ಗುರುವಾರ , ಮಾರ್ಚ್ 4, 2021
18 °C

ಪಯಣಿಸುತ್ತಾ ಕಂಡುಕೊಂಡ ಬಿಡುಗಡೆ

ಪ್ರಕಾಶ್ ರೈ Updated:

ಅಕ್ಷರ ಗಾತ್ರ : | |

ಪಯಣಿಸುತ್ತಾ ಕಂಡುಕೊಂಡ ಬಿಡುಗಡೆ

ಪಯಣವೊಂದರ ನೆನಪುಗಳು ಚಿಗುರುತ್ತಲೇ ಇರುತ್ತವೆ. ‘ಮಳೆ ನಿಂತರೂ ಮರದ ಹನಿಬಿಡದು’ ಎಂಬಂತೆ, ದಾರಿ ಮುಗಿದರೂ ಹಾದಿಯ ಘಮ ಮತ್ತು ಗುಂಗು ಮನಸ್ಸಿನೊಳಗೆ ನೆಲೆಯಾಗಿರುತ್ತದೆ. ನನ್ನ ಪಯಣಗಳಲ್ಲಿ ಇದು ಅತ್ಯಂತ ವಿಶಿಷ್ಟವಾದದ್ದು ಎಂದಷ್ಟೇ ಹೇಳಬಲ್ಲೆ.

ಈ ಬಾರಿ ನಾನು ನನ್ನನ್ನೇ ಹುಡುಕಿಕೊಂಡು ಹೊರಟಿದ್ದೆ. ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ನನ್ನ ನೆರಳಿನ ಜೊತೆಗೇ ಮಾತಾಡುತ್ತಿದ್ದೆ. ಅದರ ಜೊತೆಗೇ ಅನೇಕ ನೆರಳುಗಳ ಜೊತೆ ಮಾತಾಡಿದೆ ಕೂಡ. ನನಗೆ ಎದುರಾದವರಲ್ಲಿ ಬಹುತೇಕರು ಬರೀ ನೆರಳುಗಳಾಗಿಯೇ ಉಳಿದರು. ಅವರನ್ನು ಯಾವ ಜ್ಞಾನದ ಬೆಳಕು ಕೂಡ ಪ್ರವೇಶಿಸಲಿಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ತಮ್ಮ ವಿದ್ರೋಹಗಳಲ್ಲಿ, ವಿಚಾರಗಳಲ್ಲಿ ಬಂದಿಯಾಗಿದ್ದರು. ಅವರ ರಸ್ತೆ ಅಲ್ಲಿಗೇ ಕೊನೆಯಾಗಿತ್ತು. ಮುಂದೆ ಪಯಣ ಸಾಧ್ಯವೇ ಇಲ್ಲ ಎಂಬಂತೆ ಅವರು ಕಂಗಾಲಾಗಿ ನಿಂತಂತೆ ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು.

ನನ್ನ ಪಯಣಗಳು ಮುಗಿಯುವುದಿಲ್ಲ ಅನ್ನುವುದು ನನಗೇ ಗೊತ್ತಿದೆ. ನಾನು ಹೊರಟ ಜಾಗದಿಂದ ನನಗೆ ಕಾಣಿಸುವ ದಿಗಂತ ಬೇರೆ. ಆ ದಿಗಂತದಿಂದ ಹಿಂತಿರುಗಿ ನೋಡಿದಾಗ ಕಾಣಿಸುವ ದೃಶ್ಯವೇ ಬೇರೆ. ಹೀಗೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಚುನಾವಣೆಗಳು ಮುಗಿದಿವೆ. ಫಲಿತಾಂಶಕ್ಕಾಗಿ ಕಾಯುತ್ತಾ ಕೂತಿದ್ದೇವೆ. ಚುನಾವಣೆಗೆ ಮುಂಚೆ ಸುಮಾರು ನಾಲ್ಕು ತಿಂಗಳ ಕಾಲ ನಾನು ಇಡೀ ಕರ್ನಾಟಕವನ್ನು ಸುತ್ತಿದೆ. ಬಹಳ ಅದ್ಭುತವಾದ, ವಿಶಿಷ್ಟವಾದ ಯಾತ್ರೆ ಅದು. ನಾನು ಎಂದೂ ಕೇಳದಂಥ ಮಾತುಗಳನ್ನು ಕೇಳಿದೆ. ದ್ವೇಷದ ಕಿಡಿಗಳು ಮಾತಿನ ಕುಲುಮೆಯಿಂದ ಚಿಮ್ಮುವುದನ್ನು ಕಂಡೆ. ನಾನು ಯಾರು, ಯಾವ ಜಾತಿ, ಯಾವ ಊರು ಅಂತ ಗೊತ್ತಿಲ್ಲದೇ ಪ್ರೀತಿಸಿದವರು, ನನ್ನ ಪ್ರತಿಭೆಯನ್ನಷ್ಟೇ ಗೌರವಿಸಿದವರು, ನನ್ನ ಗ್ರಹಿಕೆಗಳಿಗೋಸ್ಕರ ನನ್ನನ್ನು ಅಕ್ಕರೆಯಿಂದ ಕಂಡವರನ್ನು ಕಂಡೆ. ನಾನು ಕೆಲವರನ್ನು ಪ್ರಶ್ನೆ ಮಾಡಿದ್ದೇ ತಡ ನನ್ನ ಪರಮ ವಿರೋಧಿಗಳಾಗಿ, ನನ್ನ ಜಾತಿ ಮತ್ತು ವೈಯಕ್ತಿಕ ಜೀವನದೊಳಗೆ ನುಸುಳುವುದಕ್ಕೆ ಪ್ರಯತ್ನಿಸಿದವರನ್ನೂ ನೋಡಿದೆ. ಅದೇ ಥರ ‘ಪ್ರಕಾಶ್ ರೈ ಒಳಗೆ ನಮಗೆ ಗೊತ್ತಿಲ್ಲದ ಒಬ್ಬ ಇಂಥ ಪ್ರಬುದ್ಧ ಇದ್ದಾನಾ’ ಎಂದು ಜನರು ಆಡಿಕೊಳ್ಳುವುದನ್ನೂ ಕೇಳಿದೆ.

ಇದೇ ಹೊತ್ತಲ್ಲಿ ಒಂದು ವಿಚಿತ್ರವನ್ನೂ ಕಂಡೆ. ನನ್ನ ನಿರ್ಭಿಡೆಯ ಮಾತುಗಳನ್ನು ಕೇಳಿಸಿಕೊಂಡವರು, ನನ್ನ ರಾಜಕೀಯ ನಿಲುವನ್ನು ಗಮನಿಸಿದವರು, ನನ್ನ ವಾದವನ್ನು ಆಲಿಸಿದವರು ಯಾರೂ ‘ನಿನ್ನ ಜೊತೆ ನಮಗೆ ಭಿನ್ನಾಭಿಪ್ರಾಯ ಇದೆ ಪ್ರಕಾಶ್’ ಎಂದು ನನ್ನ ಜೊತೆಗೆ ಮಾತಿಗೆ ಇಳಿಯಲಿಲ್ಲ. ಬಂದವರೆಲ್ಲ ಕಲ್ಲು ಹೊಡೆಯುವುದಕ್ಕೋ ಕಿರುಚಾಡುವುದಕ್ಕೋ ಮಾತಿಗೆ ಅಡ್ಡಿಪಡಿಸುವುದಕ್ಕೋ ಬಂದಿದ್ದರೇ ವಿನಾ, ಯಾರೂ ಮಾತುಕತೆಗೆ ಬರಲಿಲ್ಲ. ಅವರಿಗೆ ಚರ್ಚೆಯೋ ವಾಗ್ವಾದವೋ ಬೇಕಿರಲಿಲ್ಲ. ನನ್ನ ಬಾಯಿ ಮುಚ್ಚಿಸುವುದಷ್ಟೇ ಮುಖ್ಯವಾಗಿತ್ತು. ದನಿಯನ್ನು ಅಡಗಿಸುವ ಕೆಲಸವನ್ನು ಎಷ್ಟು ಶತಮಾನಗಳಿಂದ ಎಷ್ಟು ವ್ಯವಸ್ಥಿತವಾಗಿ ಯಾರೆಲ್ಲ ಮಾಡಿಕೊಂಡಿದ್ದಾರೆ ಅನ್ನುವುದೇ ಒಂದೊಳ್ಳೆಯ ಪುಸ್ತಕವಾಗುತ್ತದೆ.

ಇಂಥವರ ಮಧ್ಯೆ ನನಗೆ ಸಿಕ್ಕ ಮೂವರನ್ನು ನೆನೆಯುವೆ. ಜೋಳದರಾಶಿ ಎಂಬ ಪುಟ್ಟ ಊರಲ್ಲಿ, ಕಂಪಿಸುವ ಕೈಯ, ನಡುಗುವ ದನಿಯ ವೃದ್ಧರೊಬ್ಬರು ನನ್ನ ಕೈ ಹಿಡಿದುಕೊಂಡು, ‘ನನ್ನ ಜೀವಿತಕಾಲದಲ್ಲಿ ಈ ಥರದ ಒಂದು ಪ್ರತಿಭಟಿಸುವ ಧ್ವನಿ ಕೇಳುವುದಿಲ್ಲ ಅಂದುಕೊಂಡಿದ್ದೆ. ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಮಂದಿಯನ್ನು, ನಮ್ಮ ಧ್ವನಿಯನ್ನು ಉಡುಗಿಸುವವರನ್ನು ಕಂಡಿದ್ದೆ. ಅವರನ್ನೇ ಪ್ರಶ್ನೆ ಮಾಡುವ ಕಾಲ ಬರುತ್ತದೆ ಅಂದುಕೊಂಡಿರಲಿಲ್ಲ. ಎಲ್ಲರೂ ಸೇರಿ ಬದುಕುವ ಊರು ನಮ್ಮದು. ಎಲ್ಲರೂ ಒಟ್ಟಾಗಿ ಬದುಕದ ಹಾಗೆ ಮಾಡುವವರನ್ನು ಯಾರಾದರೂ ಖಂಡಿಸುತ್ತಾರೋ ಅಂತ ಕಾಯುತ್ತಿದೆ. ಈಗ ನನಗೆ ನಂಬಿಕೆ ಬಂತು’ ಅಂದಾಗ ನನಗೂ ಕಣ್ತುಂಬಿ ಬಂತು.

ಮತ್ತೊಬ್ಬ ತಾಯಿ, ತಮ್ಮ ಮಗಳ ಹತ್ತಿರ ಒಂದು ಪತ್ರ ಬರೆಯಿಸಿ ಕಳಿಸಿದ್ದರು. ‘ನಟ ಮತ್ತು ಕಲಾವಿದನಿಗಿಂತ ಹೆಚ್ಚಾಗಿ ನೀವು ನಮ್ಮೆಲ್ಲರ ಧ್ವನಿಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಅಂದಿದ್ದರು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನನ್ನನ್ನು ಫ್ರಿಸ್ಕ್ ಮಾಡುತ್ತಿದ್ದ ಯೋಧನೊಬ್ಬ ನನಗೆ ಸೆಲ್ಯೂಟ್ ಹೊಡೆದು, ‘ನಮ್ಮ ಪ್ರಶ್ನೆಗಳನ್ನು ನೀವು ಕೇಳುತ್ತಿದ್ದೀರಿ, ನಿಮ್ಮಂಥವರು ನಮ್ಮ ಹೆಮ್ಮೆ’ ಅಂತ ಹೇಳಿದ್ದು ಕೂಡ ಈ ಪಯಣದ ಧನ್ಯತೆಯೇ. ಮಠದ ಸ್ವಾಮೀಜಿಯೊಬ್ಬರು, ‘ನಿಮ್ಮ ಎಲ್ಲಾ ಅಂಕಣಗಳನ್ನೂ ನಾನು ಓದುತ್ತಿದ್ದೇನೆ’ ಎಂದು ಹೇಳಿದ್ದು, ಯುವಕರು ತಮ್ಮ ತಮ್ಮ ಜಾಲತಾಣಗಳಲ್ಲಿ ಆಡಿದ ಮಾತುಗಳು- ಎಲ್ಲವೂ ನನ್ನೊಳಗೆ ಆಪ್ತವಾಗಿ ಉಳಿದಿವೆ.

ಈ ದಾರಿಯಲ್ಲಿ ನಾನು ಕಂಡುಕೊಂಡ ಮತ್ತೊಂದು ಸತ್ಯ ಇದು. ಇಲ್ಲಿ ಯಾರಿಗೋ ಅಪ್ರಿಯವಾಗುವುದು ಮುಖ್ಯವಲ್ಲ. ಯಾರಿಗೋ ಪ್ರಿಯವಾಗುವುದು ಕೂಡ ಮುಖ್ಯವಲ್ಲ. ನಾನು ಏನು ಅನ್ನುವುದನ್ನು ನಾನು ಗುರುತಿಸಿಕೊಳ್ಳುವುದೇ ನಿಜವಾದ ಬಿಡುಗಡೆ. ನನ್ನಿಂದ ನಾನೇ ಪಡೆಯುವ ಸ್ವಾತಂತ್ರ್ಯ ಅದು. ಅದನ್ನು ನಾನು ಪಡೆದುಕೊಂಡಿದ್ದೇನೆ. ನಮ್ಮನ್ನು ಯಾರು, ಯಾವ ಕಾರಣಕ್ಕೆ ಪ್ರೀತಿಸುತ್ತಾರೆ ಅಂತಲೇ ಎಷ್ಟೋ ಸಲ ಗೊತ್ತಿರುವುದಿಲ್ಲ. ನಾವು ಅವರ ಪ್ರೀತಿಯನ್ನು ಆಪಾದಿಸಿಕೊಂಡು ಸಂತೋಷಪಟ್ಟುಕೊಳ್ಳುತ್ತಿರುತ್ತೇವೆ. ನಾನು ಏನೆಂದು ತಿಳಿಯದೇ ನನ್ನನ್ನು ಪ್ರೀತಿಸುವವರಿಗೆ ನಾನು ಮೋಸ ಮಾಡುತ್ತಿರುತ್ತೇನೆ. ಅದರ ಬದಲು ನನ್ನನ್ನು ಅರ್ಥ ಮಾಡಿಕೊಂಡು ನನ್ನ ಭಿನ್ನಾಭಿಪ್ರಾಯಗಳ ಜೊತೆ ಬದುಕುವವರೇ ನನಗೆ ಇಷ್ಟ.

ನಾನು ನಂಬುವ, ನಂಬಿದ, ನಂಬುತ್ತಿರುವ ವಿಚಾರಗಳನ್ನಿಟ್ಟುಕೊಂಡೇ ನಾನು ಬದುಕಬೇಕೇ ಹೊರತು, ಯಾರನ್ನೋ ಮೆಚ್ಚಿಸುವುದಕ್ಕೆ ನಾನು ಬದುಕಲಿಕ್ಕಾಗುವುದಿಲ್ಲ. ಈ ಅರ್ಥದಲ್ಲಿ ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಹಾಗಾಗಿಯೇ ನಾನೀಗ ಒಂದು ತೆರೆದ ಪುಸ್ತಕ ಆಗಿದ್ದೇನೆ ಎನ್ನುವ ಖುಷಿ ನನ್ನದಾಗಿದೆ. ಆ ಬಿಡುಗಡೆಯ ಭಾವವೇ ಈ ಪ್ರಯಾಣದ ಸಾಧನೆ.

‘ನೀನೊಬ್ಬ ಕಲಾವಿದ, ನಿನಗೇಕೆ ಈ ಉಸಾಬರಿ’ ಅಂತ ಕೇಳುವವರಿಗೆ ಒಂದೆರಡು ಮಾತುಗಳನ್ನು ಹೇಳಲೇಬೇಕು. ಈ ಜಗತ್ತಿನ ಮನುಷ್ಯರ ಪೈಕಿ ಯಾರೂ ಒಂಟಿಯಲ್ಲ. ಎಲ್ಲರೂ ಎಲ್ಲವನ್ನೂ ಹಂಚಿಕೊಂಡೇ ಬದುಕುತ್ತಿರುವವರು. ಈ ಅರ್ಥದಲ್ಲಿ ನನಗೆ ಸಂಬಂಧ ಇಲ್ಲದೇ ಇರುವುದು ಯಾವುದೂ ಇಲ್ಲ. ಎಲ್ಲರಿಗೂ ಎಲ್ಲಕ್ಕೂ ಒಂದು ಕಾರ್ಯಕಾರಣ ಸಂಬಂಧ ಇರುವ ಹಾಗೆ, ಅಕಾರಣ ಸಂಬಂಧವೂ ಇರಬಹುದಲ್ಲ?

ಸೂರ್ಯನನ್ನು ಕುರಿತು ಒಂದು ಪದ್ಯವನ್ನು ಕಳೆದ ವಾರ ನಾನು ಇದೇ ಅಂಕಣದಲ್ಲಿ ಪ್ರಸ್ತಾಪ ಮಾಡಿದ್ದೆ. ‘ಜಗವೆಂಬ ಕುಟುಂಬವೂ ನನ್ನದೇ, ಏಕಾಂಗಿ ಜೀವನವೂ ನನ್ನದೇ. ನಾನು ನನ್ನನ್ನೇ ರಮಿಸುತ್ತಾ ನಾನು ನನ್ನ ಜೊತೆಗೇ ಸಹಗಮಿಸುತ್ತಾ ಬದುಕುತ್ತಿದ್ದೇನೆ. ನನ್ನ ಒಂದೊಂದು ಅವಸ್ಥೆಗೆ ಒಂದೊಂದು ಹೆಸರು’ ಅಂತ ಸೂರ್ಯನೇ ಹೇಳುತ್ತಾನೆ.

ನನಗೆ ಅಗ್ನಿಯ ಪರಿಕಲ್ಪನೆ ಇಷ್ಟ. ನಾವೆಲ್ಲ ನಮ್ಮ ನಮ್ಮ ಅಗ್ನಿಯನ್ನು ನಾವೇ ಬದುಕಬೇಕು. ಹಾಗೆಯೇ ಬೆಂಕಿ ಬೆಂಕಿಯಾಗಿಯೇ ಇರಬೇಕು. ಈ ಜಗತ್ತಿನಲ್ಲಿ ಮನುಷ್ಯ ಮನುಷ್ಯನಾಗಿ ಬದುಕುವುದಕ್ಕೆ ಕಂಟಕಗಳು ಎದುರಾದಾಗಲೆಲ್ಲ ಕಲಾವಿದರು, ಶಿಲ್ಪಿಗಳು, ಚಿತ್ರಕಾರರು, ಬರಹಗಾರರು, ಪತ್ರಕರ್ತರು, ನಾಟಕಕಾರರು, ಹಾಡುಗಾರರು ಎದ್ದು ನಿಂತಿದ್ದಾರೆ. ಜಗತ್ತಿನ ಸಾಹಿತ್ಯದಲ್ಲಿ ಬಂದದ್ದನ್ನು ಓದುತ್ತಾ, ಕೇಳುತ್ತಾ ನಾವು ಸಂಭ್ರಮಿಸುವ ಹೊತ್ತಿಗೇ, ನಮ್ಮನ್ನೆಲ್ಲ ಅಮಾನುಷವಾದ ಜಗತ್ತಿಗೆ ಕಾಲಿಡದಂತೆ ಕಾಯುತ್ತಿರುವವರು ಅವರೇ. ಯಾವಾಗ ಮನುಷ್ಯನ ಒಳಗಿನ ರಾಕ್ಷಸತ್ವ ಹೊರಗೆ ಬಂದಿದೆಯೋ ಆಗೆಲ್ಲ ಕಲಾ ಜಗತ್ತಿಗೆ ಸೇರಿದವರು ಅದನ್ನು ತಡೆದು ನಿಲ್ಲಿಸಿದ್ದಾರೆ. ಮತ್ತೆ ಭರವಸೆಯನ್ನು ತುಂಬಿದ್ದಾರೆ.

