ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಜಿ ಪ್ರಧಾನಿ ಪ್ರವಾಸಕ್ಕೆ ತಡೆ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಮಲೇಷ್ಯಾದ ಮಾಜಿ ಪ್ರಧಾನಿ ನಜಿಬ್‌ ರಜಾಕ್‌ ಹಾಗೂ ಅವರ ಪತ್ನಿ ದೇಶ ಬಿಟ್ಟು ತೆರಳದಂತೆ ಮಲೇಷ್ಯಾದ ನೂತನ ಪ್ರಧಾನಿ ಮಹತಿರ್ ಮೊಹಮ್ಮದ್‌ ಆದೇಶ ಹೊರಡಿಸಿದ್ದಾರೆ.

ತನಿಖೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಮುನ್ಸೂಚನೆ ಸಿಕ್ಕ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ನಜಿಬ್‌ ಕುಟುಂಬ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ನಜಿಬ್‌ ದಂಪತಿ ಇಂಡೋನೇಷ್ಯಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರಿಂದ ರೊಚ್ಚಿಗೆದ್ದ ಕೆಲವರು ಕ್ವಾಲಾಲಂಪುರ ವಿಮಾನನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕೆಲವರು ಸರ್ಕಾರದ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬಳಿಕ ನಜಿಬ್‌, ಪತ್ನಿ ರೋಸ್ಮಾ ಮನ್ಸೂರ್‌ ಅವರಿಗೆ ವಿದೇಶ ಪ‍್ರವಾಸಕ್ಕೆ ತಡೆಯೊಡ್ಡಿ ವಲಸೆ ವಿಭಾಗದ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದರು.

ಪ್ರವಾಸ ತಡೆಹಿಡಿದ ಆದೇಶವನ್ನು ದೃಢಪಡಿಸಿದ ಪ್ರಧಾನಿ ಮಹತಿರ್‌, ‘ನಜಿಬ್‌ ದಂಪತಿ ವಿದೇಶಕ್ಕೆ ತೆರಳದಂತೆ ಆದೇಶ ಹೊರಡಿಸಿದ್ದೇನೆ. ಅವರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದಿವೆ. ಈ ಪೈಕಿ ನ್ಯಾಯಸಮ್ಮತ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಆದೇಶದ ಬಳಿಕ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ ನಜಿಬ್‌ ರಜಾಕ್‌ ಅವರು, ‘ಸರ್ಕಾರದ ಆದೇಶವನ್ನು ಗೌರವಿಸುತ್ತೇನೆ ಹಾಗೂ ಇಡೀ ಕುಟುಂಬ ದೇಶದಲ್ಲೇ ಉಳಿದುಕೊಳ್ಳುತ್ತದೆ’ ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT