ಹಾರ್ಬೆಕ್ಕಿನ ಕಟ್ಟ ಕಡೆಯ ಸ್ವಗತ

7

ಹಾರ್ಬೆಕ್ಕಿನ ಕಟ್ಟ ಕಡೆಯ ಸ್ವಗತ

Published:
Updated:
ಹಾರ್ಬೆಕ್ಕಿನ ಕಟ್ಟ ಕಡೆಯ ಸ್ವಗತ

ನನಗೆ ನೀವು ‘ಹಾರುಬೆಕ್ಕು’ (ಫ್ಲೈಯಿಂಗ್ ಸ್ವ್ಕಿರಿಲ್) ಎಂದು ಹೆಸರಿಟ್ಟಿದ್ದೀರಿ. ನನ್ನ ಬಾಲ್ಯದ ಒಂದು ದಾರುಣ ನೆನಪಿನಿಂದ ನನ್ನ ಕಥೆ ಆರಂಭಿಸುತ್ತೇನೆ. ಆಗ ಡಿಸೆಂಬರ್‌ ತಿಂಗಳ ಚಳಿಗಾಲ. ಅಂದರೆ ಹೆಣ್ಣು-ಗಂಡು ಸೇರುವ ಕಾಲ.

ನಮ್ಮ ಮಾಮ ಒಂದು ವಿಶಾಲ ಬಸರಿ ಮರದ ಮೇಲೆ ಕೂತು ಪ್ರೇಮಗೀತೆ ಹಾಡುತ್ತಿದ್ದ ಅನ್ನಿ. ಅಷ್ಟರಲ್ಲೇ ನಿಮ್ಮವರು ಇಬ್ಬರು ಬಂದರು. ತಲೆಯಲ್ಲಿ ಟಾರ್ಚ್ ಮತ್ತು ಕೈಯಲ್ಲಿ ಕೋವಿ! ಮಾಮನ ಪ್ರಣಯರಾಗ ಅವರಿಗೂ ಕೇಳಿಸಿತೇನೊ. ಟಾರ್ಚ್ ಬೆಳಕು ಬಿತ್ತು. ಹಿಂದೆಯೇ ಗುಂಡಿನ ಸದ್ದು. ಬಹುಶಃ ಗುರಿ ತಪ್ಪಿರಬೇಕು. ಪಕ್ಕೆಗೆ ಪೆಟ್ಟಾಯಿತು. ಮಾಮ ಆಘಾತಗೊಂಡು ಆಯತಪ್ಪಿ ಕೆಳಕ್ಕೆ ಬೀಳತೊಡಗಿದ. ಸಹಜವಾಗಿ ರೆಕ್ಕೆಯಂಥ ತುಪ್ಪಳವನ್ನು ಅಗಲಿಸಿಕೊಂಡು ದೂರ ನೆಗೆಯಲು ಯತ್ನಿಸಿದ. ಆದರೆ, ರಕ್ತ ಸೋರುತ್ತಿದ್ದ ಪಕ್ಕೆಗಳು ಪೂರ್ತಿ ಬಿಚ್ಚಲಿಲ್ಲ. ಕೆಳಗೆ ಬಿದ್ದ. ಅವರು ಬೆಳಕು ಬೀಸುತ್ತ ಬಂದೇಬಿಟ್ಟರು. ಒಬ್ಬನ ಕೈಯಲ್ಲಿ ಕುಡುಗೋಲು ಇತ್ತು. ತಪ್ಪಿಸಿಕೊಳ್ಳುವ ನಮ್ಮ ಮಾಮನ ಪ್ರಯತ್ನ ಫಲಿಸಲಿಲ್ಲ. ಕುಡುಗೋಲಿನ ಹಿಂಭಾಗದಿಂದ ಎರಡು ಪೆಟ್ಟು ಹೊಡೆದರು. ಹೆಣ್ಣನ್ನು ಕೂಡುವ ಭರದಲ್ಲಿದ್ದ ನಮ್ಮ ಮಾಮ ಇಹಲೋಕ ತ್ಯಜಿಸಿದ.

