ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸಲ ಹಕ್ಕು ಚಲಾಯಿಸಿದ ಖುಷಿ

ಲೈಂಗಿಕ ಅಲ್ಪಸಂಖ್ಯಾತರಿಗೆ ‌ಮತದಾನ ಮಾಡಲು ಅವಕಾಶ ಕಲ್ಪಿಸಿದ್ದ ಚುನಾವಣಾ ಆಯೋಗ
Last Updated 12 ಮೇ 2018, 20:21 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಂದಿ ತಮ್ಮ ಹಕ್ಕು ಚಲಾಯಿಸಿದರು.

ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಿಲಾಗ್ರಿಸ್‌ ಕಾಲೇಜಿನ ಮತಗಟ್ಟೆಯಲ್ಲಿ ಬೆಳಿಗ್ಗೆ ಗುರುತಿನ ಚೀಟಿಯೊಂದಿಗೆ ಬಂದ ಲೈಂಗಿಕ ಅಲ್ಪಸಂಖ್ಯಾತರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಮುಖದಲ್ಲಿ ಸಂತೋಷ ಮತ್ತು ಹುಮ್ಮಸ್ಸು ಎದ್ದು ಕಾಣುತ್ತಿತ್ತು.

ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಮತದಾನಕ್ಕೆ ಅರ್ಹರಾಗಿದ್ದರು.

‘ಸಮಾಜದಲ್ಲಿ ಎಲ್ಲರಂತೆ ತಮಗೂ ಎಲ್ಲ ಹಕ್ಕುಗಳು ಸಿಗಬೇಕು ಎಂದು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ಇದೇ ಪ್ರಥಮ ಬಾರಿಗೆ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅದನ್ನು ವ್ಯರ್ಥ ಮಾಡದೇ ಮತ ಚಲಾಯಿಸಿದ್ದೇವೆ’ ಎಂದು ಪರಿವರ್ತನ ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ ಸಂಜನಾ ಹೇಳಿದರು.

‘ನಮಗೆ ಮತದಾನದ ಹಕ್ಕು ನೀಡಿರುವುದು ಸಂತಸ ತಂದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪರಿವರ್ತನ ಟ್ರಸ್ಟ್‌ನ 41 ಜನರು ಮತದಾನ ಮಾಡಿದ್ದೇವೆ. ನಮ್ಮನ್ನು ಮನುಷ್ಯರಂತೆ ಪರಿಗಣಿಸಿದ್ದಕ್ಕೆ ಚುನಾವಣಾ ಆಯೋಗಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಅವರು ಹೇಳಿದರು.

ಸಸಿನೆಟ್ಟು ಮೊದಲ ಮತದಾನ: ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟು ಸಮೀಪದ ಕಲ್ಲಾಪು ಪಟ್ಲದ 19 ವರ್ಷದ ಯುವಕ ಯೂಸುಫ್ ಸುನೈಫ್, ಗಿಡ ನೆಡುವ ಮೂಲಕ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ಮಾತ್ರವಲ್ಲ ಮೊದಲ ಮತದಾನದ ಸವಿನೆನಪಿಗಾಗಿ ನೆಟ್ಟಿರುವ ಗಿಡವನ್ನು ಮರವಾಗುವ ತನಕ ಪೋಷಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದ್ದಾರೆ.

ಎಂಡೊ ಪೀಡಿತರಿಂದ ಮತದಾನ: ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಮತಗಟ್ಟೆಯಲ್ಲಿ 11 ಮಂದಿ ಎಂಡೋಸಲ್ಫಾನ್ ಪೀಡಿತರು ಉತ್ಸಾಹದಿಂದ ಮತ ಚಲಾಯಿಸಿದರು.

ಮತ ಚಲಾಯಿಸಿದ 100ರ ವೃದ್ಧೆಯರು

ಮಂಗಳೂರಿನ ಪಾಂಡೇಶ್ವರದಲ್ಲಿ 100 ವಯಸ್ಸಿನ ವೃದ್ಧೆ ಕೆ. ಕಮಲಬಾಯಿ ಮತ ಚಲಾವಣೆ ಮಾಡುವ ಮೂಲಕ ಮಾದರಿಯಾದರು. ಸ್ಟೇಟ್‌ಬ್ಯಾಂಕ್‌ ಸಮೀಪದ ಮತಗಟ್ಟೆಯಲ್ಲಿ ರೊಸಾರಿಯೊ ನಿವಾಸಿ ಗ್ಲೇಡಿಯಸ್‌ ಡಿಸೋಜ (100) ಕೂಡ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT