ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಇಂದು

ಮತದಾನ ಅವಧಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ; ಎಲ್ಲೆಡೆ ಬಿಗಿ ಬಂದೋಬಸ್ತ್‌, ಮತಗಟ್ಟೆ ತಲುಪಿದ ಸಿಬ್ಬಂದಿ
Last Updated 12 ಮೇ 2018, 9:22 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆಯಾಗಿದೆ. ಏಳೂ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 53 ಸ್ಪರ್ಧಿಗಳು ಮೇ 12ರಂದು ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

ಜಿಲ್ಲೆಯಲ್ಲಿ 14,44,045 ಮತದಾರರು ಹಕ್ಕು ಚಲಾಯಿಸಲಿದ್ದು, ಇವರಲ್ಲಿ 7,23,451 ಪುರುಷರು, 7,09,547 ಮಹಿಳೆಯರು ಹಾಗೂ 47 ಮಂದಿ ಇತರೆ ಮತದಾರರಿದ್ದಾರೆ.

ಅತಿ ಹೆಚ್ಚು ಅರಕಲಗೂಡು ಕ್ಷೇತ್ರದಲ್ಲಿ 2,10,014 ಮತದಾರರು ಇದ್ದರೆ, ಅತಿ ಕಡಿಮೆ ಬೇಲೂರು ಕ್ಷೇತ್ರದಲ್ಲಿ 1,86,531 ಮಂದಿ ಮತದಾನ ಮಾಡಲಿದ್ದಾರೆ.

ಜಿಲ್ಲೆಯಾದ್ಯಂತ 1978 ಮತಗಟ್ಟೆ ತೆರೆಯಲಾಗಿದ್ದು, ಇವುಗಳಲ್ಲಿ 23 ಸೂಕ್ಷ್ಮ, 393 ಅತಿಸೂಕ್ಷ್ಮ ಉಳಿದವು ಸಾಮಾನ್ಯ ಮತಗಟ್ಟೆ ಎಂದು ಗುರುತಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಹೆಚ್ಚುವರಿ ಭದ್ರತೆ ಹಾಕಲಾಗಿದೆ.

ಸುಗಮ ಚುನಾವಣಾ ಕಾರ್ಯಕ್ಕಾಗಿ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳನ್ನು ಒಳಗೊಂಡ 2182 ತಂಡಗಳನ್ನು ಅಣಿಗೊಳಿಸಲಾಗಿದ್ದು, ಚುನಾವಣಾ ಕಾರ್ಯಕ್ಕಾಗಿ ಅಧಿಕಾರಿಗಳು ಸೇರಿ 10,910 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

‘ಜಿಲ್ಲಾಧಿಕಾರಿ ಕಚೇರಿ, ಎಸ್‌ಪಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. 64 ಕಡೆ ವಿಡಿಯೊ ಚಿತ್ರೀಕರಣ ಮಾಡಲಾಗುವುದು. ಭದ್ರತೆಗಾಗಿ 10 ಡಿಎಸ್‌ಪಿ, 31 ಇನ್‌ಸ್ಪೆಕ್ಟರ್‌, 106 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಸೇರಿ 4500 ಕ್ಕೂ ಸಿಬ್ಬಂದಿ ನೇಮಿಸಲಾಗಿದ್ದು, ಶಾಂತ ರೀತಿಯಲ್ಲಿ ಮತದಾನ ಮಾಡುವಂತೆ’ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.

7 ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಮತ್ತು ಚುನಾವಣಾ ಸಹಾಯಕ ಸಿಬ್ಬಂದಿ ತಂಡಗಳು ನಿಯೋಜಿಸಿದ್ದ ಮತಗಟ್ಟೆಗಳಿಗೆ ತಲುಪಿದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣಾ ಸಿಬ್ಬಂದಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. ಅಂತಿಮವಾಗಿ ಎಲ್ಲಾ ಮತಗಟ್ಟೆ ಅಧಿಕಾರಿಗಳು ಹಾಗೂ ಎಲ್ಲಾ ಸಹಾಯಕ ಸಿಬ್ಬಂದಿಗೆ ಮತ್ತೊಮ್ಮೆ ಮತದಾನದ ದಿನದಂದು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ, ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು.

‘ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಗೊಂದಲಗಳಿಲ್ಲದಂತೆ ಚುನಾವಣಾ ಪ್ರಕ್ರಿಯೆ ನಡೆಸಬೇಕು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಪಿ.ಸಿ.ಜಾಫರ್ ಸೂಚಿಸಿದರು.

ಹಾಸನದ ಕಲಾ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದು ಚುನಾವಣಾ ಮತಗಟ್ಟೆಗಳಿಗೆ ನಿಯೋಜನೆ
ಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಗುಂಪು ಗುಂಪಾಗಿ ತಮ್ಮಲಿದ್ದ ಅನುಮಾನ ಬಗೆಹರಿಸಿಕೊಂಡು ತಂಡ, ತಂಡವಾಗಿ ಮತಗಟ್ಟೆಗಳಿಗೆ ತೆರಳಿದ್ದು ಸಾಮಾನ್ಯ ದೃಶ್ಯವಾಗಿತ್ತು.

ಬೆಳಗಿನ ಉಪಾಹಾರ ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಚುನಾವಣಾ ಸಿಬ್ಬಂದಿ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕಲಾ ಕಾಲೇಜಿನಲ್ಲಿ 11 ಗಂಟೆಯಾದರೂ ಉಪಾಹಾರ ಸಿಗದೆ ಪರದಾಡಬೇಕಾಯಿತು.

ಕಾರ್ಮಿಕರಿಗೆ ವೇತನ ಸಹಿತ ರಜೆ

ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಜಿಲ್ಲೆಯ ಎಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಮೇ 12ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರ್ಮಿಕ ಅಧಿಕಾರಿ ಎಚ್.ಎನ್. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊನೆ ಕ್ಷಣದ ಕಸರತ್ತು

ಕಣದಲ್ಲಿರುವ ಅಭ್ಯರ್ಥಿಗಳು ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೂ ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸಿದರು. ಅಭ್ಯರ್ಥಿಗಳ ಪರವಾಗಿ ಆಯಾ ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಸಲು ಕೊನೆಯ ಕ್ಷಣದ ಕಸರತ್ತು ನಡೆಸಿದರು. ಹದಿನೈದು ದಿನಗಳಿಂದ ಅಭ್ಯರ್ಥಿಗಳು ಪ್ರಖರ ಬಿಸಿಲಿನಲ್ಲಿಯೇ ಮತದಾರರ ಮನಗೆಲ್ಲಲು ಬೆವರು ಹರಿಸಿದ್ದರು.

ವಿಧಾನಸಭಾ ಕ್ಷೇತ್ರ ಸ್ಪರ್ಧಿಗಳ ಸಂಖ್ಯೆ

ಹಾಸನ  13
ಶ್ರವಣಬೆಳಗೊಳ 05
ಅರಸೀಕೆರೆ  06
ಬೇಲೂರು   07
ಹೊಳೆನರಸೀಪುರ 08
ಅರಕಲಗೂಡು 07
ಸಕಲೇಶಪುರ 07

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT