ಬೆಳಗಾವಿ: ಶೇ 76.18ರಷ್ಟು ಮತದಾನ

7
2008, 2013ಕ್ಕಿಂತ ಉತ್ತಮ: ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಮತ ಚಲಾವಣೆ

ಬೆಳಗಾವಿ: ಶೇ 76.18ರಷ್ಟು ಮತದಾನ

Published:
Updated:
ಬೆಳಗಾವಿ: ಶೇ 76.18ರಷ್ಟು ಮತದಾನ

ಬೆಳಗಾವಿ: ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆದಿದ್ದು, ಸರಾಸರಿ ಶೇ 76.18ರಷ್ಟು ಮತದಾನವಾಗಿದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಸ್ವೀಪ್‌ ಕೈಗೊಂಡ ಕ್ರಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಪ್ರಚಾರದ ಅಬ್ಬರದಿಂದಾಗಿ ಕಳೆದ ಎರಡು ಚುನಾವಣೆಗಿಂತ ಹೆಚ್ಚಿನ ಮತದಾನವಾಗಿದೆ.

2008ರಲ್ಲಿ ಶೇ 71.27ರಷ್ಟು, 2013ರಲ್ಲಿ ಶೇ 74.92ರಷ್ಟು ಮತದಾನವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 1.26ರಷ್ಟು ಪ್ರಮಾಣ ಹೆಚ್ಚಾಗಿದೆ.

ಅತಿ ಹೆಚ್ಚು– ಕಡಿಮೆ: ಚಿಕ್ಕೋಡಿ– ಸದಲಗಾ ಕ್ಷೇತ್ರದಲ್ಲಿ ಶೇ 84.65 ಮತದಾನವಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಈ ಕ್ಷೇತ್ರವು ಹೆಚ್ಚಿನ ಅಂಶ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಹಳ್ಳಿ ಹಳ್ಳಿಗಳ ಜನರು ಮನೆಯಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಹಾಗೂ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಅವರ ನಡುವೆ ತೀವ್ರ ಸೆಣಸಾಟ ನಡೆದಿದೆ. ಎರಡೂ ಕಡೆಯವರು ಪೈಪೋಟಿಗೆ ಇಳಿದು, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಮತ ಚಲಾಯಿಸುವಂತೆ ಜನರನ್ನು ಪ್ರೇರೇಪಿಸಿದ್ದರ ಫಲವಾಗಿ ಅತಿ ಹೆಚ್ಚು ಜನರು ಮತ ಚಲಾಯಿಸಿದ್ದಾರೆ.

ಶೇ 80ಕ್ಕಿಂತ ಹೆಚ್ಚು ಮೂರು ಕ್ಷೇತ್ರಗಳಲ್ಲಿ ಮತ ಚಲಾವಣೆಯಾಗಿವೆ. ಚಿಕ್ಕೋಡಿ– ಸದಲಗಾದಲ್ಲಿ ಶೇ 84.65, ನಿಪ್ಪಾಣಿಯಲ್ಲಿ ಶೇ 80.78 ಹಾಗೂ ಸವದತ್ತಿಯಲ್ಲಿ ಶೇ 80.05ರಷ್ಟು ಮತದಾನವಾಗಿದೆ.

ಬೆಳಗಾವಿ ನಗರ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಿರಾಶಾದಾಯಕವಾಗಿದೆ. ಬಹುತೇಕ ವಿದ್ಯಾವಂತರನ್ನೇ ಹೊಂದಿರುವ ಈ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಉತ್ತರದಲ್ಲಿ ಶೇ 63.18ರಷ್ಟು ಮತದಾನವಾಗಿದ್ದರೆ, ದಕ್ಷಿಣದಲ್ಲಿ ಇನ್ನೂ ಕಡಿಮೆ ಶೇ 61.57ರಷ್ಟು ಮತದಾನವಾಗಿದೆ. ರಾಜಕೀಯ ವ್ಯವಸ್ಥೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡಲು ತೋರುವಷ್ಟು ಉತ್ಸಾಹವನ್ನು ವಿದ್ಯಾವಂತರು ಮತಗಟ್ಟೆಗೆ ಬರಲು ತೋರುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಮೀಸಲು ಕ್ಷೇತ್ರದಲ್ಲೂ ಉತ್ತಮ: ಎಸ್‌.ಸಿ ಮೀಸಲು ಕ್ಷೇತ್ರವಾದ ಕುಡಚಿ ಹಾಗೂ ರಾಯಬಾಗ, ಎಸ್‌.ಟಿ ಮೀಸಲು ಕ್ಷೇತ್ರವಾದ ಯಮಕನಮರಡಿಯಲ್ಲಿ ಉತ್ತಮ ಮತದಾನವಾಗಿದೆ. ಅನುಕ್ರಮವಾಗಿ ಶೇ 75.86, ಶೇ 77.48 ಹಾಗೂ ಶೇ 79.79ರಷ್ಟು ಮತದಾನವಾಗಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಕೇರಿಗಳಿಗೆ ತೆರಳಿ ಹೆಚ್ಚೆಚ್ಚು ಜನರನ್ನು ಮತಗಟ್ಟೆಗೆ ಕರೆತಂದಿದ್ದಾರೆ.

ಮಹಿಳಾ ಕ್ಷೇತ್ರದ ಚಿತ್ರಣ: ಪ್ರಮುಖ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿಯೂ ಉತ್ತಮ ಮತದಾನವಾಗಿದೆ. ಬಿಜೆಪಿಯ ಶಶಿಕಲಾ ಜೊಲ್ಲೆ ಸ್ಪರ್ಧಿಸಿರುವ ನಿಪ್ಪಾಣಿ ಕ್ಷೇತ್ರದಲ್ಲಿ ಶೇ 80.78, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಸ್ಪರ್ಧಿಸಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೇ 77.52 ಹಾಗೂ ಕಾಂಗ್ರೆಸ್‌ನ ಅಂಜಲಿ ನಿಂಬಾಳ್ಕರ ಸ್ಪರ್ಧಿಸಿರುವ ಖಾನಾಪುರ ಕ್ಷೇತ್ರದಲ್ಲಿ ಶೇ 71.80ರಷ್ಟು ಮತ ಚಲಾವಣೆಯಾಗಿವೆ.ಸಮಯ     ಮತ ಚಲಾವಣೆ

ಬೆಳಗ್ಗೆ 9      ಶೇ 8

ಬೆಳಿಗ್ಗೆ 11     ಶೇ 21.9

ಮಧ್ಯಾಹ್ನ 1   ಶೇ 40.05

ಮಧ್ಯಾಹ್ನ 3   ಶೇ 54.41

ಸಂಜೆ 5       ಶೇ 69.23

ಸಂಜೆ 6       ಶೇ 76.18

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry