ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ಲಾರಿಯಲ್ಲಿ ಸಾಗಿಸುತ್ತಿದ್ದ ₹ 70 ಲಕ್ಷ ಜಪ್ತಿ

ಕೋಲಾರ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು
Last Updated 12 ಮೇ 2018, 10:11 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದಲ್ಲಿ ಗುರುವಾರ ರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಲ್ಲೂಕಿನ ಕೊಂಡರಾಜನಹಳ್ಳಿ ಬಳಿ ಸಿಮೆಂಟ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 70 ಲಕ್ಷ ವಶಪಡಿಸಿಕೊಂಡಿದ್ದಾರೆ.

ನಗರದ ಸಿಮೆಂಟ್‌ ಗೋದಾಮು ಒಂದರಿಂದ ಬೆಂಗಳೂರಿನ ಆವಲಹಳ್ಳಿಗೆ ಹೋಗುತ್ತಿದ್ದ ಲಾರಿಯಲ್ಲಿ ಸಿಮೆಂಟ್‌ ಮೂಟೆಗಳ ಮಧ್ಯೆ ಹಣದ ಚೀಲವಿಟ್ಟು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು.

ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿಯು ರಾಷ್ಟ್ರೀಯ ಹೆದ್ದಾರಿ 75ರ ಕೊಂಡರಾಜನಹಳ್ಳಿ ಬಳಿ ಲಾರಿ ತಡೆದು ಪರಿಶೀಲನೆ ಮಾಡಿದಾಗ ಹಣದ ಚೀಲ ಇರುವುದು ಗೊತ್ತಾಗಿದೆ. ಚೀಲದಲ್ಲಿ ₹ 500 ಮತ್ತು ₹ 2,000 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

‘ಲಾರಿಯಲ್ಲಿನ ಸಿಮೆಂಟ್‌ ಸರಕು ಕೋಲಾರದ ನಾಗರಾಜ್‌ ಹಾರ್ಡ್‌ವೇರ್‌ ಸ್ಟೋರ್‌ ಮಾಲೀಕರದ್ದು. ಅವರು ಬೆಂಗಳೂರಿನ ಆವಲಹಳ್ಳಿಯ ಗುತ್ತಿಗೆದಾರರೊಬ್ಬರಿಗೆ ಸಿಮೆಂಟ್‌ ಕಳುಹಿಸುತ್ತಿದ್ದರು. ಪ್ರಕರಣ ಸಂಬಂಧ ಚಾಲಕ ನವಾಜ್‌ ಮತ್ತು ಕ್ಲೀನರ್‌ ಶಂಕರ್ ಅವರನ್ನು ಬಂಧಿಸಿ ಹಣ ಹಾಗೂ ವಾಹನ ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರಿಗೆ ಹಂಚಲು ಅಥವಾ ತೆರಿಗೆ ವಂಚನೆ ಉದ್ದೇಶಕ್ಕಾಗಿ ಕದ್ದು ಮುಚ್ಚಿ ಹಣ ಸಾಗಿಸಲಾಗುತ್ತಿತ್ತೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ತನಿಖೆಗೆ ಹಾಜರಾಗುವಂತೆ ಹಾರ್ಡ್‌ವೇರ್‌ ಮಾಲೀಕ ನಾಗರಾಜ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದು, ಆ ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT