ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಬಂದೋಬಸ್ತ್ ನಡುವೆ ಸುಗಮ ಮತದಾನ

Last Updated 13 ಮೇ 2018, 4:32 IST
ಅಕ್ಷರ ಗಾತ್ರ

ರಾಮದುರ್ಗ: ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನ ವೇಳೆ ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಮತದಾನವು ಅತ್ಯಂತ ಶಾಂತಿಯುತವಾಗಿ ನಡೆಯಿತು. ಪೊಲೀಸರು ಸೂಕ್ತ ಬಂದೋಬಸ್ತ್‌ ಮಾಡಿದ್ದರು. ತಾಲ್ಲೂಕಿನಲ್ಲಿ ಪ್ರತಿಶತ 75.3ರಷ್ಟು ಮತದಾನವಾಗಿದೆ.

ಮಧ್ಯಾಹ್ನದ ತನಕವೂ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಚುರುಕುಗೊಂಡಿತು. ಮತದಾನಕ್ಕೆ ಮಹಿಳೆಯರು ಸೇರಿದಂತೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಹುತೇಕ ಕಡೆಗಳಲ್ಲಿ ಮಧ್ಯಾಹ್ನ ಬಿರು ಬಿಸಿಲಿನ ತಾಪಕ್ಕೆ ಮತದಾರ ಮನೆಯಿಂದ ಹೊರ ಬರಲಿಲ್ಲ. 5ರ ನಂತರ ಮತದಾರರು ಮತದಾನ ಕೇಂದ್ರಕ್ಕೆ ಒಮ್ಮೆಲೆ ಮುಗಿಬಿದ್ದರು. ಹೀಗಾಗಿ ಕೆಲ ಮತಗಟ್ಟೆಗಳಲ್ಲಿ ಕತ್ತಲಾಗುವ ತನಕವೂ ಮತದಾನ ನಡೆಯಿತು.

ಪಟ್ಟಣದ 175 ಮತಗಟ್ಟೆಯೂ (ಕೆಬಿಎಸ್‌ ಶಾಲೆ ನಂ. 1ರಲ್ಲಿ) ಸೇರಿದಂತೆ ಕೆಲ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೆಲಸ ಮಾಡದ ಕಾರಣ ಅರ್ಧ ಗಂಟೆ ತನಕ ಮತದಾನ ನಡೆಯಲಿಲ್ಲ. ತಂತ್ರಜ್ಞರು ಸ್ಥಳಕ್ಕೆ ಧಾವಿಸಿ ಯಂತ್ರಗಳನ್ನು ಸರಿಪಡಿಸಿದ ನಂತರ ಮತದಾನ ಸುಲಭಗೊಂಡಿತು.

ಮಾಜಿ ಶಾಸಕಿ ಶಾರದಮ್ಮ ಪಟ್ಟಣ, ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅಶೋಕ ಪಟ್ಟಣ ಪುರಸಭೆಯ ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮಹಾಯದೇವಪ್ಪ ಯಾದವಾಡ ಬಟಕುರ್ಕಿಯ ಮತಗಟ್ಟೆಯಲ್ಲಿ, ಜೆಡಿಎಸ್‌ನ ಎಂ. ಜಾವೀದ್‌ ಎಂಎಲ್‌ಬಿಸಿಸಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ತಾಲ್ಲೂಕಿನ ರಾಮಾಪೂರದ ಮತಗಟ್ಟೆಯಲ್ಲಿ 88 ವರ್ಷದ ರಾಮಚಂದ್ರ ಜಾಧವ ಮಗನ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ರಾಮದುರ್ಗದಲ್ಲಿ ಸ್ಥಾಪಿಸಿದ್ದ ಸಖಿ (ಪಿಂಕ್) ಮತಗಟ್ಟೆಯಲ್ಲಿ 861 ಮತದಾರರಲ್ಲಿ 293 ಪುರಷರು ಮತ್ತು 276 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ. ಈ ಮತಗಟ್ಟೆಯಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ಒಟ್ಟು 1,50,719 ಮತಗಳು ಚಲಾವಣೆಯಾದವು. ಇದರಲ್ಲಿ 78,855 ಪುರುಷರು ಮತ್ತು 72,087 ಮಹಿಖಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT