ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲೇ ಆಫ್‌’ ಮೇಲೆ ಉಭಯ ತಂಡಗಳ ಕಣ್ಣು

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯಲ್ಲಿ ‘ಪ್ಲೇ ಆಫ್‌’ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್‌ ತಂಡಗಳಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.

ಉಭಯ ತಂಡಗಳು ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಸೋತ ತಂಡದ ‘ಪ್ಲೇ ಆಫ್‌’ ಕನಸು ಬಹುತೇಕ ಕಮರಲಿದೆ. ಹೀಗಾಗಿ ಉಭಯ ತಂಡಗಳ ಪಾಲಿಗೂ ಇದು ‘ಮಾಡು ಇಲ್ಲವೇ ಮಡಿ’ ಹಣಾಹಣಿಯಾಗಿದೆ.

ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನಾಯಕತ್ವದ ರಾಯಲ್ಸ್‌ ಆರನೇ ಸ್ಥಾನ ಹೊಂದಿದೆ. 11 ಪಂದ್ಯಗಳನ್ನು ಆಡಿರುವ ಉಭಯ ತಂಡಗಳ ಖಾತೆಯಲ್ಲಿ ತಲಾ 10 ಪಾಯಿಂಟ್ಸ್‌ ಇವೆ.

ಸೂರ್ಯಕುಮಾರ್‌ ಯಾದವ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಮುಂಬೈ ತಂಡಕ್ಕೆ ಸ್ಫೋಟಕ ಆರಂಭ ನೀಡಬಲ್ಲರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡದ ಮುಖ್ಯ ಕೋಚ್‌ ಮಾಹೇಲ ಜಯವರ್ಧನೆ ಚಿಂತೆಗೆ ಕಾರಣವಾಗಿದೆ. ನಾಯಕ ರೋಹಿತ್‌, ಎವಿನ್‌ ಲೂಯಿಸ್, ಜೆ.ಪಿ.ಡುಮಿನಿ ಅವರು ಆಡಿದರೆ ತಂಡದ ಬಲ ಹೆಚ್ಚಲಿದೆ.

ಜಸ್‌ಪ್ರೀತ್ ಬೂಮ್ರಾ, ವೇಗದ ಬೌಲಿಂಗ್‌ ವಿಭಾಗದ ಅಸ್ತ್ರವಾಗಿದ್ದಾರೆ. ಮಿಷೆಲ್‌ ಮೆಕ್‌ಲೆನಾಗನ್‌, ಬೆನ್‌ ಕಟಿಂಗ್‌ ಅವರೂ ರಾಯಲ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು.

ತವರಿನ ಅಭಿಮಾನಿಗಳ ಎದುರು ಆಡಲಿರುವ ರಾಯಲ್ಸ್‌ ಕೂಡ ಗೆಲುವಿನ ಕನವರಿಕೆಯಲ್ಲಿದೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಜೋಸ್‌ ಬಟ್ಲರ್‌, ಲಯ ಕಂಡುಕೊಂಡಿರುವುದು ಈ ತಂಡಕ್ಕೆ ವರವಾಗಿದೆ. ಚೆನ್ನೈ ಎದುರಿನ ಪಂದ್ಯದಲ್ಲಿ ಬಟ್ಲರ್‌ ಅಜೇಯ 95 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಬೆನ್‌ ಸ್ಟೋಕ್ಸ್‌, ನಾಯಕ ರಹಾನೆ, ಸಂಜು ಸ್ಯಾಮ್ಸನ್‌ ಮತ್ತು ಸ್ಟುವರ್ಟ್‌ ಬಿನ್ನಿ ಅವರೂ ಗರ್ಜಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕರ್ನಾಟಕದ ಕೆ.ಗೌತಮ್‌ ತಾವು ಸಮರ್ಥ ಆಲ್‌ರೌಂಡರ್‌ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಬೌಲರ್‌ಗಳಾದ ಜೋಫ್ರಾ ಆರ್ಚರ್‌, ಧವಳ್‌ ಕುಲಕರ್ಣಿ ಮತ್ತು ಜಯದೇವ್ ಉನದ್ಕತ್‌ ಅವರ ಮುಂದೆ ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT