ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಪ್ಪಾ ಹೋಗ್ರೋ; ಎಷ್ಟಂತ್ ಹೇಳೋದು!’

ಕಿತ್ತೂರು ಪಿಂಕ್ ಮತದಾನದಲ್ಲಿ ಪೋಲಿಗಳ ಕಿರಿಕ್
Last Updated 13 ಮೇ 2018, 4:44 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಯಪ್ಪಾ ಎಷ್ಟಂತ ಹೇಳೋದ್ರಿ ನಿಮಗ್, ವೋಟ್ ಹಾಕಿರೋ ಇಲ್ಲೋ, ಹಾಕಿದ್ರ ಇಲ್ಲಿ ನಿಂತ್ಕೊಬ್ಯಾಡ್ರಿ, ಹೋಗ್ರಿ...

ಇದೇ ಪ್ರಥಮ ಬಾರಿಗೆ ಚುನಾವಣೆ ಆಯೋಗ ಜಾರಿಗೆ ತಂದಿದ್ದ ಇಲ್ಲಿಯ ಪಟ್ಟಣ ಪಂಚಾಯ್ತಿಯ 211ನೇ ‘ಸಖಿ ಗುಲಾಬಿ ಮತಗಟ್ಟೆ’ಯ ಎದುರು ಸೇರಿದ್ದ ಯುವಕರ ಗುಂಪು ಚದುರಿಸಲು ಮಹಿಳಾ ಪೊಲೀಸ್ ಸಿಬ್ಬಂದಿ ಹೀಗೆ ಹೇಳುತ್ತ ಪ್ರಯಾಸ ಪಡುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು.

ಸಖಿ ಮತಗಟ್ಟೆಯಲ್ಲಿ ಅಧಿಕಾರಿಗಳು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಎಲ್ಲರೂ ಮಹಿಳೆಯರೇ ಆಗಿದ್ದರಿಂದ ಯುವಕರು ಈ ಮತಗಟ್ಟೆ ಎದುರು ಹೆಚ್ಚು ಜಮಾಯಿಸುತ್ತಿದ್ದರು. ದ್ವಿಚಕ್ರ ವಾಹನವನ್ನು ಮತಗಟ್ಟೆ ಬಳಿಯೇ ನಿಲ್ಲಿಸುತ್ತಿದ್ದರು. ಮಹಿಳಾ ಪೊಲೀಸ್ ಸಿಬ್ಬಂದಿಗೆ ಅವರನ್ನು ಅಲ್ಲಿಂದ ಚದುರಿಸಲು ಸಾಕು ಬೇಕಾಯಿತು. ಮಹಿಳಾ ಪೊಲೀಸರೇ ಒಂದಿಬ್ಬರು ಪೋಲಿಗಳಿಗೆ ಲಾಠಿ ರುಚಿ ತೋರಿಸಿದಾಗ ಅಲ್ಲಿಂದ ಯುವಕರ ಗುಂಪು ಚದುರಿತು.

ಏಜೆಂಟರು ಪುರುಷರು:

ಸಖಿ ಮತಗಟ್ಟೆಯಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ ರಾಜಕೀಯ ಪಕ್ಷಗಳು ನೇಮಕ ಮಾಡಿದ್ದ ಪಕ್ಷಗಳ ಏಜೆಂಟರು ಮಾತ್ರ ಪುರುಷರಾಗಿದ್ದರು. ಇಲ್ಲೂ ಮಹಿಳೆಯರೇ ಕಾರ್ಯ ನಿರ್ವಹಿಸಿದ್ದರೆ ಸಖಿ ಮತಗಟ್ಟೆಗೊಂದು ಅರ್ಥಪೂರ್ಣವಾಗಿರುತ್ತಿತ್ತು ಎಂದು ಲಕ್ಷ್ಮಣ ಬಣಕಾರ ಅಭಿಪ್ರಾಯಪಟ್ಟರು.

ಕಿತ್ತೂರಿನ ಸಖಿ ಮತಗಟ್ಟೆಯ ಸ್ಥಿತಿ ಈ ರೀತಿಯಾಗಿದ್ದರೆ, ಬೈಲೂರಿನ ಪಿಂಕ್ ಮತಗಟ್ಟೆ ಭದ್ರತೆಗೆ ಪುರುಷ ಪೊಲೀಸ್ ಕಮಾಂಡರ್‌ಗಳನ್ನು ನೇಮಿಸಲಾಗಿತ್ತು.

ಚುರುಕಿನ ಮತದಾನ:

ಕಿತ್ತೂರು ವಿಧಾನಸಭೆ ಮತಕ್ಷೇತ್ರದಲ್ಲಿ ಆರಂಭದಿಂದಲೂ ಕೆಲ ಮತಗಟ್ಟೆಗಳಲ್ಲಿ ಚುರುಕಿನ ಮತದಾನ ನಡೆಯಿತು. ಕುಲವಳ್ಳಿ, ಬೈಲೂರು, ದೇವಗಾಂವ, ಕಿತ್ತೂರಿನ ಕೆಲ ಮತಗಟ್ಟೆಗಳು ಮಧ್ಯಾಹ್ನದೊಳಗೆ ಶೇ 50ರಷ್ಟು ಮತದಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT