘ಇವತ್ತು ದೇಶದ ಬಹು ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕೆಲಸವಾಗಬೇಕು. ಪ್ರತಿಯೊಂದು ಸಂಸ್ಕೃತಿ, ಸಾಂಪ್ರದಾಯಗಳಿಗೆ ಗೌರವ ನೀಡಬೇಕು. ಇವತ್ತು ಬಡವರ ಮಕ್ಕಳೂ ಶಾಲಾ, ಕಾಲೇಜುಗಳಲ್ಲಿ ಉತ್ತಮ ಅಂಕಗಳು ಗಳಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಛಲವಿದ್ದರೆ ಯಾವ ಹುದ್ದೆ ಬೇಕಾದರೂ ಅಲಂಕರಿಸಬಹುದು. ಬರೀ ಓದಿಗೆ ಸೀಮಿತವಾಗದೆ ಸಮಾಜದ ಒಳಿತಿನ ಬಗ್ಗೆ ಕೂಡ ಚಿಂತಿಸಿ ವಿದ್ಯಾರ್ಥಿಗಳು ತಮ್ಮ ಬೌದ್ಧಿಕಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಆದಿನಾರಾಯಣಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ನಿರಂತರ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕಾಲೇಜಿನ ಹಂತದಲ್ಲಿ ಶಿಕ್ಷಣದ ಜತೆಗೆ ಕಲೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆ ಇದ್ದರೆ ಸಮತೂಕದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್‌.ನಾರಾಯಣಸ್ವಾಮಿ ಮಾತನಾಡಿ, ‘ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸೋಲು–ಗೆಲುವು ಸಹಜ. ಆದರೆ, ಪ್ರತಿಯೊಬ್ಬರೂ ಗೆಲವು ಸಾಧಿಸಲೇ­ಬೇಕು ಎಂಬ ಛಲ ಹೊಂದಿದ್ದರೆ ಭವಿಷ್ಯ ಉಜ್ವಲವಾಗಿ, ಜೀವನ ಸಂತಸದಿಂದ ಸಾಗಿಸಲು ಅನುಕೂಲವಾಗುತ್ತದೆ. ಯುವಕರು ಹೆಚ್ಚೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ಸಿ.ಎಂ.ಅರುಣ್ ಕುಮಾರ್, ಕೋಲಾರ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಂಕರಪ್ಪ ಉಪಸ್ಥಿತರಿದ್ದರು.

**
ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಿಕೊಳ್ಳಲು ಪತ್ರಿಕೆಗಳು, ಮಾಧ್ಯಮಗಳನ್ನು ವೀಕ್ಷಿಸಬೇಕು. ಗ್ರಂಥಾಲಯಗಳಿಗೆ ಹೋಗಿ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು
- ಪ್ರೊ.ಕೋಡಿರಂಗಪ್ಪ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT