ಗುರುವಾರ , ಫೆಬ್ರವರಿ 25, 2021
29 °C
ಜಿಲ್ಲೆಯ ಬಹುತೇಕ ಮತಕ್ಷೇತ್ರಗಳಲ್ಲಿ ಕಂಡು ಬಂದ ಚಿತ್ರಣ

ನೆತ್ತಿ ಸುಡುವ ಬಿಸಿಲು; ಉತ್ಸಾಹ ತೋರದ ಮತದಾರರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆತ್ತಿ ಸುಡುವ ಬಿಸಿಲು; ಉತ್ಸಾಹ ತೋರದ ಮತದಾರರು...

ಕಲಬುರ್ಗಿ: ಜಿಲ್ಲೆಯ ಆಳಂದ ಮತ್ತು ಅಫಜಲಪುರ ಮತಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರಿಂದ ನಿರೀಕ್ಷಿತ ಉತ್ಸಾಹ ಕಂಡು ಬರಲಿಲ್ಲ.

ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ, ಆಳಂದ ಮತಕ್ಷೇತ್ರದ ಕಡಗಂಚಿ, ಕೊರಹಳ್ಳಿ, ಆಳಂದ, ಬಟ್ಟರಗಾ ಮತ್ತು ನಿಂಬರ್ಗಾ, ಅಫಜಲಪುರ ಮತಕ್ಷೇತ್ರದ ಭೈರಾಮಡಗಿ, ಅತನೂರದಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು.

ಕೆಲವು ಮತಗಟ್ಟೆಗಳಲ್ಲಿ ಯುವಕರು ತಂಡ ತಂಡವಾಗಿ ಬಂದು, ಸರತಿ ಸಾಲಿನಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ 7ರಿಂದ 9 ಗಂಟೆಗೆಯವರೆಗೆ ಸರಾಸರಿ ಶೇ 30ರಷ್ಟು ಮತದಾನವಾಗಿತ್ತು. 10 ಗಂಟೆಯ ನಂತರ ಬಿಸಿಲು ನೆತ್ತಿ ಸುಡಲು ಆರಂಭಿಸಿತು. ಇದರಿಂದ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಬೆರಳಣಿಕೆಯಷ್ಟು ಮತದಾರರು ಕಂಡು ಬಂದರು. ಸಂಜೆ 5ರಿಂದ 6ಗಂಟೆಯವರೆಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿಯಲ್ಲಿ 95 ವರ್ಷ ಬಾಶಾಬಿ, ಕಡಗಂಚಿಯಲ್ಲಿ 70 ವರ್ಷದ ರೇವಮ್ಮ ಗಡಬಳಿ, ಸ್ಟೇಷನ್‌ ಗಾಣಗಾಪುರದಲ್ಲಿ 85 ವರ್ಷದ ಶಾಂತಾಬಾಯಿ ಜಾಧವ್ ಅವರು ಕುಟುಂಬದ ಸದಸ್ಯರ ಸಹಾಯದಿಂದ ಮತ ಚಲಾಯಿಸಿದರು.

ಗುಸುಗುಸು ಪಿಸುಪಿಸು: ಎಲ್ಲ ಮತಗಟ್ಟೆ ಕೇಂದ್ರಗಳ ಮುಂಭಾಗದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಏಜೆಂಟರು ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಮತ ಚಲಾಯಿಸಿ ಬಂದವರು ತಮ್ಮ ತಮ್ಮೊಳಗೆ ಗುಸುಗುಸು ಪಿಸುಪಿಸು ಎಂದು ಮಾತನಾಡಿಕೊಳ್ಳುತ್ತಿರುವುದು ಬಹುತೇಕ ಕಡೆ ಕಂಡು ಬಂತು.

ಅಚ್ಚುಕಟ್ಟಾದ ವ್ಯವಸ್ಥೆ: ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಫ್ಯಾನ್, ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ನೆರಳಿಗಾಗಿ ಶಾಮಿಯಾನ ಹಾಕಲಾಗಿತ್ತು. ಆಳಂದ ಪಟ್ಟಣದಲ್ಲಿರುವ ಮಾದರಿ ಮತದಾನ ಕೇಂದ್ರದಲ್ಲಿ ಮತದಾರರು ಖುಷಿಯಿಂದ ಮತ ಚಲಾಯಿಸಿದರು. ಅಫಜಲಪುರ ಪಟ್ಟಣದ ಮತಗಟ್ಟೆ ಕೇಂದ್ರವೊಂದರಲ್ಲಿ ಫ್ಯಾನ್‌ ಅಳವಡಿಸಿಲ್ಲ ಎಂದು ಕೆಲ ಸಿಬ್ಬಂದಿ ಆರೋಪಿಸಿದರು.

ಅಲ್ಲಿ 12ಡಿಗ್ರಿ ಉಷ್ಣಾಂಶ!: ‘ಹಿಮಾಚಲ ಪ್ರದೇಶದಲ್ಲಿ 8ರಿಂದ 12 ಡಿಗ್ರಿ ಉಷ್ಣಾಂಶವಿರುತ್ತದೆ. ಇಲ್ಲಿ ಎಷ್ಟಿದೆ’ ಎಂದು ಆಳಂದ ತಾಲ್ಲೂಕು ನಿಂಬರ್ಗಾದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅರೆಸೇನಾಪಡೆಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು. ‘ನೀವೆ ಹೇಳಿ ಎಷ್ಟಿರಬಹುದು’ ಎಂದಾಗ, ‘40 ಡಿಗ್ರಿ’ ಎಂದರು. ‘ಇನ್ನೂ ಸ್ವಲ್ಪ ಜಾಸ್ತಿ, 42 ಡಿಗ್ರಿ ಇದೆ’ ಎಂದು ಹೇಳಿದಾಗ ‘ಅರೆ ಬಾಪರೇ’ಎಂದು ನಿಟ್ಟುಸಿರು ಬಿಟ್ಟರು.

ಮೊದಲ ಮತದಾರರ ಮಾತು..

ಬಹಳ ಖುಷಿಯಾಗಿದೆ

ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದು, ಬಹಳ ಖುಷಿಯಾಗಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಸಹಕಾರಿಯಾಗಿದೆ. ಸಂವಿಧಾನಬದ್ಧ ಹಕ್ಕನ್ನು ಎಲ್ಲರೂ ಚಲಾಯಿಸಬೇಕು – ಪುಷ್ಪಾ ಧನ್ನಿ, ಕಡಗಂಚಿ

ಮತದಾನ ಸಂಭ್ರಮ

ಮತದಾನ ಸಂಭ್ರಮ ಹೆಚ್ಚಿಸಿದೆ. ಕಳೆದ ಚುನಾವಣೆಯಲ್ಲಿ ಮತದಾನದ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ಬಾರಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿದ್ದೆ. ಖುಷಿಯಿಂದ ಬಂದು ಮತ ಚಲಾಯಿಸಿದ್ದೇನೆ – ಅಣ್ಣಾರಾಯ, ಕಡಗಂಚಿ

ಕುದುರೆ ಮೇಲೆ ಬಂದು ಮತ ಚಲಾವಣೆ!

ಕಲಬುರ್ಗಿ: ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಮತಗಟ್ಟೆ ಕೇಂದ್ರಕ್ಕೆ ನೀಲಕಂಠ ಪೊಲೀಸ್‌ಪಾಟೀಲ ಎಂಬುವರು ಕುದುರೆ ಮೇಲೆ ಬಂದು ಮತ ಚಲಾಯಿಸಿ ಗಮನ ಸೆಳೆದರು. ‘ನಾನು ಸೈಕಲ್, ಬೈಕ್ ಇಟ್ಟುಕೊಂಡಿಲ್ಲ. ಕುದುರೆ ಮೇಲೆಯೇ ಓಡಾಡುತ್ತೇನೆ. ಹೀಗಾಗಿ ಮತದಾನಕ್ಕೂ ಕುದುರೆ ಮೇಲೆ ಬಂದಿದ್ದೇನೆ’ ಎಂದು ಹೇಳುತ್ತಲೇ ಕುದುರೆ ಹತ್ತಿ ಹೋದರು.

‘ಎಲ್ಲಾ ಚುನಾವಣೆಗಳಲ್ಲೂ ಮತದಾನ’

ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಮತಗಟ್ಟೆ ಕೇಂದ್ರದಲ್ಲಿ 95 ವರ್ಷದ ಬಾಶಾಬಿ ಮತದಾನ ಮಾಡಿದರು. ಬೆನ್ನು ಬಾಗಿದ್ದರೂ ಅವರಲ್ಲಿನ ಉತ್ಸಾಹ ಬತ್ತಿರಲಿಲ್ಲ. ‘ಸ್ವಾತಂತ್ರ್ಯ ನಂತರದ ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡಿದ್ದೇನೆ. ರಜಾಕರ ಅವಧಿಯ ಗಲಭೆ, ಹೋರಾಟಗಳನ್ನು ಕೂಡ ಕಣ್ಣಾರೆ ಕಂಡಿದ್ದೇನೆ’ ಎಂದು ಹೇಳಿದರು.

ವೈದ್ಯರು, ಶುಶ್ರೂಷಕಿಯರ ನಿಯೋಜನೆ

ಆಳಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಸಖಿ ಪಿಂಕ್ ಮತಗಟ್ಟೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ, ಶುಶ್ರೂಷಕಿ ಪಾರ್ವತಿ ಅವರನ್ನು ನಿಯೋಜಿಸಲಾಗಿತ್ತು. ಆರ್‌ಎಸ್‌, ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಕೇಂದ್ರದಲ್ಲಿ ಮತದಾರರಿಗೆ ಕುಡಿಯಲು ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.