ಹಸುಳೆ ಮೇಲಿನ ಅತ್ಯಾಚಾರಿಗೆ ಮರಣದಂಡನೆ

7

ಹಸುಳೆ ಮೇಲಿನ ಅತ್ಯಾಚಾರಿಗೆ ಮರಣದಂಡನೆ

Published:
Updated:
ಹಸುಳೆ ಮೇಲಿನ ಅತ್ಯಾಚಾರಿಗೆ ಮರಣದಂಡನೆ

ಇಂದೋರ್: ಅತ್ಯಾಚಾರಗಳ ಬಗ್ಗೆ ಇರುವಷ್ಟೇ ಆಕ್ರೋಶ, ಆ ಪ್ರಕರಣಗಳ ವಿಳಂಬಗತಿಯ ವಿಚಾರಣೆ, ವರ್ಷಗಳ ನಂತರ ತೀರ್ಪು ಪ್ರಕಟವಾಗುವ ಕುರಿತೂ ಇದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಹಸುಳೆ ಮೇಲಿನ ಅತ್ಯಾಚಾರ ಪ್ರಕರಣ ವೊಂದರ ತೀರ್ಪು ಕೇವಲ 22 ದಿನಗಳಲ್ಲಿ ಪ್ರಕಟವಾಗಿದೆ.

ಮೂರು ತಿಂಗಳ ಹಸುಳೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಸೆಷನ್ಸ್‌ ನ್ಯಾಯಾಲಯ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ತ್ವರಿತವಾಗಿ ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ವರ್ಷಾ ಶರ್ಮಾ ಈ ತೀರ್ಪು ನೀಡಿದ್ದಾರೆ.

ಅಪರಾಧಿ ನವೀನ್‌ ಗಡ್ಕೆಗೆ (26) ಐಪಿಸಿ ಸೆಕ್ಷನ್‌ 376(ಎ) ಮತ್ತು ಸೆಕ್ಷನ್‌ 302 ಮತ್ತು ಪೋಕ್ಸೊ ಕಾಯ್ದೆ ಅಡಿ ಶಿಕ್ಷೆ ವಿಧಿಸಲಾಗಿದೆ.

‘ಇಂತಹ ಕ್ರೂರಿಗಳು ಗ್ಯಾಂಗ್ರಿನ್‌ ಇದ್ದಂತೆ. ಗ್ಯಾಂಗ್ರಿನ್‌ ಪೀಡಿತ ಭಾಗಗಳನ್ನು ವೈದ್ಯರು ಹೇಗೆ ಕತ್ತರಿಸಿ ತೆಗೆಯುತ್ತಾರೊ, ಅದೇ ರೀತಿ ಸಮಾಜವನ್ನು ಸುರಕ್ಷಿತವಾಗಿಡಲು ಇಂತಹವರನ್ನು ದೂರವಿಡಬೇಕು. ಇಂತಹ ವ್ಯಕ್ತಿ ಸಮಾಜಕ್ಕೆ ಮಾರಕ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

‘ಪೊಲೀಸರು ರಚಿಸಿದ್ದ ವಿಶೇಷ ತನಿಖಾ ತಂಡವು ಘಟನೆ ನಡೆದು ಒಂದು ವಾರದಲ್ಲೇ ತನಿಖೆ ಪೂರ್ಣಗೊಳಿಸಿತು. ಏಪ್ರಿಲ್‌ 27ರಂದು ಆರೋಪಪಟ್ಟಿ ಸಲ್ಲಿಸಿತ್ತು’ ಎಂದು ಜಿಲ್ಲಾ ಅಭಿಯೋಜನಾ ಅಧಿಕಾರಿ ಅಕ್ರಂ ಶೇಖ್ ತಿಳಿಸಿದ್ದಾರೆ.

ಮೇ 1ರಿಂದ ಪ್ರತಿದಿನವೂ ವಿಚಾರಣೆ ನಡೆಯುತ್ತಿತ್ತು. 29 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.

‘ಬಲೂನ್ ಮಾರಾಟ ಮಾಡುತ್ತಿದ್ದ ಮಗುವಿನ ಪೋಷಕರು, ಇಲ್ಲಿನ ಐತಿಹಾಸಿಕ ರಾಜವಾಡ ಕಟ್ಟಡದ ಹೊರಗೆ ಮಲಗುತ್ತಿದ್ದರು’ ಎಂದು ಶೇಖ್‌ ವಿವರಿಸಿದ್ದಾರೆ.

‘ಜಗಳ ಮಾಡಿಕೊಂಡಿದ್ದ ಗಡ್ಕೆಯ ಹೆಂಡತಿ, ಇವನನ್ನು ಬಿಟ್ಟು ಹೋಗಿದ್ದಳು. ಏಪ್ರಿಲ್‌ 19ರಂದು ಸಂತ್ರಸ್ತ ಮಗುವಿನ ತಾಯಿಯ ಬಳಿ ಹೋಗಿ, ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದ. ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಈ ದಂಪತಿ ತಿಳಿಸಿದ ನಂತರ ಅವನು ಅಲ್ಲಿಂದ ಹೊರಗೆ ಹೋಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್‌ 20ರ ಬೆಳಗಿನ ಜಾವ ವಾಪಸ್‌ ಬಂದಿದ್ದ ಅಪರಾಧಿ, ಮಲಗಿದ್ದ ಮಗುವನ್ನು ಸಮೀಪದ ಕಟ್ಟಡ ವೊಂದಕ್ಕೆ ಹೊತ್ತೊಯ್ದು, ಅತ್ಯಾಚಾರ ಎಸಗಿದ್ದ. ಇದರಿಂದ ಮಗು ಅಳುವುದಕ್ಕೆ ಶುರು ಮಾಡಿದಾಗ, ಅದನ್ನು ಕೊಲೆ ಮಾಡಿದ್ದ. ಅದೇ ದಿನ ಮಧ್ಯಾಹ್ನ ಮಗುವಿನ ಶವ ಪತ್ತೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಮೀಪದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪಡೆದು, ತನಿಖೆ ಆರಂಭಿಸಿದ್ದರು.

ಆ ದೃಶ್ಯಾವಳಿಯಲ್ಲಿ ಗಡ್ಕೆ ಮಗುವನ್ನು ಹೊತ್ತೊಯ್ಯುತ್ತಿದ್ದುದು ಕಂಡು ಬಂದಿತ್ತು. ಇದನ್ನು ಆಧರಿಸಿ, ಕೃತ್ಯ ನಡೆದ ದಿನವೇ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸ ಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry