7
ವಿಧಾನಸಭೆ ಚುನಾವಣೆ ಮತದಾನ, ಸುಡುಬಿಸಿಲಲ್ಲೂ ಕುಂದದ ಮತದಾರರ ಉತ್ಸಾಹ, ಮೇ 15ರಂದು ಫಲಿತಾಂಶ

ಮತಯಂತ್ರದಲ್ಲಿ ಅಭ್ಯರ್ಥಿಗಳ ‘ಭವಿಷ್ಯ’ ಭದ್ರ

Published:
Updated:
ಮತಯಂತ್ರದಲ್ಲಿ ಅಭ್ಯರ್ಥಿಗಳ ‘ಭವಿಷ್ಯ’ ಭದ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೆ ವಿಧಾನಸಭೆ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 7ಕ್ಕೆ ಶುರುವಾದ ಮತದಾನ ಆರಂಭದಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆಯಿತು.

ಅನೇಕ ಕಡೆಗಳಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಮತದಾನದ ಹಕ್ಕು ಚಲಾಯಿಸಿದರು. ಮೊದಲ ಬಾರಿ ಮತ ಚಲಾಯಿಸಲು ಬಂದಿದ್ದ ಯುವ ಮತದಾರರು ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತ ಚಲಾಯಿಸುವುದನ್ನೇ ಕುತೂಹಲದಿಂದ ಎದುರು ನೊಡುತ್ತಿದ್ದರು. ಇನ್ನು ಮತ ಚಲಾಯಿಸಿ ಬಂದವರ ಮೊಗದಲ್ಲಂತೂ ಏನೋ ಸಾಧಿಸಿದ ಕಳೆ ಗೋಚರಿಸುತ್ತಿತ್ತು.

ವಯೋವೃದ್ಧರು, ಅಂಗವಿಕಲರು ಸಹ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದರು. ಅಂಗವಿಕಲರು ಮತ್ತು ನಡೆಲಾರದಂತಹ ಸ್ಥಿತಿಯಲ್ಲಿರುವ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ಸಂಪೂರ್ಣ ಗುಲಾಬಿಮಯ ಅಲಂಕೃತಗೊಂಡಿದ್ದ, ಸಂಪೂರ್ಣ ಮಹಿಳಾ ಅಧಿಕಾರಿಗಳೇ ನಿರ್ವಹಿಸಿದ ‘ಸಖಿ’ ಮತಗಟ್ಟೆಗಳು ಮತದಾರರ ಜನರ ಗಮನ ಸೆಳೆದವು. ಭದ್ರತೆಗಾಗಿ ಸಾಮಾನ್ಯ ಮತಗಟ್ಟೆ ಬಳಿ ಪೊಲೀಸ್ ಸಿಬ್ಬಂದಿ ಮತ್ತು ಅತಿ ಸೂಕ್ಷ್ಮ, ಹೆಚ್ಚು ಅತಿ ಸೂಕ್ಷ್ಮವಾದ ಮತಗಟ್ಟೆಗಳ ಬಳಿ ಅರೆ ಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿತ್ತು.

ಗುಡಿಬಂಡೆ ತಾಲ್ಲೂಕಿನ ರೂರಲ್ ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಗುಂತೂರುಪಲ್ಲಿ ಗ್ರಾಮಸ್ಥರು ಬೆಳಿಗ್ಗೆ ಕೆಲ ಹೊತ್ತು ಮತದಾನ ಬಹಿಷ್ಕರಿಸಿದರು. ಬಳಿಕ ಅಧಿಕಾರಿಗಳ ಮನವೊಲಿಕೆ ನಂತರ ಮತ ಚಲಾಯಿಸಿದರು. ಮತದಾನ ಪ್ರಮಾಣದ ಅಂಕಿಅಂಶಗಳನ್ನು ಅವಲೋಕಿಸಿದಾಗ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಕ್ಷೇತ್ರಗಳು ಮತದಾನದಲ್ಲಿ ದಿನವಿಡೀ ಮುಂಚೂಣಿಯಲ್ಲಿದ್ದವು.

ಐದು ಕ್ಷೇತ್ರಗಳ ಸ್ಪರ್ಧಾ ಕಣಗಳಲ್ಲಿದ್ದ 77 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ‘ಅದೃಷ್ಟ’ ಒಲಿಯಲಿದೆ ಎಂದು ಮೇ 15 ರಂದು ತಿಳಿಯಲಿದೆ.

ಹಲವೆಡೆ ಇವಿಎಂ ದೋಷ

ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಅನೇಕ ಕಡೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡು ಮತದಾನ ವಿಳಂಬವಾದದ್ದು ವರದಿಯಾಗಿದೆ.

ಚಿಂತಾಮಣಿ ಕ್ಷೇತ್ರದ 90, 246, ಮತ್ತು 248 ಮತಗಟ್ಟೆಗಳು, ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ, ಕುತ್ತಾಂಡಹಳ್ಳಿ, ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಮತ್ತು ಚೌಟಕುಂಟಹಳ್ಳಿ, ಬಾಗೇಪಲ್ಲಿ ತಾಲ್ಲೂಕಿನ ರಾಮೋಜಿಪಲ್ಲಿ, ಗೌರಿಬಿದನೂರು ತಾಲ್ಲೂಕಿನ ಹೊಸೂರು ಮತಗಟ್ಟೆ 3ರ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂತಪ್ಪನಹಳ್ಳಿ ಮತಗಟ್ಟೆಯಲ್ಲಿ ಇವಿಎಂನಲ್ಲಿದ್ದ ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಶಾಹಿ ಬಳಿದದ್ದು ಗಮನಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಏಜೆಂಟರು ಮತದಾನ ರದ್ದುಪಡಿಸಿ, ಮರು ಮತದಾನ ನಡೆಸುವಂತೆ ಆಗ್ರಹಿಸಿದರು. ಅದಕ್ಕೆ ಒಪ್ಪದ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಿದರು.

ಗೌರಿಬಿದನೂರಿನ ಜೋಡಿಬಿಸಿಲಹಳ್ಳಿಯಲ್ಲಿ ಮತದಾನ ಪ್ರಾರಂಭಗೊಂಡ 30 ನಿಮಿಷಗಳಲ್ಲೇ ಇವಿಎಂನಲ್ಲಿ ದೋಷ ಕಾಣಿಸಿಕೊಂಡಿತು. ಕ್ರಮ ಸಂಖ್ಯೆ 11 ಮತ್ತು 12ನೇ ಅಭ್ಯರ್ಥಿಗಳಿಗೆ ಮತಗಳು ಚಲಾವಣೆಯಾಗುತ್ತಿಲ್ಲ ಎಂಬ ದೂರು ಕೇಳಿ ಬಂದ ಕಾರಣ ಮಧ್ಯಾಹ್ನ 12 ಗಂಟೆ ಸುಮಾರಿ ಮತಯಂತ್ರ ಬದಲಿಸಲಾಯಿತು.

ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 7.30ರ ಸುಮಾರಿಗೆ ಮಹಿಳೆಯೊಬ್ಬರು ಇವಿಎಂನಲ್ಲಿ ನೀಲಿ ಬಣ್ಣದ ಬಟನ್ ಒತ್ತುವ ಬದಲು ಕೆಂಪು ದೀಪ ಜೋರಾಗಿ ಒತ್ತಿದ ಕಾರಣ ಕೆಲ ಹೊತ್ತು ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಮತಗಟ್ಟೆ ಸಿಬ್ಬಂದಿ ಸರದಿಯಲ್ಲಿದ್ದ ಮತದಾರರಿಗೆ ನೀಲಿ ಬಣ್ಣದ ಬಟನ್ ಮಾತ್ರ ಒತ್ತುವಂತೆ ಮನವಿ ಮಾಡಿದರು.

ವಿವಿಧೆಡೆ ಕಾರ್ಯಕರ್ತರ ಗಲಾಟೆ

ಚಿಂತಾಮಣಿ 3ನೇ ವಾರ್ಡ್‌ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಮತದಾರರನ್ನು ಓಲೈಸುವ ವಿಚಾರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಅವರ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.

ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜಿಗಾನಹಳ್ಳಿ ಮತ್ತು ಬಚ್ಚಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆದರೂ ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಎಲ್ಲವೂ ತಿಳಿಯಾಯಿತು.

ಚಿಕ್ಕಬಳ್ಳಾಪುರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ತೆರೆದ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ವಿ.ನವೀನ್ ಕಿರಣ್ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.

ಬಚ್ಚೇಗೌಡರ ಅನಾರೋಗ್ಯದ ವದಂತಿ

ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರಿಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂಬ ವದಂತಿಯೊಂದು ಮಧ್ಯಾಹ್ನ ಸಾರ್ವಜನಿಕ ವಲಯದಲ್ಲಿ ಹರಿದಾಡಿತು.

ಈ ಕುರಿತು ಸ್ಪಷ್ಟನೆ ನೀಡಿದ ಜೆಡಿಎಸ್ ಮುಖಂಡ ಮಟಮಪ್ಪ ಅವರು ಇದೊಂದು ಸುಳ್ಳು ಸುದ್ದಿ. ಬಚ್ಚೇಗೌಡರು ಆರೋಗ್ಯವಾಗಿದ್ದಾರೆ. ಮತಗಟ್ಟೆಗಳ ವೀಕ್ಷಣೆ ತೆರೆಳಿದ್ದಾರೆ ಎಂದು ಊಹಾಪೋಹಕ್ಕೆ ತೆರೆ ಎಳೆದರು.

ಗಣ್ಯರ ಮತದಾನ ಎಲ್ಲೆಲ್ಲಿ?

ಸಂಸದ ವೀರಪ್ಪ ಮೊಯಿಲಿ ದಂಪತಿ ಸೇರಿದಂತೆ ಜಿಲ್ಲೆಯ ವಿವಿಧ ಗಣ್ಯರು ಮತ ಚಲಾಯಿಸಿದರು. ವೀರಪ್ಪ ಮೊಯಿಲಿ ಅವರು ಚಿಕ್ಕಬಳ್ಳಾಪುರದ ನಗರಸಭೆ ಆವರಣದ ಮತಗಟ್ಟೆಯಲ್ಲಿ, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್, ಡಾ.ಪ್ರೀತಿ ದಂಪತಿ ತಾಲ್ಲೂಕಿನ ಪೇರೇಸಂದ್ರದಲ್ಲಿ ಮತ ಹಾಕಿದರು.

ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಕುಪ್ಪಳಿಯಲ್ಲಿ, ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್ ಅವರು ನಗರದ ಕೇಂದ್ರ ಗ್ರಂಥಾಲಯದ ಬಳಿ ಮತಗಟ್ಟೆಯಲ್ಲಿ, ಪಕ್ಷೇತರ ಅಭ್ಯರ್ಥಿಯಾದ ಕೆ.ವಿ.ನವೀನ್ ಕಿರಣ್ ನಗರದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮತ ಚಲಾಯಿಸಿದರು.

ಬಾಗೇಪಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗೂಳ್ಳೂರು ಹೋಬಳಿಯ ಚಿನ್ನಕಾಯಲಪಲ್ಲಿ, ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಪಟ್ಟಣದ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆ, ಬಿಜೆಪಿ ಅಭ್ಯರ್ಥಿ, ನಟ ಸಾಯಿಕುಮಾರ್ ರಾಮಸ್ವಾಮಿಪಲ್ಲಿ, ಜೆಡಿಎಸ್ ಅಭ್ಯರ್ಥಿ ಸಿ.ಆರ್.ಮನೋಹರ್ ಬೆಂಗಳೂರಿನ ಸರ್ಜಾಪುರ, ಮಾಜಿ ಶಾಸಕ ಎನ್.ಸಂಪಂಗಿ ಗುಡಿಬಂಡೆ ತಾಲ್ಲೂಕಿನ ಮಾಚಹಳ್ಳಿಯಲ್ಲಿ ಮತ ಹಾಕಿದರು.

ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ, ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಮಾಳಪಲ್ಲಿಯಲ್ಲಿ ಮತ್ತು ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ನಾಗಸಂದ್ರದಲ್ಲಿ, ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ ಚಂದನದೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಕೆ.ಜೈಪಾಲ್ ರೆಡ್ಡಿ ಅವರು 8ನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಿಡ್ಲಘಟ್ಟ ಶಾಸಕ, ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ಅವರು ಮಧ್ಯಾಹ್ನ 3ರ ಸುಮಾರಿಗೆ ಆಸ್ಪತ್ರೆಯಿಂದ ನೇರವಾಗಿ ಎಲ್.ಮುತ್ತಗದಹಳ್ಳಿಗೆ ತೆರಳಿ ಮತ ಚಲಾಯಿಸಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ, ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಮೇಲೂರು, ಬಿಜೆಪಿ ಅಭ್ಯರ್ಥಿ ಎಚ್.ಸುರೇಶ್ ಜೆ.ವೆಂಕಟಾಪುರ ಮತ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry