ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೆಡೆ ಕೈಕೊಟ್ಟ ಮತಯಂತ್ರ

Last Updated 13 ಮೇ 2018, 6:13 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಕೆಲ ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿ.ವಿ ಪ್ಯಾಟ್‌ಗಳು ಕೈಕೊಟ್ಟ ಕಾರಣ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಚುನಾವಣಾಧಿಕಾರಿಗಳು ಸಮಸ್ಯೆ ಪರಿಹರಿಸಿ, ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ದಾವಣಗೆರೆ ತಾಲ್ಲೂಕು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಾವಿಹಾಳ್‌ ಗ್ರಾಮದಲ್ಲಿ ಮತಯಂತ್ರ
ದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅಂದಾಜು 20 ನಿಮಿಷ ಮತದಾನ ಸ್ಥಗಿತವಾಗಿತ್ತು. ಮಾಯಕೊಂಡದಲ್ಲಿ 158ನೇ ಮತಗಟ್ಟೆಯಲ್ಲಿ ದೋಷ ಕಂಡ ಮತಯಂತ್ರ ಬದಲಾಯಿಸಿ, ಮತದಾನಕ್ಕೆ ಅನುವು ಮಾಡಿಕೊಡಲಾಯಿತು.

ಹರಿಹರ ಕ್ಷೇತ್ರದಲ್ಲೂ ಕೆಲ ಮತಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಹರಿಹರ ನಗರದ ಎಂಕೆಇಟಿ ಶಾಲೆಯ ಮತಗಟ್ಟೆ, ಹಳ್ಳದಕೇರಿ ಸುಣಗಾರ ಓಣಿಯ ಮತಗಟ್ಟೆಯಲ್ಲಿ ದೋಷ ಕಂಡು ಬಂದಿದ್ದರಿಂದ ಕೆಲ ಕಾಲ ಮತದಾನ ಸ್ಥಗಿತಗೊಂಡಿತು. ಸಮಸ್ಯೆ ಸರಿಪಡಿಸಿದ ನಂತರ ಮತ್ತೆ ಮತದಾನ ಆರಂಭವಾಯಿತು. ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಮತಗಟ್ಟೆಯಲ್ಲೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತು.

ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆಯಲ್ಲಿ ಶೇ 9.78 ಮತದಾನವಾಗಿದ್ದಾಗ ಮತ ಯಂತ್ರ ಕೆಟ್ಟಿತು. ಮತ್ತೊಂದು
ಮತಯಂತ್ರ ತಂದು ಮತದಾನ ಆರಂಭಿಸಲಾಯಿತು. ಇದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು. ಸಾಸ್ವೆಹಳ್ಳಿ ಸಮೀಪದ ಚೀಲಾಪುರ, ಚನ್ನೇನಹಳ್ಳಿಯಲ್ಲೂ ತಾಂತ್ರಿಕ ದೋಷದಿಂದ ಮತದಾನಕ್ಕೆ ಕೆಲ ಕಾಲ ಅಡಚಣೆ ಉಂಟು ಮಾಡಿತು.

ಜಗಳೂರು ತಾಲ್ಲೂಕಿನ ಅಣಬೂರಿನಲ್ಲಿ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ 9 ಗಂಟೆಗೆ ಶುರುವಾಯಿತು. ಎರಡು ಗಂಟೆ ತಡವಾಗಿದ್ದರಿಂದ ಮತದಾರರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಚನ್ನಗಿರಿ ತಾಲ್ಲೂಕಿನ ಬಿಲ್ಲಹಳ್ಳಿ ಮತ್ತು ಮೇದಿಕೆರೆಯಲ್ಲಿ 8 ಗಂಟೆಗೆ ಅಂದರೆ ಒಂದು ತಾಸು ತಡವಾಗಿ ಮತದಾನ ಆರಂಭವಾಯಿತು.

ಇನ್ನು ಹರಪನಹಳ್ಳಿ ತಾಲ್ಲೂಕಿನ ಕಂಚಿಕೆರೆಯಲ್ಲೂ ಮತ ಯಂತ್ರದಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಕೆಲ ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು. ನೀಲಗುಂದ ಗ್ರಾಮದ ಮತಗಟ್ಟೆಯಲ್ಲಿ ಇವಿಎಂನ ಗುಂಡಿ ಬಿಗಿಯಾಗಿದ್ದರಿಂದ ಆ ಯಂತ್ರವನ್ನು ಬದಲಿಸಲಾಯಿತು. ಈ ವೇಳೆಗೆ 59 ಮತಗಳು ಚಲಾವಣೆಯಾಗಿದ್ದವು. ಮತ್ತಿಹಳ್ಳಿಯಲ್ಲೂ ಮತಯಂತ್ರದ ಸಮಸ್ಯೆಯಿಂದ ಬೆಳಿಗ್ಗೆ 8.45ರ ನಂತರ ಮತದಾನ ಆರಂಭವಾಯಿತು.

ವ್ಹೀಲ್‌ ಚೇರ್‌ ಇಲ್ಲದೇ ತೊಂದರೆ

ಚುನಾವಣಾ ಆಯೋಗ ಜಾಗೃತಿ ಮೂಡಿಸಿ, ಅಂಗವಿಕಲ ಮತದಾರರನ್ನು ಸೆಳೆಯಲು ಸಾಕಷ್ಟು ಶ್ರಮಿಸಿತ್ತು. ಹೀಗಿದ್ದರೂ ಸೂಕ್ತ ಸೌಲಭ್ಯ, ಅಗತ್ಯ ಸಿದ್ಧತೆಯ ಕೊರತೆಯಿಂದ ಕೆಲವೆಡೆ ಅಂಗವಿಕಲರು ಪರದಾಡಿದರು.

ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ವ್ಹೀಲ್‌ ಚೇರ್‌ ಇರಲಿಲ್ಲ. ಹೀಗಾಗಿ ಅಂಗವಿಕಲರೊಬ್ಬರು ಊರುಗೋಲು ಊರಿಕೊಂಡು ಕಷ್ಟಪಟ್ಟು ಮತಗಟ್ಟೆ ಪ್ರವೇಶಿಸಿದರು. ಮತದಾನ ಮಾಡಿ ಹಿಂತಿರುಗುವಷ್ಟರಲ್ಲಿ ಅವರು ಬಳಲಿದರು. ಹೀಗಾಗಿ ಅವರನ್ನು ಕುಟುಂಬದವರು ಎತ್ತಿಕೊಂಡು ಹೊರಗೆ ಕರೆತದಂದರು. ನಂತರ ಎಚ್ಚೆತ್ತುಕೊಂಡ ಸಿಬ್ಬಂದಿ ವ್ಹೀಲ್‌ ಚೇರ್‌ ತರಿಸಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಆಲೂರಹಟ್ಟಿಯ ಮತಗಟ್ಟೆಯಲ್ಲಿ ವ್ಹೀಲ್‌ ಚೇರ್‌ ಇದ್ದರೂ ಅಂಗವಿಕಲರು ಅದನ್ನು ಬಳಸಲಿಲ್ಲ. ‘ವ್ಹೀಲ್‌ಚೇರ್‌ ಬಳಸಿ ನಮಗೆ ಅನುಭವವಿಲ್ಲ. ನಾವು ನಡೆದುಕೊಂಡೇ ಬರುತ್ತೇವೆ’ ಎಂದು ಕೆಲ ಅಂಗವಿಕಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT