ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಹಳ್ಳಿಗಳಲ್ಲಿ ಹೆಚ್ಚಿನ ಉತ್ಸಾಹ

ಜಿಲ್ಲೆಯ ವಿವಿಧೆಡೆ ಕಂಡುಬಂದ ಚುನಾವಣೆಯ ವಿಭಿನ್ನ ನೋಟುಗಳು... l ಆತಂಕ ಮೂಡಿಸಿದ್ದ ಮಳೆ ವಾತಾವರಣ
Last Updated 13 ಮೇ 2018, 4:40 IST
ಅಕ್ಷರ ಗಾತ್ರ

ಬೆಳಗಾವಿ: ಹಕ್ಕು ಚಲಾಯಿಸಲು ಉತ್ಸಾಹ. ಸರದಿಯಲ್ಲಿ ನಿಂತು ಮತದಾನ. ಮಹಿಳೆಯರು, ಯುವತಿಯರಲ್ಲಿ ಮೂಡಿದ ಜಾಗೃತಿ. ಗುಲಾಬಿ ಬಣ್ಣದಿಂದ ಆಕರ್ಷಿಸಿದ ಕೆಲವು ಮತಗಟ್ಟೆಗಳು. ಪೊಲೀಸರೊಂದಿಗೆ ಅರೆಸೇನಾ ಪಡೆಯಿಂದಲೂ ಭದ್ರತೆ. ಕೆಲವೆಡೆ ಕಾಗದದಲ್ಲಷ್ಟೇ ಉಳಿದ ನೀತಿಸಂಹಿತೆ ನಿಯಮಗಳು!

–ಮತದಾನದ ದಿನವಾದ ಶನಿವಾರ ಯಮಕನಮರಡಿ, ಹುಕ್ಕೇರಿ ಹಾಗೂ ಗೋಕಾಕ ಮತ ಕ್ಷೇತ್ರದಲ್ಲಿ ‘ಪ್ರಜಾವಾಣಿ’ ಸಂಚರಿಸಿದಾಗ ಕಂಡುಬಂದ ನೋಟಗಳಿವು.

ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಕೆಲವು ಸಮಯ ಮೋಡ ಮುಚ್ಚಿದ್ದರಿಂದ, ಮಳೆಯಾಗುವ ಸಾಧ್ಯತೆ ಕಂಡುಬಂದಿತ್ತು. ನಂತರ, ಮೋಡಗಳು ಚದುರಿ, ಬಿಸಿಲಿನ ಕಿರಣಗಳು ಮೂಡಿದ್ದರಿಂದ ಮಳೆಯ ಆತಂಕ ದೂರವಾಯಿತು.

ನಿರ್ಣಾಯಕ ಸ್ಥಳ: ಪೊಲೀಸ್‌ ಇಲಾಖೆ ಪ್ರಕಾರ ನಿರ್ಣಾಯಕ (ಕ್ರಿಟಿಕಲ್‌) ಎಂದು ಗುರುತಿಸಲಾಗಿದ್ದ ಕ್ಷೇತ್ರಗಳಲ್ಲಿ ಒಂದಾದ ಯಮಕನಮರಡಿಯಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ಮಹಿಳಾ ಮತದಾರರನ್ನು ಉತ್ತೇಜಿಸುವ ಸಲುವಾಗಿ ಗುಲಾಬಿ ಬಣ್ಣದಿಂದಲೇ ಸಿದ್ಧಗೊಳಿಸಲಾಗಿದ್ದ ‘ಪಿಂಕ್‌ ಮತಗಟ್ಟೆ’ ಗಮನಸೆಳೆಯಿತು. ಅಲ್ಲಿ ಕಾರ್ಯನಿರ್ವಹಿಸಲು ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿತ್ತು. ಅವರು ಗುಲಾಬಿ ಬಣ್ಣದ ಸೀರೆಗಳನ್ನೇ ಧರಿಸಿದ್ದರು. ಒಬ್ಬ ಮಹಿಳಾ ಪೊಲೀಸ್‌ ಕೂಡ ಇದ್ದರು. ಪುರುಷರಿಗೂ ಮತದಾನಕ್ಕೆ ಇಲ್ಲಿ ಅವಕಾಶವಿತ್ತು.

ಸರ್ಕಾರಿ ಶಾಲೆಯ ಪ್ರತ್ಯೇಕ ಕೊಠಡಿಗಳಲ್ಲಿ 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಮುಸ್ಲಿಂ ಮತದಾರರು, ಅದರಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತಿದ್ದರು. ಹಕ್ಕು ಚಲಾಯಿಸಲು ಆಗಮಿಸಿದ ವೃದ್ಧೆಯೊಬ್ಬ
ರಿಗೆ ಅರೆಸೇನಾ ಪಡೆಯವರು ನೆರವಾದರು. ಮೊಬೈಲ್‌ ಜೊತೆ ಮತಗಟ್ಟೆಗಳತ್ತ ಹೋಗುತ್ತಿದ್ದವರನ್ನು ಭದ್ರತಾ ಸಿಬ್ಬಂದಿ ತಡೆದರು. ಮತದಾರರು, ಮತಗಟ್ಟೆಯಲ್ಲಿ ಮೊಬೈಲ್‌ ಬಳಸದಂತೆ ನೋಡಿಕೊಂಡರು. ಹೆಚ್ಚಿನ ಬಿಸಿಲೇನೂ ಇರಲಿಲ್ಲ
ವಾದ್ದರಿಂದ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಮತಗಟ್ಟೆ ಪಕ್ಕದ ಅಡುಗೆ ಕೋಣೆಯಲ್ಲಿ ಬಿಸಿಯೂಟ ಸಿಬ್ಬಂದಿ, ಚುನಾವಣಾ ಸಿಬ್ಬಂದಿಗೆ ಅಡುಗೆ ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದರು.

ಕೊನೆ ಕ್ಷಣದ ಕಸರತ್ತು: ಹುಕ್ಕೇರಿ ಪಟ್ಟಣದಲ್ಲಿ ಸಾಮಾನ್ಯ ಹಾಗೂ ಪಿಂಕ್‌ ಮತಗಟ್ಟೆಗಳ ನಡುವೆ ಇದ್ದ ರಸ್ತೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರು, ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ‘ಚೀಟಿ’ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಹೋಟೆಲ್‌ನಲ್ಲಿ ಜನಜಂಗುಳಿ ಇತ್ತು. ಪಕ್ಷಗಳ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಕೊನೆಕ್ಷಣದ ಕಸರತ್ತು ನಡೆಸುತ್ತಿದ್ದರು.

ಹುಕ್ಕೇರಿ ಕ್ಷೇತ್ರದ ಗುಡಸ್‌ ಗ್ರಾಮ ಪಿಂಕ್‌ ಮತಗಟ್ಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸ್ಟಾಂಡ್‌ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ಮೊಬೈಲ್‌ ತೆಗೆದುಕೊಂಡು ಹೋಗಬಾರದು ಎನ್ನುವ ನಿಯಮ ಪಾಲನೆಯಾಗುವಂತೆ ಅಲ್ಲಿನ ಪೊಲೀಸರಾಗಲೀ, ಮತಗಟ್ಟೆ ಸಿಬ್ಬಂದಿಯಾಗಲೀ ನೋಡಿಕೊಳ್ಳಲಿಲ್ಲ.

ಜಿಲ್ಲೆಯ ಅತಿ ಹೆಚ್ಚು ‘ನಿರ್ಣಾಯಕ’ ಎಂದು ಗುರುತಿಸಲಾಗಿದ್ದ ಗೋಕಾಕ ಕ್ಷೇತ್ರದ ವ್ಯಾಪ್ತಿಗೆ ಬರುವ ಮಲ್ಲಾಪುರ ಪಿ.ಜಿ. ಗ್ರಾಮದಲ್ಲಿ ಅರೆಸೇನಾ ಪಡೆಯವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಶಾಲೆಯಲ್ಲಿ ಐದು ಮತಗಟ್ಟೆಗಳಿದ್ದವು.

ನಿಯಮ ಲೆಕ್ಕಕ್ಕಿಲ್ಲ!: ಮತಗಟ್ಟೆಯಿಂದ 100 ಮೀ. ಅಂತರದಲ್ಲಿ ಜನರು ಗುಂಪು ಸೇರುವಂತಿಲ್ಲ ಎಂಬ ನಿಯಮವಿದ್ದರೂ, ಅದು ಇಲ್ಲಿ ಜಾರಿಯಾಗಲಿಲ್ಲ. ಏಕೆಂದರೆ, ಮತಗಟ್ಟೆ ಎದುರಿನ ರಸ್ತೆ ಬದಿಯಲ್ಲಿಯೇ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ನಿಂತಿದ್ದರು. ಪ್ರಚಾರ ನಡೆಸುತ್ತಿದ್ದರು!

85 ವಯಸ್ಸಿನ ಕಾಡಪ್ಪ ಜೋಡಟ್ಟಿ ಹಾಗೂ 74ರ ಕಮಲವ್ವ ದಂಪತಿ ಜೋಡಿಯಾಗಿ ಬಂದು ಮತದಾನ ಮಾಡಿ ಮಾದರಿ ಎನಿಸಿದರು. ಪತಿಯನ್ನು ಪತ್ನಿಯೇ ಕೈಹಿಡಿದುಕೊಂಡು ಕರೆತಂದಿದ್ದರು. ‘ಎಲ್ಲ ಚುನಾವಣೆಯಲ್ಲೂ ಜೊತೆಯಾಗಿಯೇ ಬಂದು ಮತ ಚಲಾಯಿಸಿದ್ದೇವೆ. ಯಾವ ಬಾರಿಯೂ ತಪ್ಪಿಸಿಕೊಂಡಿಲ್ಲ’ ಎಂದು ಈ ದಂಪತಿ ಪ್ರತಿಕ್ರಿಯಿಸಿದರು.

ವಿದ್ಯುತ್‌ ದೀಪಾಲಂಕಾರ, ಗಾಲಿ ಕುರ್ಚಿ: ಅರಭಾವಿ ಕ್ಷೇತ್ರದ ಅರಭಾವಿ ಗ್ರಾಮದ ಮಾರುತಿ ದೇವಾಲಯದ ಬಳಿ ತೆರೆಯಲಾಗಿದ್ದ ಮತಗಟ್ಟೆಯನ್ನು ಗುಲಾಬಿ ಬಣ್ಣದಿಂದ ಸಿಂಗರಿಸಲಾಗಿತ್ತು. ವಿದ್ಯುತ್‌ ದೀಪಗಳನ್ನೂ ಹಾಕಲಾಗಿತ್ತು. ‘ಮತದಾನದ ಮುನ್ನಾದಿನವಾದ ಶುಕ್ರವಾರ ರಾತ್ರಿ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು’ ಎಂದು ಸ್ಥಳೀಯರು ತಿಳಿಸಿದರು. ಇಲ್ಲಿ, ಮತದಾನ ಮಾಡಲು ಬರುವ ಅಶಕ್ತರ ಅನುಕೂಲಕ್ಕಾಗಿ ಗಾಲಿ ಕುರ್ಚಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಇಲ್ಲೂ 100 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿರುವ ಆದೇಶ ಪಾಲನೆಯಾಗಲೇ ಇಲ್ಲ. ಒಬ್ಬ ಪೊಲೀಸ್‌ ಸಿಬ್ಬಂದಿಯನ್ನು ಮಾತ್ರವೇ ನಿಯೋಜಿಸಲಾಗಿತ್ತು. ಗೋಕಾಕ ಪಟ್ಟಣದಲ್ಲೂ ಮತದಾನ ಬಿರುಸಿನಿಂದ ನಡೆಯಿತು. ಗ್ರಾಮಾಂತರ ಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮಾತ್ರವೇ ರ‍್ಯಾಂಪ್‌, ಗಾಲಿ ಖುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ಉಲ್ಲಂಘಿಸಿದರೂ ಪ್ರಶ್ನಿಸಲಿಲ್ಲ!

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗುಡಸ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ್ ಕತ್ತಿ ಪುತ್ರ ಪೃಥ್ವಿ ಕತ್ತಿ ಮಾದರಿ ನೀತಿಸಂಹಿತೆ ಉಲ್ಲಂಘಿಸಿದರು.

ಅಂಗಿಯ ಜೇಬಿನ ಮೇಲೆ ಬಿಜೆಪಿಯ ಕಮಲದ ಚಿಹ್ನೆಯನ್ನು ಹಾಕಿಕೊಂಡೇ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದಿದ್ದರು. ಮೂರೂ ಮತಗಟ್ಟೆಗಳಿಗೂ ಹೋಗಿ ಮತದಾರರಿಗೆ ಕೈಮುಗಿದು ಪ್ರಚಾರವನ್ನೂ ಮಾಡಿದರು. ಅವರನ್ನು ಮತಗಟ್ಟೆ ಸಿಬ್ಬಂದಿ ಅಥವಾ ಪೊಲೀಸರು ತಡೆಯಲೇ ಇಲ್ಲ! ಅವರ ದೊಡ್ಡಪ್ಪ ಉಮೇಶ್ ಕತ್ತಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT