ಭಾನುವಾರ, ಫೆಬ್ರವರಿ 28, 2021
23 °C
ಕೈ ಮಿಲಾಯಿಸಿದ ಬಿಜೆಪಿ– ಕಾಂಗ್ರೆಸ್ ಕಾರ್ಯಕರ್ತರು ; ಪಾಲಿಕೆಯ ಇಬ್ಬರು ಸದಸ್ಯರ ಮೇಲೆ ಹಲ್ಲೆ

ಮಾರಾಮಾರಿ, ಕಲ್ಲು ತೂರಾಟ, ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರಾಮಾರಿ, ಕಲ್ಲು ತೂರಾಟ, ಲಾಠಿ ಪ್ರಹಾರ

ಬೆಂಗಳೂರು: ವಿಜಯನಗರ ಹಾಗೂ ಸಿ.ವಿ.ರಾಮನ್‌ ನಗರದಲ್ಲಿ ಬಿಜೆಪಿ– ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ. ಶಾಂತಿನಗರದಲ್ಲಿ ಹಣ ಹಂಚುತ್ತಿದ್ದವನ ಥಳಿತ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ. ಅತ್ತಿಬೆಲೆಯಲ್ಲಿ ಪಿಎಸ್‌ಐ ಮೇಲೆ ಹಲ್ಲೆಗೆ ಯತ್ನ. ಹೊಸಕೋಟೆಯಲ್ಲಿ ಕಲ್ಲು ತೂರಾಟ.

ಇವು. ನಗರದಲ್ಲಿ ಶನಿವಾರ ಚುನಾವಣೆ ವೇಳೆ ನಡೆದ ಅಪರಾಧ ಘಟನೆಗಳು.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿಜಯನಗರದ ವಿರೂಪಾಕ್ಷೇಶ್ವರ ಸ್ವಾಮಿ ಎಜುಕೇಷನ್ ಸೊಸೈಟಿಯ ಮತಗಟ್ಟೆ ಬಳಿ ತಾತ್ಕಾಲಿಕ ಶೆಡ್‌ (ಕೆನಾಪಿ) ನಿರ್ಮಿಸುವ ಸಂಬಂಧ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಯಿತು. ಹಂಪಿನಗರ ವಾರ್ಡ್‌ ಸದಸ್ಯ ಆನಂದ್ ಹೊಸೂರ್‌ (ಬಿಜೆಪಿ) ಮೇಲೆ ಹಲ್ಲೆ ಮಾಡಲಾಯಿತು. ಸ್ಥಳಕ್ಕೆ ಬಂದ ಪೊಲೀಸರು, ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.

‘ತಲೆಗೆ ತೀವ್ರ ಪೆಟ್ಟಾಗಿತ್ತು. ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಆನಂದ್ ಅವರನ್ನು ಹೊಯ್ಸಳ ವಾಹನದಲ್ಲಿ ಶರಾವತಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ವಿಜಯನಗರ ಪೊಲೀಸರು ತಿಳಿಸಿದರು.

ಮತಗಟ್ಟೆ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಮತದಾರರನ್ನು ಬಿಟ್ಟು ಉಳಿದವರ ಓಡಾಟವನ್ನು ನಿರ್ಬಂಧಿಸಲಾಗಿತ್ತು. ಅದಕ್ಕಿಂತ ಸ್ವಲ್ಪ ದೂರದ ಚಿಕ್ಕ ಜಾಗದಲ್ಲಿ ಶೆಡ್‌ ನಿರ್ಮಿಸುವ ಸಂಬಂಧ ಮಾತಿನ ಚಕಮಕಿ ನಡೆದು ಗಲಾಟೆ ಆಯಿತು.

‘ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರಾದ ಆನಂದ್‌ ಹಾಗೂ ಪ್ರಕಾಶ್ ಎಂಬುವರನ್ನು ಬಂಧಿಸಿದ್ದೇವೆ. ಹಲ್ಲೆಗೀಡಾಗಿರುವ ಕಾರ್ಪೊರೇಟರ್ ಆನಂದ್ ಹಾಗೂ ಜಂಧಿತ ಆರೋಪಿ ಆನಂದ್, ಹಲವು ವರ್ಷಗಳಿಂದ ಸ್ನೇಹಿತರೇ ಆಗಿದ್ದರು. ಇತ್ತೀಚೆಗೆ ಬೇರೆ ಬೇರೆ ಪಕ್ಷ ಸೇರಿದ್ದರು’ ಎಂದು ಪೊಲೀಸರು ಹೇಳಿದರು.

ಕಾಂಗ್ರೆಸ್‌ ಕಾರ್ಪೊರೇಟರ್, ಮಗನ ಮೇಲೆ ಹಲ್ಲೆ: ಸಿ.ವಿ.ರಾಮನ್ ನಗರದ ಕೋನೇನ ಅಗ್ರಹಾರದಲ್ಲಿ ಕಾರ್ಪೊರೇಟರ್ ಎಂ. ಚಂದ್ರಪ್ಪ ರೆಡ್ಡಿ (ಕಾಂಗ್ರೆಸ್‌) ಹಾಗೂ ಅವರ ಮಗ ಮಧುಸೂಧನ್ ಮೇಲೆ ಹಲ್ಲೆ ಮಾಡಲಾಗಿದೆ. ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧುಸೂದನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಜೀವನ್‌ಬಿಮಾ ನಗರ ಠಾಣೆಗೆ ದೂರು ನೀಡಿರುವ ಚಂದ್ರಪ್ಪ ರೆಡ್ಡಿ, ‘ಬಿಜೆಪಿ ಶಾಸಕ ಎಸ್‌. ರಘು ಬೆಂಬಲಿಗರಾದ ಚಂದ್ರಶೇಖರ್ ರೆಡ್ಡಿ, ನಾಗರಾಜ್ ರೆಡ್ಡಿ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ವಿಶ್ವೇಶ್ವರಯ್ಯ ಕಾಲೇಜಿನ ಮತಗಟ್ಟೆ 113ರ ಬಳಿ ಬೆಳಿಗ್ಗೆಯಿಂದಲೇ ನಿಂತುಕೊಂಡು ಪ್ರಚಾರ ಮಾಡಿದ್ದೆ. ಮಧ್ಯಾಹ್ನ 2.30 ಗಂಟೆಗೆ ಊಟಕ್ಕೆ ಮನೆಗೆ ಹೊರಟಿದ್ದೆ. ಅದೇ ವೇಳೆ ಚಂದ್ರಶೇಖರ್ ರೆಡ್ಡಿ, ನಾಗರಾಜ್ ರೆಡ್ಡಿ ನನ್ನ ಜತೆ ಜಗಳ ತೆಗೆದು ಹಲ್ಲೆ ಮಾಡಿದರು. ಜಗಳ ಬಿಡಿಸಲು ಬಂದ ಮಗನನ್ನು ಥಳಿಸಿದರು. ಸ್ಥಳದಲ್ಲಿದ್ದ ಕೆಲವರು ಸಹಾಯಕ್ಕೆ ಬರುವಷ್ಟರಲ್ಲೇ ಆರೋಪಿಗಳು ಓಡಿಹೋದರು. ಸ್ಥಳೀಯರೇ ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಚಂದ್ರಪ್ಪ ಹೇಳಿದ್ದಾರೆ.

ಘಟನೆ ಸಂಬಂಧ ಬಿಜೆಪಿ ಕಾರ್ಯಕರ್ತರು ಸಹ ಪ್ರತಿ ದೂರು ನೀಡಿದ್ದು, ‘ಚಂದ್ರಪ್ಪ ಅವರೇ ತಮ್ಮ ಬೆಂಬಲಿಗರ ಜತೆ ಸೇರಿ ನಮ್ಮ ಜತೆ ಜಗಳ ತೆಗೆದರು. ಹಲ್ಲೆ ಸಹ ಮಾಡಿದರು’ ಎಂದಿದ್ದಾರೆ.

ಲಘು ಲಾಠಿ ಪ್ರಹಾರ: ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವನ್ನಾರ್‌ಪೇಟೆ ಬಳಿಯ ಮಾಯಾಬಜಾರ್‌ ಮತಗಟ್ಟೆ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತ ಮೋಹಿ, ಮತಗಟ್ಟೆ ಬಳಿ ತಮ್ಮ ಕಾರು ನಿಲ್ಲಿಸಿಕೊಂಡು ಪ್ರಚಾರ ಮಾಡುತ್ತಿದ್ದರು. ಕಾರಿನಲ್ಲಿ ಹಣವಿರುವುದಾಗಿ ಆರೋಪಿಸಿದ್ದ ಕಾರ್ಪೊರೇಟರ್ ಕೆ. ಶಿವಕುಮಾರ್ (ಬಿಜೆಪಿ) ಹಾಗೂ ಅವರ ಬೆಂಬಲಿಗರು, ಜಗಳ ತೆಗೆದು ಥಳಿಸಿದರು. ನಂತರ, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯೇ ನಡೆದುಹೋಯಿತು. ಮೋಹಿಯನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳಕ್ಕೆ ಹೋಗಿದ್ದ ಶಾಸಕ ಎನ್‌.ಎ.ಹ್ಯಾರಿಸ್‌, ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿದರು.

ಜಮೀರ್– ಲಕ್ಷ್ಮಿನಾರಾಯಣ ಜಟಾಪಟಿ; ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಆಜಾದ್ ನಗರದ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್‌ ಅಹ್ಮದ್‌ ಖಾನ್ ಹಾಗೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಿನಾರಾಯಣ ನಡುವೆ ಜಟಾಪಟಿ ನಡೆಯಿತು.

ಮತಗಟ್ಟೆ ಪಕ್ಕದ ಮನೆಯೊಂದರಲ್ಲಿ ಕುಳಿತು ಜಮೀರ್‌ ಅಹ್ಮದ್‌ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದ ಲಕ್ಷ್ಮಿನಾರಾಯಣ ಹಾಗೂ ಬೆಂಬಲಿಗರು, ಆ ಮನೆಗೆ ಹೋಗಿ ಗಲಾಟೆ ಮಾಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರನ್ನೂ ಮನೆಯಿಂದ ಹೊರಗೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಲ್ಲು ತೂರಾಟ: ಹೊಸಕೋಟೆ ತಾಲ್ಲೂಕಿನ ಗಿಡಬನಹಳ್ಳಿ ಮತಗಟ್ಟೆ ಬಳಿ ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬೆಳಿಗ್ಗೆಯಿಂದಲೇ ಮಾತಿನ ಚಕಮಕಿ ನಡೆಯುತ್ತಿತ್ತು. ಮತದಾನ ಮುಗಿಯಲು 15 ನಿಮಿಷ ಬಾಕಿ ಇರುವಾಗಲೇ ಎರಡೂ ಪಕ್ಷದ ಕಾರ್ಯಕರ್ತರು, ಪರಸ್ಪರ ಕಲ್ಲು ತೂರಾಟ ನಡೆಸಿದರು.

ಘಟನೆಯಲ್ಲಿ ಆರು ಮಂದಿ ಗಾಯಗೊಂಡರು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. 

ಆನೇಕಲ್‌ ಬಳಿಯ ಅತ್ತಿಬೆಲೆ ಮತಗಟ್ಟೆಯಲ್ಲಿ ಜಿಗಣಿ ಠಾಣೆಯ ಪಿಎಸ್‌ಐ ಮುರಳಿ ಮೇಲೆ ಹಲ್ಲೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು. ನಿರ್ಬಂಧಿತ ಪ್ರದೇಶದಲ್ಲಿ ಸುತ್ತಾಡುತ್ತಿದ್ದದ್ದನ್ನು ಪ್ರಶ್ನಿಸಿದ್ದ ಪಿಎಸ್ಐ ಜತೆ ಕಾರ್ಯಕರ್ತರು ಜಗಳ ತೆಗೆದಿದ್ದರು. ಮಧ್ಯಪ್ರವೇಶಿಸಿದ ಸ್ಥಳೀಯರು ಜಗಳ ಬಿಡಿಸಿದರು.

ಯಲಹಂಕ, ನೆಲಮಂಗಲದ ಅರಿಶಿಣಗುಂಟೆಯಲ್ಲೂ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ಆಗಿದೆ. ಐದಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ.

ಹಳ್ಳಕ್ಕೆ ಉರುಳಿಬಿದ್ದ ಕಾರು

ಯಲಹಂಕದ ಆವಲಹಳ್ಳಿ ಬಳಿ ಹಳ್ಳಕ್ಕೆ ಕಾರೊಂದು ಉರುಳಿಬಿದ್ದಿದ್ದು, ಮೂವರು ಅಪಾಯದಿಂದ ಪಾರಾಗಿದ್ದಾರೆ.

‘ನ್ಯಾಯಾಂಗ ಬಡಾವಣೆಯ ನಿವಾಸಿಗಳು, ಕಾರಿನಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದರು. ಮತ ಚಲಾಯಿಸಲೆಂದು ಅಲ್ಲಿಂದ ಮತಗಟ್ಟೆಯತ್ತ ಹೊರಟಿದ್ದರು. ಅದೇ ವೇಳೆಯೇ ಕಾರು ಹಳಕ್ಕೆ ಉರುಳಿಬಿದ್ದಿತ್ತು’ ಎಂದು ಯಲಹಂಕ ಪೊಲೀಸರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.