ನಿಮ್ಮವರಿಗೆ ಆಹಾರ

ನಮ್ಮವರ ಸಂಖ್ಯೆ ಹೆಚ್ಚಿಗೆ ಉಳಿದಿಲ್ಲ. ಹಾಗಾಗಿ ನಮ್ಮ ಕಥೆಯನ್ನು ಈಗಲೇ ಹೇಳಬೇಕು. ಇಲ್ಲವೆಂದರೆ ಮುಂದೊಂದು ದಿನ ನಮ್ಮವರ ಜೀವನ ವಿಧಾನ, ಬದುಕಿನ ಕಥೆ ಹೇಳುವವರು ನಮ್ಮಲ್ಲಿ ಯಾರೂ ಉಳಿದಿರುವುದಿಲ್ಲ. ಹೇ... ಮನುಜರೇ ನನ್ನ ಕುಟುಂಬದ ಕಥೆಯನ್ನು ನನ್ನ ಭಾಷೆಯಲ್ಲೇ ಹೇಳಲು ಪ್ರಯತ್ನಿಸುವೆ ಕೇಳಿ.

ಪಶ್ಚಿಮಘಟ್ಟಗಳ ದಟ್ಟಕಾಡು ನಮ್ಮ ಸಂತತಿ ಬದುಕುವ ಸುರಕ್ಷಿತ ಸ್ಥಳ. ಎತ್ತರಕ್ಕೆ ಬೆಳೆದು ಹಣ್ಣು ನೀಡುವ ಹತ್ತಿ, ಆಲ, ಧೂಪ, ನೇರಳೆ, ತಡಸಲು, ಹೆಬ್ಬಲಸಿನಂತಹ ಮರಗಳ ಹಣ್ಣು, ಮತ್ತಿ ಮರದ ಕಾಯಿ, ಜಂಬೆ ಬೀಜಗಳು ನಮಗೆ ಮುಖ್ಯ ಆಹಾರ. ಅವು ಸಿಗದಾಗ ಕೆಲವು ಬಾರಿ ಮರದ ತೊಗಟೆ, ಅಂಟು, ಮರದ ಚಿಗುರು ಹಾಗೂ ಕೆಲವು ಬಾರಿ ಕೀಟ, ಅವುಗಳ ಮೊಟ್ಟೆಗಳನ್ನು ತಿಂದು ಬದುಕುತ್ತೇವೆ.

ನಾವು ನಿಶಾಚರಿಗಳು. ಹಗಲೆಲ್ಲ ಮರದ ಪೊಟರೆಯಲ್ಲಿ ನಮ್ಮ ವಾಸ. ಅಲ್ಲಿಯೇ ನಮ್ಮ ಮಕ್ಕಳು ಹುಟ್ಟುತ್ತಾರೆ. ಮಗುವಿನ ತೊಟ್ಟಿಲನ್ನು ಮರದ ಕಾಂಡ, ಎಲೆ, ಮೆದು ಎಲೆಗಳನ್ನು ತಂದು ನಿರ್ಮಿಸುತ್ತೇವೆ. ಹುಟ್ಟಿದಾಗ ನಮ್ಮ ಮಗುವಿಗೆ ಕಣ್ಣು ಕಾಣುವುದಿಲ್ಲ. ತಲೆ ದೊಡ್ಡದಾಗಿ, ಹಸಿ-ಹಸಿಯಾಗಿ ಇರುತ್ತವೆ. ನಾವು ಜನ್ಮ ನೀಡುವುದು ವರ್ಷಕ್ಕೊಂದೇ ಬಾರಿ. ಅದೂ ಒಂದು ಮಗು ಮಾತ್ರ. ಅದಕ್ಕೆ ತಾಯಿಯ ಆರೈಕೆ ಬೇಕು. ತಾಯಿಯ ಗೀಬಿನ ಹಾಲನ್ನೇ ಕುಡಿದು ಮರಿ ದೊಡ್ಡದಾಗುತ್ತದೆ. ಹೆಚ್ಚಾಗಿ ಕಾಡಿನ ಹಣ್ಣು ತಿಂದು ಬದುಕುವ ಸಂತತಿ ನಮ್ಮದು. ನಮ್ಮ ಬದುಕಿಗೆ ದಟ್ಟವಾದ ಕಾಡು ಅತಿಮುಖ್ಯ.

ರೆಕ್ಕೆ ಇಲ್ಲದಿದ್ದರೂ ನಾವು ಗಾಳಿಯಲ್ಲಿ ತೇಲಬಲ್ಲೆವು. ಎರಡೂ ಬದಿಯ ಮುಂಗಾಲಿನ ಪಾದದಿಂದ ಹಿಂಗಾಲಿನ ಪಾದದವರೆಗೆ ನಮಗೆ ಬಿಚ್ಚಿ- ಮಡಚಿ ಮಾಡಲು ಅನುಕೂಲವಾಗುವಂತೆ ಚರ್ಮದ ರೆಕ್ಕೆಯಿದೆ.

ಕಥೆ ಮುಂದುವರಿಸುವ ಮುಂಚೆ ನಮ್ಮ ಕುಟುಂಬ ವಾಸಿಸುತ್ತಿದ್ದ ಭೌಗೋಳಿಕ ವ್ಯಾಪ್ತಿ ವಿವರಿಸುವುದು ಸೂಕ್ತವಾದೀತು. ನಾವು ವಾಸಿಸುತ್ತಿರುವ ಹಳ್ಳಿಯು ಪೇಟೆಯಿಂದ ಬಹಳವೇ ಹತ್ತಿರದಲ್ಲಿದ್ದ ಪ್ರದೇಶ. ಪೇಟೆ ವಿಸ್ತರಣೆಯಾದಂತೆ ಹಳ್ಳಿಗಳ ಮೇಲೆ ಒತ್ತಡ ಸಾಮಾನ್ಯ. ಇದರಿಂದಾಗಿ ನನ್ನಜ್ಜ ಬದುಕಿದ್ದ ಕಾಲದ ಅರಣ್ಯ ಪ್ರದೇಶ ಕಡಿಮೆಯಾಗಿ ಅರ್ಧದಷ್ಟಾಗಿತ್ತು. ಅತ್ತ ಸಿಗಂದೂ‌ರಿಗೆ ಹೋಗುವ ರಸ್ತೆ, ಪಕ್ಕದಲ್ಲೇ ಶಾಲೆ ಹಾಗೂ ಉಳಿದ ಸುತ್ತಲಿನ ಪ್ರದೇಶ ಜನವಸತಿ. ಇವುಗಳ ಮಧ್ಯದಲ್ಲಿರುವ ಹಸುರು ಹೊದಿಕೆಯೇ ನಮ್ಮ ಆವಾಸ ಸ್ಥಾನ. ಅಂದರೆ ನಿಮ್ಮ ಲೆಕ್ಕದಲ್ಲಿ ಒಂದೈವತ್ತು ಎಕರೆ ಪ್ರದೇಶ. ದ್ವೀಪದಂತಹ ಈ ಕಾಡಿನಲ್ಲಿ ನಮಗೆ ಬೇಕಾದಷ್ಟು ಆಹಾರ ಲಭ್ಯವಾಗುತ್ತಿರಲಿಲ್ಲ. ಹಾಗಾಗಿ, ನಮ್ಮ ಸಂತತಿ ಬೆಳೆಯಲಿಲ್ಲ.

ಅಡಿಕೆ ತೋಟದಲ್ಲಿ ಕಾಯಿ ಹಣ್ಣಾಗುವ ಕಾಲದಲ್ಲಿ ಕೆಲವೊಮ್ಮೆ ತೋಟಕ್ಕೆ ಹೋಗಿ ಹಣ್ಣಡಿಕೆ ಕಿತ್ತು ಅದರ ರಸ ಹೀರಿಕೊಂಡು ಹಣ್ಣನ್ನು ಕೆಳಗೆ ಹಾಕುತ್ತೇವೆ. ಅದರೊಳಗಿನ ಅಡಿಕೆ ಹಾಗೇ ಉಳಿದಿರುತ್ತದೆ. ರೈತರಿಗೆ ನಷ್ಟವೇನೂ ಇಲ್ಲ. ಮಾವಿನ ಫಸಲು ಬಂದಾಗ, ಮಾವಿನ ಮಿಡಿ ತಿನ್ನುತ್ತೇವೆ. ಯಾರಿಗೂ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಲಿ ನಮ್ಮಿಂದ ಹಾನಿಯಾದ ದಾಖಲೆ ನಿಮ್ಮಲ್ಲೂ ಇಲ್ಲ. ಆದರೆ, ನಿಮ್ಮಲ್ಲೇ ಕೆಲ ಜನಾಂಗದವರು ನಮ್ಮನ್ನು ಬೇಟೆಯಾಡುತ್ತಾರೆ. ಆಧುನಿಕ ತಂತ್ರಜ್ಞಾನದ ಸಲಕರಣೆಗಳು ನಮ್ಮ ದಿಕ್ಕು ತಪ್ಪಿಸುತ್ತವೆ.

ಜನರು ತಲೆಗೊಂದು ಟಾರ್ಚ್ ಕಟ್ಟಿಕೊಂಡು ರಾತ್ರಿ ಹೊತ್ತು ನಮ್ಮ ದ್ವೀಪದ ಕಾಡಿಗೆ ಬರುತ್ತಾರೆ. ಟಾರ್ಚ್ ಬೆಳಕನ್ನು ಮುಖಕ್ಕೆ ಬಿಡುತ್ತಾರೆ. ನಾವು ತಬ್ಬಿಬ್ಬಾಗುತ್ತೇವೆ. ತಪ್ಪಿಸಿಕೊಂಡು ಹೋಗುವ ಮಾರ್ಗ ಟಾರ್ಚಿನ ಪ್ರಖರ ಬೆಳಕಿನ ಮುಂದೆ ಇಲ್ಲವಾಗುತ್ತದೆ. ನಮಗೆ ಕಣ್ಣು ಕಾಣದಂತಾಗುತ್ತದೆ. ನಮ್ಮ ಮಾಂಸ ಬೇಯಿಸಿ ತಿನ್ನಲು ಅವರ ಮನೆಯಲ್ಲಿ ಮಸಾಲೆ ರುಬ್ಬಿಯಾಗಿದೆ. ಅಷ್ಟರಲ್ಲೇ ಗಿವಿಗಡಚಿಕ್ಕುವ ಸದ್ದು. ಹಿಂದೆಯೇ ಗುಂಡಿನೇಟು ತಿಂದು ಕೆಳಗೆ ಬೀಳುತ್ತೇವೆ. ಹತ್ತಿಗಿಂತ ಮೆತ್ತಗಿರುವ ನಮ್ಮ ಚರ್ಮ ಸುಲಿದು, ದೊರಕಿದ ಹಿಡಿಯಷ್ಟು ಮಾಂಸವನ್ನು ಮಸಾಲೆಗೆ ಬೆರೆಸಿ ತಿಂದರಾಯಿತು. ನನ್ನ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ದಾರುಣ ಘಟನೆ ದಾಖಲಿಸಿ, ನನ್ನ ಕಥೆ ಮುಗಿಸುತ್ತೇನೆ.

ನಾನೂ ವಯಸ್ಸಿಗೆ ಬಂದೆ. ನನಗೆ ಸಂಗಾತಿಯೂ ಸಿಕ್ಕಿದಳು. ಮಳೆಗಾಲ ಶುರುವಾಗಿತ್ತು. ಆದರೂ, ಮಳೆ ನೀರು, ಚಳಿಗೆ ನಮ್ಮ ಕಂದ ಬಳಲಬಾರದು ಎಂದು ಚೆಂದದ ಗೂಡು ಕಟ್ಟಿದ್ದೆವು. ಮರದ ತೊಗಟೆ, ಮೆದುವಾದ ಎಲೆ. ಒಂದು ತೊಟ್ಟು ನೀರೂ ಪೊಟರೆಯೊಳಗೆ ಬರುತ್ತಿರಲಿಲ್ಲ. ನನ್ನಾಕೆ ಬಾಣಂತಿ. ಪೊಟರೆಯ ಹತ್ತಿರ ಅತ್ತಿಯ ಮರವಿಲ್ಲ. ಮರವಿರುವುದು ಇನ್ನೂರೈವತ್ತು ಮೀಟರ್ ದೂರದಲ್ಲಿ. ಆ ಮರ ತಲುಪಬೇಕೆಂದರೆ ಕನಿಷ್ಠ 25 ಮರಗಳನ್ನಾದರೂ ಹತ್ತಿ ಹಾರಬೇಕು. ಕಂದನನ್ನು ಗೂಡಿನಲ್ಲೇ ಬಿಟ್ಟು ಅತ್ತಿ ಮರದತ್ತ ಸಾಗಿದೆವು. ಮಗುವಿನ ಆರೈಕೆಯ ಧಾವಂತ ಸಹಜವಾಗಿ ತಾಯಿಯಲ್ಲಿತ್ತು.

ನನಗಿಂತ ಮುಂದೆ ಹೋದಳು. ಎಲ್ಲಿದ್ದರೋ ಆ ನಿಮ್ಮವರು... ಅವರ ಟಾರ್ಚಿನ ಗುರಿಗೆ ನನ್ನವಳು ಸಿಕ್ಕೇ ಬಿಟ್ಟಳು. ಹಿಂದೆಯೇ ಡಂ... ಸದ್ದು. ಹಾಲು ಕುಡಿಸುವ ಬಾಣಂತಿಯ ತಲೆ ಮಧ್ಯದಲ್ಲೇ ಗುಂಡು ತಾಗಿತ್ತು. ಅರೆಕ್ಷಣದಲ್ಲೇ ಸತ್ತು ಬಿದ್ದಳು. ಬೆಚ್ಚನೆ ಗೂಡಿನಲ್ಲಿದ್ದ ಇನ್ನೂ ಕಣ್ಣು ಬಿಡದ ಮರಿ, ತಾಯಿ ಮೊಲೆ ಹಾಲಿಗಾಗಿ ಬಾಯ್ತೆರೆಯುತ್ತಿತ್ತು. ಬೇರೇನನ್ನೂ ತಿನ್ನುವ ಸಾಮರ್ಥ್ಯ ಅದಕ್ಕಿಲ್ಲ. ಮಳೆ ಧೋ ಎಂದು ಸುರಿಯುತ್ತಿತ್ತು. ಹಸಿವಿನಿಂದ ಕಂಗೆಟ್ಟ ಕಂದನ ಮೈ ನಡುಗುತ್ತಲೇ ಇತ್ತು. ಬೇರೇನನ್ನೂ ಮಾಡುವ ಸ್ಥಿತಿಯಲ್ಲಿ ನಾನೂ ಇರಲಿಲ್ಲ. ಬೆಳಗಿನವರೆಗೆ ಒದ್ದಾಡಿ ಮರಿಯೂ ಸತ್ತಿತು. ದುಃಖದ ಪಾತ್ರೆ ಮಾತ್ರ ನನ್ನದಾಯಿತು.

ನನ್ನ ದ್ವೀಪದ ಕಾಡಿನಲ್ಲಿ ನನಗೆ ಇನ್ನೊಂದು ಸಂಗಾತಿ ಸಿಗಲಿಲ್ಲ. ಸರಿಯಾದ ಆಹಾರವಿಲ್ಲದೇ ನಾನು ಸೊರಗಿದ್ದೆ. ಆದರೂ, ಬದುಕಬೇಕಲ್ಲ. ರಾತ್ರಿಯೆಲ್ಲಾ ಹುಡುಕಿದರೂ ಹೊಟ್ಟೆ ತುಂಬುವಷ್ಟು ಆಹಾರ ಸಿಕ್ಕಿರಲಿಲ್ಲ. ಬೆಳಗಾಗುತ್ತಿತ್ತು. ಬೇಗ ಗೂಡು ಸೇರಬೇಕೆಂಬ ಬಯಕೆಯಲ್ಲಿ ಎತ್ತರದ ಮರದಿಂದ ಕೆಳಕ್ಕೆ ಹಾರಿದೆ. ಗುರಿ ತಲುಪಲಿಲ್ಲ. ಛಟ್! ಎಂಬ ಸದ್ದು ಬಂತು. ಬೆಂಕಿಯಿಂದ ಸುಟ್ಟ ಹಾಗೆ ಆಯಿತು. ಆಯತಪ್ಪಿ ಕೆಳಗೆ ಬಿದ್ದೆ. ಸಾಯಲಿಲ್ಲ. ಮುಂಗಾಲು, ಎಡಬದಿಯ ಹಿಂಗಾಲು ಹಾಗೂ ರೆಕ್ಕೆಗಳೆಲ್ಲಾ ಸುಟ್ಟ ಅನುಭವ.

ತೆವಳಲೂ ಸಾಧ್ಯವಿಲ್ಲ. ಅಲ್ಲೇ ಕುಳಿತು ಮನದಲ್ಲೇ ರೋಧಿಸುತ್ತಿದ್ದೆ. ನಿಮ್ಮವರ ಓಡಾಟ ಶುರುವಾಯಿತು. ಇಷ್ಟರಲ್ಲೇ ಚಿಗಳಿಗಳು ಒಂದು ಬದಿಯಿಂದ ನನ್ನನ್ನು ಕಿತ್ತು ತಿನ್ನಲು ಪ್ರಾರಂಭಿಸಿದ್ದವು. ಇರುವೆಗಳು ಮುತ್ತಿಕೊಂಡಿದ್ದವು. ಹೆನ್ನೊಣಗಳು ಗಾಯದ ಒಳಗೆ ಹೋಗಿದ್ದವು. ಫೋಟೊ ತೆಗೆಯಲು ಅದ್ಯಾರೋ ಬಂದರು. ಬೆದರಿದ ನಾನು ನನ್ನನ್ನು ಕೊಲ್ಲಲೇ ಬಂದರೆಂದು ತಿಳಿದು ಹಿಸ್... ಎಂದೆ. ಧ್ವನಿಯೂ ಕ್ಷೀಣವಾಗಿತ್ತು. ನಿಮ್ಮಲ್ಲೇ ಮತ್ತೊಬ್ಬ ಬಂದ. ಕೈಯಲ್ಲಿ ಅಗಲವಾದ ಬಟ್ಟೆಯಿತ್ತು. ಬದುಕಲು ಪ್ರತಿರೋಧ ಮಾಡಿದೆ. ನಿಧಾನವಾಗಿ ಬಟ್ಟೆಯಲ್ಲಿ ಸುತ್ತಿಕೊಂಡು, ಮೈದಡವಿದ, ಹಾಯ್ ಎನಿಸಿತು. ಮೈಗೆ ಹತ್ತಿದ ಚಿಗಳಿ, ನೊಣ, ಇರುವೆಗಳಿಂದ ಬಿಡುಗಡೆ ಸಿಕ್ಕಿತು. ನೀರಿನ ಅಂಶವಿಲ್ಲದೆ ನಿತ್ರಾಣವಾಗಿದ್ದೆ. ನನ್ನನ್ನು ಅವುಚಿಕೊಂಡವ ನನ್ನನ್ನು ಕೊಲ್ಲಲಾರ ಎಂದೆನಿಸಿತು. ಕಣ್ಣು ಮುಚ್ಚಿ ನಿರಾಳವಾದೆ.

ಹಣ್ಣಿನ ಗಿಡ ನೆಡುವೆ

ಕಥೆ ಬರೆಯುವವನಿಗೆ ಅದನ್ನು ಅರ್ಧದಲ್ಲಿ ನಿಲ್ಲಿಸುವ ಹಕ್ಕಿಲ್ಲ. ಪ್ರಾರಂಭವಾದ ಕಥೆ ಮುಗಿಸಲೇಬೇಕು. ‘ಗಾಯಗೊಂಡು, ನಿರ್ಜಲೀಕರಣವಾದ ಹಾರುಬೆಕ್ಕಿಗೆ ತಕ್ಷಣದಲ್ಲಿ ನೀರು ಕುಡಿಸಬೇಕು. ಅದು ತಿನ್ನುವ ಹಣ್ಣನ್ನು ತಿನ್ನಿಸಬೇಕು. ಸುಟ್ಟುಹೋದ ಬೆರಳುಗಳಿಗೆ ಚಿಕಿತ್ಸೆ ನೀಡಬೇಕು. ಮೆತ್ತಿದ ಇರುವೆಗಳನ್ನು ನೋವಾಗದಂತೆ ಬಿಡಿಸಬೇಕು. ನೀರಿಗೊಂದು ಸ್ವಲ್ಪ ಜೇನು ಸೇರಿಸಿಕೊಂಡು ಬೇಗ ತೆಗೆದುಕೊಂಡು ಬಾ...’ ಎಂದು ಮಡದಿಗೆ ಹೇಳಿದೆ. ಹಾರ್ಬೆಕ್ಕಿನ ಹಂಜಿಯಂತಹ ದೇಹ ಸವರುತ್ತಿದ್ದೆ. ದೊಡ್ಡದಾಗಿ ಒಮ್ಮೆ ಕಣ್ಣು ಬಿಟ್ಟು ಆರ್ತವಾಗಿ ನೋಡಿತು. ಮಡದಿ ನೀರು ತರುವುದರೊಳಗಾಗಿ ಫ್ಲೈಯಿಂಗ್ ಸ್ವ್ಕಿರಿಲ್ ಪಾಪಿಲೋಕದಿಂದ ದೂರವಾಗಿತ್ತು. ಎರಡು ಅಡಿ ಗುಂಡಿ ತೋಡಿ ಮಣ್ಣು ಮಾಡಿದೆ. ಅದರ ನೆನಪಿಗಾಗಿ ಆ ಜಾಗದಲ್ಲೊಂದು ಹಣ್ಣಿನ ಗಿಡ ಈಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry