ಸೋಮವಾರ ಮರು ಮತದಾನ

7

ಸೋಮವಾರ ಮರು ಮತದಾನ

Published:
Updated:
ಸೋಮವಾರ ಮರು ಮತದಾನ

ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಆರ್‌.ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಎರಡನೇ ಮತಗಟ್ಟೆಯಲಿ (158/2) ಮತಯಂತ್ರದಲ್ಲಿ ಲೋಪವಿದ್ದು ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಯಿತು. ಇಲ್ಲಿ ಸೋಮವಾರ ಮರುಮತದಾನ ನಡೆಯಲಿದೆ.

ಇಲ್ಲಿನ ಮತಯಂತ್ರದಲ್ಲಿ ನಿರ್ದಿಷ್ಟ ಅಭ್ಯರ್ಥಿಯ ಹೆಸರಿನ ಮುಂದಿನ ಚಿಹ್ನೆಯ ಮುಂದಿನ ಗುಂಡಿ ಒತ್ತಿದರೆ, ಅದು ಬೇರೆ ಅಭ್ಯರ್ಥಿಗೆ ಚಲಾವಣೆಯಾಗುತ್ತಿತ್ತು. ವಿವಿಪ್ಯಾಟ್‌ನಲ್ಲೂ ಬೇರೆ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿತ್ತು. ಅನೇಕ ಮತದಾರರು ಈ ಬಗ್ಗೆ ದೂರಿದ್ದರು.

ಇಲ್ಲಿ ಮೊದಲು ಮತ ಚಲಾಯಿಸಿದ ಗಜೇಂದ್ರ, ‘ನಾನು ಹಾಕಿದ ಅಭ್ಯರ್ಥಿಯ ಬದಲು ಬೇರೆ ಅಭ್ಯರ್ಥಿಗೆ ಮತ ಚಲಾವಣೆಯಾಗಿದೆ’ ಎಂದು ತಿಳಿಸಿದರು. ಬಳಿಕ  ಐದಾರು ಮಂದಿ ಮತ ಚಲಾಯಿಸಿದ್ದರು. ಅವೆಲ್ಲವೂ ಸರಿಯಾದ ಅಭ್ಯರ್ಥಿಗೆ ಚಲಾವಣೆಯಾಗಿದ್ದವು. ನಂತರ ಮಹಿಳೆಯೊಬ್ಬರು ಗುಂಡಿ ಒತ್ತಿದಾಗ, ವಿವಿಪ್ಯಾಟ್‌ನಲ್ಲಿ ಬೇರೆಯೇ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಂಡಿತು.  ಆದರೆ, ಅವರ ಮಗ ಮತ ಚಲಾಯಿಸಿದಾಗ ಈ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ.

ಆ ಬಳಿಕ ಚೇತನಕೃಷ್ಣ ಎಂಬವರು ಮತಯಂತ್ರದ ಗುಂಡಿ ಒತ್ತಿದಾಗ ವಿವಿಪ್ಯಾಟ್‌ನಲ್ಲಿ ಅವರು ಮತ ಹಾಕಿದ ಅಭ್ಯರ್ಥಿ ಬದಲು ಬೇರೆ ಪಕ್ಷದ ಚಿಹ್ನೆ ಕಾಣಿಸಿಕೊಂಡಿತು. ಅವರು, ‘ನಾನು ಗುಂಡಿ ಒತ್ತಿದ ಅಭ್ಯರ್ಥಿಗೆ ಮತ ಚಲಾವಣೆ ಆಗಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮತಗಟ್ಟೆ ಅಧಿಕಾರಿಗಳು, ‘ನಿಮಗೆ ಇನ್ನೊಮ್ಮೆ ಮತ ಹಾಕಲು ಅವಕಾಶ ಕೊಡಲಾಗುತ್ತದೆ. ಆದರೆ, ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಹೇಳಿ, 'ನಮ್ಮ ಸಮ್ಮುಖದಲ್ಲೇ ಗುಂಡಿ ಒತ್ತಬೇಕು. ಒಂದು ವೇಳೆ ನೀವು ಹಾಕಿದ ಅಭ್ಯರ್ಥಿಯ ಚಿಹ್ನೆಯೇ ವಿವಿಪ್ಯಾಟ್‌ನಲ್ಲಿ ಕಾಣಿಸಿಕೊಂಡರೆ ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಈ ಸವಾಲು ಸ್ವೀಕರಿಸಲು ಅವರು ಒಪ್ಪಿದ್ದರು. ಅವರು ಎರಡನೇ ಬಾರಿಗೆ ಹಾಕಿದ ಮತವೂ ಬೇರೊಬ್ಬ ಅಭ್ಯರ್ಥಿಗೆ ಚಲಾವಣೆಯಾಗಿತ್ತು.

ಆ ಬಳಿಕ ಮತಗಟ್ಟೆ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿದಾಗ ಮತಯಂತ್ರದಲ್ಲಿ ಲೋಪವಿದ್ದುದು ಖಚಿತವಾಯಿತು. ಅಷ್ಟರಲ್ಲಾಗಲೇ 49 ಮತಗಳು ಚಲಾವಣೆಯಾಗಿದ್ದವು. ಬಳಿಕ ಬಿಇಎಲ್‌ ತಂತ್ರಜ್ಞರನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲಿಸಿದಾಗಲೂ ಮತಯಂತ್ರದಲ್ಲಿ ಲೋಪವಿರುವುದು ಕಂಡು ಬಂತು. ಬಳಿಕ ಮತದಾನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಕ್ಕು ಚಲಾವಣೆಗಾಗಿ ಮತಗಟ್ಟೆಗೆ ಬಂದವರಿಗೆ ‘ಇಲ್ಲಿನ ಮತ ಯಂತ್ರ ಕೆಟ್ಟು ಹೋಗಿದೆ’ ಎಂದು ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದರು.

‘ಮತದಾನ ಮುಂದುವರಿಯುತ್ತದೋ ಇಲ್ಲವೋ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿಲ್ಲ. ಹಾಗಾಗಿ ಎರಡು ಗಂಟೆಯಿಂದ ಕಾಯುತ್ತಿದ್ದೇನೆ’ ಎಂದು ಮತದಾರ ಪ್ರಭಾಕರ್‌ ತಿಳಿಸಿದರು.

‘ಮತ ಚಲಾಯಿಸಲು 12 ಗಂಟೆಗೆ ಬಂದಿದ್ದೇನೆ. ಮತಯಂತ್ರ ಕೆಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತಯಂತ್ರ ಸರಿಯಾದರೆ ಮತ್ತೆ ಇಲ್ಲಿವರೆಗೆ ಬರಬೇಕಾಗುತ್ತದೆ’ ಎಂದು ಅಶ್ವಿನಿ ಶ್ರೀನಿವಾಸ್‌ ತಿಳಿಸಿದರು.

‘ಚಲಾಯಿಸಿದ ಪ್ರತಿ ಐದು ಮತಗಳಲ್ಲಿ ಎರಡು ಮತಗಳು ಬೇರೆಯವರಿಗೆ ಚಲಾವಣೆಯಾಗುತ್ತಿದ್ದವು. ಹೆಚ್ಚಿನ ಮತಗಳು ಬಿಲ್ಲು ಬಾಣದ ಗುರುತಿಗೆ ಹೋಗುತ್ತಿದ್ದವು’ ಎಂದು ಈ ಮತಗಟ್ಟೆಯಲ್ಲಿ ರಾಜಕೀಯ ಪಕ್ಷವೊಂದರ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ ಅಣಕು ಮತದಾನ ನಡೆಸಿದಾಗ ಮತಯಂತ್ರ ಸರಿಯಾಗಿಯೇ ಕಾರ್ಯನಿರ್ವಹಿಸಿತ್ತು. ಆನಂತರ ಮತಯಂತ್ರದಲ್ಲಿ ಲೋಪ ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಿದ್ದೇವೆ’ ಎಂದು ಮತಗಟ್ಟೆ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry