ಸೋಮವಾರ, ಮಾರ್ಚ್ 8, 2021
31 °C

ಹಾಕಿ: ಭಾರತಕ್ಕೆ ಜಪಾನ್ ಎದುರಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಭಾರತಕ್ಕೆ ಜಪಾನ್ ಎದುರಾಳಿ

ಡಾಂಗೈ ಸಿಟಿ, ಕೊರಿಯಾ: ಹಾಲಿ ಚಾಂಪಿಯನ್ ಭಾರತ ಮಹಿಳೆಯರ ಹಾಕಿ ತಂಡವು ಭಾನುವಾರ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ಇದರಿಂದಾಗಿ ಅನುಭವಿ ಡಿಫೆಂಡರ್ ಸುನಿತಾ ಲಾಕ್ರಾ ನಾಯಕತ್ವದ ಬಳಗಕ್ಕೆ ಆರಂಭದಲ್ಲಿಯೇ ಕಠಿಣ ಸವಾಲು ಎದುರಾಗಿದೆ. ವಿಶ್ವಶ್ರೇಯಾಂಕದಲ್ಲಿ ಜಪಾನ್ ತಂಡವು 12ನೇ ಸ್ಥಾನದಲ್ಲಿದೆ. ತನ್ನ ಡಿಫೆನ್ಸ್‌ ಕೌಶಲಗಳಿಂದ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಜಪಾನ್ ತಂಡಕ್ಕೆ ಇದೆ.

2016ರಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದ ಪಂದ್ಯವು 2–2ರಿಂದ ಡ್ರಾ ಆಗಿತ್ತು. ಹೋದ ವರ್ಷ ವಿಶ್ವ ಲೀಗ್ ಮೂರನೇ ಸುತ್ತಿನಲ್ಲಿ ಭಾರತವು 0–2ರಿಂದ ಜಪಾನ್ ಎದುರು ಸೋತಿತ್ತು.

ಶುಕ್ರವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಲಾಕ್ರಾ ಬಳಗವು ಮಲೇಷ್ಯಾ ಎದುರು 6–0 ಗೋಲುಗಳಿಂದ ಜಯಿಸಿತ್ತು. ಅದರಿಂದಾಗಿ ತುಂಬು ಆತ್ಮವಿಶ್ವಾಸದಲ್ಲಿರುವ ತಂಡವು ಜಪಾನ್ ತಂಡವನ್ನು ಎದುರಿಸಲು ಸಿದ್ಧವಾಗಿದೆ.

ಈಚೆಗಷ್ಟೇ ತಂಡದ ಮುಖ್ಯ ಕೋಚ್ ಆಗಿ ಆಧಿಕಾರ ವಹಿಸಿಕೊಂಡಿರುವ ಶೋರ್ಡ್‌ ಮ್ಯಾರಿಜ್ ಅವರಿಗೆ ಈ ಟೂರ್ನಿಯು ಮಹತ್ವದ್ದಾಗಿದೆ. ಹೋದ ವರ್ಷವೂ ಅವರು ಮಹಿಳಾ ತಂಡದ ಕೋಚ್ ಆಗಿದ್ದರು. ಈಚೆಗಷ್ಟೇ ಅವರು ಪುರುಷರ ತಂಡಕ್ಕೆ ಕೋಚ್ ಆಗಿ ನೇಮಕವಾಗಿದ್ದರು. ಅದರಿಂದಾಗಿ ಹರೇಂದರ್ ಸಿಂಗ್ ಅವರನ್ನು ವನಿತೆಯರ ತಂಡದ ಕೋಚ್ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು, ಹೋದ ವಾರ ಹರೇಂದರ್ ಸಿಂಗ್ ಅವರನ್ನು ಪುರುಷರ ತಂಡಕ್ಕೆ ಮತ್ತು ಮ್ಯಾರಿಜ್ ಅವರನ್ನು ಮಹಿಳೆಯರ ತಂಡಕ್ಕೆ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಭಾರತ ತಂಡವು ಮೊದಲ ಗುಂಪಿನಲ್ಲಿ ಚೀನಾ, ಕೊರಿಯಾ ಮತ್ತು ಮಲೇಷ್ಯಾ ತಂಡಗಳನ್ನೂ ಎದುರಿಸಲಿದೆ.

ಭಾರತ ತಂಡ: ಸುನಿತಾ ಲಾಕ್ರಾ (ನಾಯಕಿ), ಸವಿತಾ (ಗೋಲ್‌ಕೀಪರ್/ಉಪನಾಯಕಿ), ಸ್ವಾತಿ (ಗೋಲ್‌ಕೀಪರ್), ದೀಪ್ ಗ್ರೇಸ್ ಎಕ್ಕಾ, ಗುರ್ಜೀತ್ ಕೌರ್, ಸುಮನದೇವಿ ತೌದಮ್ (ಡಿಫೆಂಡರ್ಸ್‌), ಮೋನಿಕಾ, ನಮಿತಾ ಟೊಪ್ಪೊ, ನಿಕ್ಕಿ ಪ್ರಧಾನ್, ನೇಹಾ ಗೋಯಲ್, ಲಿಲಿಮಾ ಮಿಂಜ್, ನವಜ್ಯೋತ್ ಕೌರ್, ಉದಿತಾ (ಮಿಡ್‌ಫೀಲ್ಡರ್), ವಂದನಾ ಕಟಾರಿಯಾ, ಲಾಲ್‌ರೆಮಸಿಯಾಮಿ, ನವನೀತ್ ಕೌರ್, ಅನುಪಾ ಬಾರ್ಲಾ (ಫಾರ್ವರ್ಡ್ಸ್‌), ಮುಖ್ಯ ಕೋಚ್: ಶೋರ್ಡ್‌ ಮ್ಯಾರಿಜ್.

ಪಂದ್ಯ ಆರಂಭ: ಬೆಳಿಗ್ಗೆ 11

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.