ನನ್ನ ಪ್ರಕಾರ ಇಪ್ಪತ್ತೊಂದನೆಯ ಶತಮಾನಕ್ಕೆ ಬೇಕಾಗಿರುವುದು ಮನುಷ್ಯ ಒಂದಾಗಿ ಬದುಕಲಿಕ್ಕೆ ಅವಕಾಶ ಮಾಡಿಕೊಡುವ ಧರ್ಮ. ಅವನ ಆಧುನಿಕ ಅವಶ್ಯಕತೆಗಳಿಗೆ ಒಡನಾಡಿ ಆಗಬಲ್ಲಂಥ ಧರ್ಮ. ನಾವು ನದಿಯ ಹಾಗೆ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಾ ಮುಂದುವರಿಯಬೇಕೇ ಹೊರತು, ನಾನು ಹುಟ್ಟಿದಲ್ಲೇ ನಿಲ್ಲುತ್ತೇನೆ ಅನ್ನುವುದು ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ. ಬದುಕಿನ ಅರ್ಥವೇ ವಿಕಾಸ ಹೊಂದುವುದು. ಗೋಪಾಲಕೃಷ್ಣ ಅಡಿಗರು ಬರೆಯುವ ಹಾಗೆ ಮನುಷ್ಯನಿಗೆ ಕೂಡ ‘ಕತ್ತಲಲ್ಲಿ ಬೆಳೆವುದೊಂದೆ ಕೆಲಸ’. ನಮಗೆ ಬದುಕುವುದಕ್ಕೆ ಕಾರಣ ಕಂಡುಕೊಂಡರೆ ಅಷ್ಟೇ ಸಾಕು. ವಿನಾಶಕ್ಕೆ ನೆಪಗಳನ್ನು ಹುಡುಕಿಕೊಳ್ಳುವುದಕ್ಕೆ ನಾವು ಹೋಗಬಾರದು.

ಪಯಣದ ಖುಷಿಯಿರುವುದೇ ಪ್ರಯಾಣದಲ್ಲಿ. ಪಯಣದ ಕೊನೆಯಲ್ಲಿ ಅಲ್ಲ. ಒಂದು ಉತ್ತುಂಗ ಶಿಖರವನ್ನು ಏರಿದವನಿಗೆ ಮರುಕ್ಷಣವೇ ತಾನಲ್ಲಿ ಒಂಟಿಯಾಗಿದ್ದೇನೆ ಅನ್ನುವುದು ಅರಿವಾಗುತ್ತದೆ. ಆ ಉತ್ತುಂಗವನ್ನು ನೋಡಿ ಅವನು ಮತ್ತೆ ಮನುಷ್ಯರ ಸಹವಾಸಕ್ಕೆ ಮರಳಲೇಬೇಕು. ಸಹಬಾಳ್ವೆಗೆ ಬರದೇ ಹೋದರೆ ಆತನಿಗೆ ಮುಕ್ತಿಯಿಲ್ಲ. ಹೀಗಾಗಿ ಉದಾತ್ತವಾದದ್ದು ತಾನೇನು ಬಿಟ್ಟು ಹೋಗುತ್ತಿದ್ದೇನೆ ಅನ್ನುವ ದರ್ಶನವನ್ನು ಒದಗಿಸಬೇಕೇ ಹೊರತು, ಎಲ್ಲವನ್ನೂ ತೊರೆದು ಹೊರಟು ಹೋಗುವ ಜಾಗ ಅಲ್ಲ.

ಹಾಗಾಗಿಯೇ ನಾವು ಆಕಾಶದತ್ತ ಹೊರಟರೂ ಸೂರ್ಯನಾಚೆಗೆ ಮತ್ತೊಂದು ಸೂರ್ಯ ಅನ್ನುತ್ತಾರೆ. ಶತಕೋಟಿ ಸೂರ್ಯರಿದ್ದಾರೆ ಅನ್ನುವ ಕಲ್ಪನೆಯಿದೆ. ಅದೇ ರೀತಿ ನಮ್ಮೊಳಗೆ ಪ್ರಯಾಣ ಹೊರಟರೂ ಕೂಡ ಜೀವಾಣು, ಪರಮಾಣು, ದೇವಕಣ ಹೀಗೆ ಅನಂತತೆಯೇ ನಮ್ಮ ಬದುಕಿನ ಸೂತ್ರ. ಎತ್ತರವೂ ಗೊತ್ತಿಲ್ಲದ ಪಾತಾಳವೂ ಗೊತ್ತಿಲ್ಲದ ಅನಂತತೆಯಲ್ಲೇ ನಾವಿದ್ದೇವೆ.

ನೀನು ನೀನಾಗಿ ಬದುಕುವುದೇ ಸತ್ಯ. ಇವತ್ತು ನಾನು ಮಾತಾಡುತ್ತಿದ್ದೇನೆ ಅಂದರೆ ನಾನು ಆಡುವ ಮಾತಲ್ಲ ಅದು. ನಾನು ಓದಿದ ಸಾಹಿತ್ಯದ, ಕಂಡುಕೊಂಡದ್ದರ ಮುಂದುವರಿಕೆ ಅದು. ನಾವು ಈಗ ಒಬ್ಬ ಸಾಹಿತಿಯ ಕುರಿತೋ, ಕವಿಯ ಕುರಿತೋ ಮಾತಾಡುತ್ತಿದ್ದರೆ ಅದು ಆ ಲೇಖಕನ, ಕವಿಯ ಪುನರ್ಜನ್ಮ. ಜ್ಞಾನದ ಪ್ರಯಾಣದ ಮುಂದುವರಿಕೆ. ಚಲನೆಗೆ ನೀನೇ ಚಾಲಕ ಶಕ್ತಿ ಕೂಡ. ‘ನೀನು ಯಾವುದರಿಂದ ಚಲನೆಯಾಗುತ್ತಿರುವೆ’ ಅನ್ನುವಷ್ಟೇ, ‘ನೀನು ಯಾವುದಕ್ಕೆ ಚಾಲನೆ ಕೊಟ್ಟಿರುವೆ’ ಅನ್ನುವುದೂ ಮುಖ್ಯ.

ಮನುಷ್ಯನಿಗೆ ಪ್ರತಿದಿನವೂ ಯಾಕೆ ಹಸಿವಾಗುತ್ತದೆ ಅನ್ನುವುದನ್ನು ಯೋಚಿಸಿ. ಹೊಟ್ಟೆ ತುಂಬುವುದು ಕ್ಷಣಿಕ. ಅದನ್ನು ಜೀರ್ಣಿಸಿಕೊಂಡು ಮತ್ತೆ ಹಸಿವಾಗುವಂತೆ ಮಾಡುವುದೇ ಕಾಯಕ. ಹಾಗಿದ್ದಾಗಲೇ ಆರೋಗ್ಯ, ಆನಂದ. ಕೆ.ಎಸ್. ನರಸಿಂಹ ಸ್ವಾಮಿಯವರ ಒಂದು ಪದ್ಯ ಹೀಗಿದೆ:

ನೀ ಬರುವ ದಾರಿಯಲಿ ಬನದೆಲರು ಸುಳಿದು

ಸಂತಸದ ಇರುಳಿನಲಿ ಆದುದನು ನುಡಿದು.

ಮುಂದೆ ಕಾದಿಹ ನೂರು ಹರುಷಗಳ ಕಣ್ ತೆರೆದು

ಪಯಣವೋ ನಿಲುಗಡೆಯೋ ನೀನರಿಯದಂತಿರಲಿ.

ಈ ಅರ್ಥದಲ್ಲಿ ಬದುಕೆಂದರೆ ನಿರಂತರತೆ. ಬದುಕೆಂದರೆ ಪ್ರಯಾಣ. ಇದನ್ನು ತೋರಿಸಿಕೊಟ್ಟ ನನ್ನೆಲ್ಲ ಪಯಣಗಳಿಗೆ ನಮಸ್ಕಾರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.