ಗುರುವಾರ , ಫೆಬ್ರವರಿ 25, 2021
19 °C
ಮೊದಲ ಚುನಾವಣೆಯಿಂದ ಈ ತನಕ ನಿರಂತರ ಮತದಾನ: ನೀವೂ ಬನ್ನಿ ಮತ ಚಲಾಯಿಸಿ

ನಾವೇ ಬೆಲ್ಲ –ನೀರು ನೀಡುತ್ತಿದ್ದೆವು...

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ನಾವೇ ಬೆಲ್ಲ –ನೀರು ನೀಡುತ್ತಿದ್ದೆವು...

ಹಾವೇರಿ: ‘ಆಗ, ಸೀರೆ, ಕುಪ್ಪಸ, ಪಂಚೆ, ರೊಕ್ಕದ ಹಂಚಿಕೆ ಇರಲಿಲ್ಲ. ನಾವೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ವೋಟು ಮಾಡುತ್ತಿದ್ದೆವು. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಮೈಲಾರ ಮಹದೇವ ಅವರ ಪತ್ನಿ ಸಿದ್ದಮ್ಮ ಅವರಿಗೆ ಮೊದಲ ಬಾರಿಗೆ ಮತ ಹಾಕಿದ್ದೆನು’ ಎಂದು 1957ರಲ್ಲಿ ನಡೆದ ಹಾವೇರಿ ವಿಧಾನಸಭಾ ಕ್ಷೇತ್ರದ ಚೊಚ್ಚಲ ಚುನಾವಣೆಯಲ್ಲಿ ಮತ ಚಲಾಯಿಸಿದ ನೆನಪನ್ನು ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ. ಹಿರೇಮಠ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಆಗ ಅಭ್ಯರ್ಥಿಗೊಂದು ಅಂಬಾಸಿಡರ್ ಕಾರು. ಉಳಿದವರು ಸೈಕಲ್ ಮೇಲೆ ಮನೆ ಮನೆಗೆ ಬಂದು ಮತ ಯಾಚಿಸುತ್ತಿದ್ದರು. ಜನ ಸೇರಿದ ಸ್ಥಳದಲ್ಲಿನ ದಿಬ್ಬ ಅಥವಾ ಕುರ್ಚಿಯ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಧ್ವನಿ ವರ್ಧಕಗಳ ಹಾವಳಿ ಇರಲಿಲ್ಲ. ಇದನ್ನು ಬಿಟ್ಟರೆ ಬೇರೆ ಪ್ರಚಾರ ಮಾದರಿಯೂ ಇರಲಿಲ್ಲ’ ಎಂದು ನೆನಪುಗಳನ್ನು ಮೆಲುಕು ಹಾಕಿದರು.

‘ಆಗ ಪ್ರಚಾರಕ್ಕೆ ಬಂದವರು, ‘ಅಕ್ಕಿ, ಗೋಧಿ, ಬೇಳೆ ದರ ಕಡಿಮೆ ಮಾಡುತ್ತೇವೆ. ರೈತರನ್ನು ಸ್ವಾವಲಂಬಿ ಮಾಡುತ್ತೇವೆ’ ಎಂಬಿತ್ಯಾದಿ ಭರವಸೆಗಳನ್ನು ನೀಡುತ್ತಿದ್ದರು’ ಎಂದರು.

‘1960ರ ದಶಕದ ಆಸುಪಾಸಿನಲ್ಲಿ ಪ್ರಚಾರಕ್ಕೆ ಬರುತ್ತಿದ್ದ ಅಭ್ಯರ್ಥಿಗಳಿಗೆ ನಾವೇ ನೀರು ಮತ್ತು ಬೆಲ್ಲ ನೀಡುತ್ತಿದ್ದೆವು. ಊರಿನ ಗೌರವಾನ್ವಿತರೇ ಸ್ಪರ್ಧಿಸುತ್ತಿದ್ದು, ಅಭ್ಯರ್ಥಿ ಹೆಸರು ಮತ್ತು ಚಿಹ್ನೆಯನ್ನು ಬರೆದ ಬಿಳಿ ಬಟ್ಟೆಯನ್ನು ಗೋಡೆ, ಮರ, ಇಲ್ಲವೇ ವಾಹನಕ್ಕೆ ಕಟ್ಟಿರುತ್ತಿದ್ದರು. ಇಲ್ಲಿನ ಮೊದಲ ಮುದ್ರಣ ಕೇಂದ್ರವಾದ ಬಸವರಾಜ ಪ್ರೆಸ್‌ನಲ್ಲಿ ಕರಪತ್ರ ಮುದ್ರಿಸಿ, ಹಂಚುತ್ತಿದ್ದರು. ಆ ಬಳಿಕ ಭಾರತ, ಗಳಗನಾಥ ಮತ್ತಿತರ ಪ್ರೆಸ್‌ಗಳು ಬಂದವು’ ಎಂದರು.

‘ಸೀರೆ, ಕುಪ್ಪಸ, ಪಂಚೆ, ರೊಕ್ಕಗಳನ್ನು ಹಂಚುವುದು ಸುಮಾರು 1970ರ ದಶಕದ ಬಳಿಕ ಆರಂಭಗೊಂಡಿರಬೇಕು. ಮೊದಲು ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಸಂಖ್ಯೆ–2ರಲ್ಲಿ ಮತಗಟ್ಟೆಯಿದ್ದು, ಬಿಸಿಲಿಗೆ ಬಳಲಿದ ಮತದಾರರಿಗಾಗಿ ಅಭ್ಯರ್ಥಿಗಳೇ  ಹೊರಗಡೆ ಮಂಡಕ್ಕಿ ಡಾಣೆ (ಒಗ್ಗರಣೆ ಮಂಡಕ್ಕಿ) ಇಟ್ಟಿರುತ್ತಿದ್ದರು. ಸಮೀಪದ ಮುನ್ಸಿಪಾಲಿಟಿ ಕಟ್ಟಡದಲ್ಲಿ ಮತ ಎಣಿಕೆ ನಡೆಯುತ್ತಿತ್ತು’ ಎಂದರು.

‘ಹಿಂದೆ ಸ್ಟಾರ್ ಪ್ರಚಾರಕರು ಬರುವ ಪದ್ಧತಿ ಇರಲಿಲ್ಲ. ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರುಗಳು ರಾಜಕೀಯ ನಿರ್ಧಾರ, ಅಭಿವೃದ್ಧಿ ವಿಚಾರ, ಯೋಜನೆಗಳ ಕುರಿತ ಚರ್ಚೆಗೆ ಮಾತ್ರ ಬರುತ್ತಿದ್ದರು. ಹೀಗೆ ಬಂದ ಬಿ.ಡಿ.ಜತ್ತಿ, ಜವಾಹರಲಾಲ್ ನೆಹರೂ, ಸುಭಾಸ್ ಚಂದ್ರ ಬೋಸ್ ಮತ್ತಿತರ ಮುಖಂಡರು ಸ್ಥಳೀಯ ನಾಯಕರ ಮನೆಯಲ್ಲೇ ಇರುತ್ತಿದ್ದರು. ಈಗಿನಂತೆ ವಿಶೇಷ ವ್ಯವಸ್ಥೆ, ಭದ್ರತೆ, ಭೋಜನಗಳು ಇರಲಿಲ್ಲ. ಯಾರು ಬೇಕಾದರೂ ಅವರನ್ನು ನೋಡಿ ಬರಬಹುದಿತ್ತು’ ಎಂದರು.

‘ಮೊದಲು ಮತದಾನ ಮಾಡಲು 21 ವರ್ಷ ಆಗಬೇಕಿತ್ತು. ಆ ಬಳಿಕ 18 ವರ್ಷ ಮಾಡಿದರು, ಮತದಾರರೂ ಹೆಚ್ಚಿದರು. ವ್ಯಾಪಾರಿ ಮನೋಭಾವದ ದೊಡ್ಡ ದೊಡ್ಡ ಶ್ರೀಮಂತರು ರಾಜಕಾರಣಕ್ಕೆ ಪ್ರವೇಶಿಸಿದ ಬಳಿಕ ಚುನಾವಣಾ ಶೈಲಿ ಬದಲಾಯಿತು. ಆದರೂ, ಅಂದಿನ ಜನ ಅಭ್ಯರ್ಥಿಯನ್ನು ತೂಗಿ–ಅಳೆದು ಮತ ಹಾಕುತ್ತಿದ್ದರುರು. ನಾನು ಈ ಬಾರಿಯೂ ಮತದಾನ ಮಾಡಲು ಹೋಗುತ್ತಿದ್ದೇನೆ. ನೀವೆಲ್ಲರೂ ತಪ್ಪದೇ ಬನ್ನಿ...’ ಎಂದು 100ನೇ ವಯಸ್ಸಿನಲ್ಲೂ ಉತ್ಸಾಹ ತೋರಿದರು.

‘ಆಗ, ಅಭ್ಯರ್ಥಿಗೆ ಕತ್ತರಿ ಗೀಟು’

ಮೊದಲ ಚುನಾವಣೆಯಲ್ಲಿ ಮತಪತ್ರದಲ್ಲಿನ ಅಭ್ಯರ್ಥಿ ಹೆಸರು ಮತ್ತು ಚಿಹ್ನೆ ಮುಂದೆ ‘ಕತ್ತರಿ ಗೀಟು’ ಹಾಕಬೇಕಾಗಿತ್ತು. ಅಧಿಕಾರಿಗಳು ನೀಡಿದ ಸ್ಕೆಚ್‌ ಪೆನ್ನು ಮೂಲಕ ಗೀಟು ಹಾಕಿ ಮತಪೆಟ್ಟಿಗೆಗೆ ಹಾಕುತ್ತಿದ್ದೆವು. ಆ ಬಳಿಕ ‘ಸಿಕ್ಕಾ’ (ಠಸ್ಸೆ) ಬಂತು. ಈಗ ಇವಿಎಂ ಬಂದಿದೆ. ಎಲ್ಲಾ ಚುನಾವಣೆಗಳಲ್ಲೂ ನಾನು ಮತದಾನ ಮಾಡಿದ್ದೇನೆ. ಈ ಬಾರಿ ವಿವಿ ಪ್ಯಾಟ್‌ನಲ್ಲಿ ಚಲಾಯಿಸಿದ ಮತವನ್ನು ನೋಡಬೇಕು ಎಂದಿದ್ದೇನೆ’ ಎಂದು ಶತಾಯುಷಿ ಎಂ.ಬಿ. ಹಿರೇಮಠ ಹೇಳಿದರು.

ನಿಯಂತ್ರಣಕ್ಕೆ ಬಂದಿದೆ

‘ಹಿಂದೆ ಚುನಾವಣಾ ಪ್ರಚಾರದ ಅಬ್ಬರ ಇಷ್ಟೊಂದು ಇರಲಿಲ್ಲ. ಆದರೆ, ವಿಪರೀತಕ್ಕೆ ಹೋಗಿದ್ದ ಸ್ಥಿತಿಯನ್ನು ಚುನಾವಣಾ ಆಯೋಗವು ಹಂತ ಹಂತವಾಗಿ ನಿಯಂತ್ರಣಕ್ಕೆ ತಂದಿದೆ’ ಎಂದು ಸೌಭಾಗ್ಯ ಎಂ. ಹಿರೇಮಠ ಮತ್ತು ಡಾ. ವಿಶಾಲಾಕ್ಷಿ ಎಂ.ಹಿರೇಮಠ ಶ್ಲಾಘಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.