ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು–ಮಳೆಗೆ ‘ಕರಗಿದ’ ಮತದಾನ!

Last Updated 13 ಮೇ 2018, 6:49 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಮತಗಟ್ಟೆಗಳಿಗೆ ಬೆಳಿಗ್ಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿದರು. ಆದರೆ, ಬಿಸಿಲು ಹೆಚ್ಚುತ್ತಿದ್ದಂತೆ ಮತಗಟ್ಟೆಗಳಿಗೆ ಬರುವವರ ಪ್ರಮಾಣವೂ ಕಡಿಮೆ ಆಯಿತು.

ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಹೆಚ್ಚು (ಶೇ 53.60) ಮತದಾನವಾದರೆ, ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ (ಶೇ 52.36) ಮತದಾನ ದಾಖಲಾಗಿತ್ತು. ಉತ್ತರ ಕ್ಷೇತ್ರದಲ್ಲಿ ಹಿಂದು–ಮುಸ್ಲಿಂರ ಪ್ರಾಬಲ್ಯವಿರುವ ಪ್ರದೇಶಗಳ ಮತಗಟ್ಟೆಗಳಲ್ಲಿ ಬೆಳಗ್ಗೆ ಎರಡೂ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು.

ಅಭ್ಯರ್ಥಿಗಳಾದ ಚಂದ್ರಕಾಂತ ಪಾಟೀಲ, ಕನೀಜ್‌ ಫಾತಿಮಾ, ನಾಸೀರ್‌ ಹುಸೇನ್‌ ಉಸ್ತಾದ, ದತ್ತಾತ್ರೇಯ ಪಾಟೀಲ ರೇವೂರ, ಅಲ್ಲಮಪ್ರಭು ಪಾಟೀಲ, ಬಸವರಾಜ ಡಿಗ್ಗಾವಿ ಮತದಾನ ಮಾಡಿದರು.

ಸಂಜೆ ನಾಲ್ಕು ಗಂಟೆ ಸುಮಾರು ಆರಂಭಗೊಂಡ ಬಿರುಗಾಳಿ, ಗುಡುಗು ಮಿಶ್ರಿತ ಮಳೆ ಸಂಜೆ ಮತಗಟ್ಟೆಗೆ ಹೋಗುವವರ ಉತ್ಸಾಹ ಕುಂದಿಸಿತು. ಹೀಗಾಗಿ ಮತದಾನದ ಪ್ರಮಾಣ ಕುಸಿಯಲು ಬಿಸಿಲು–ಮಳೆ ಎರಡೂ ‘ಕಾರಣ’ವಾದವು.

‘ನಾವು ಪ್ರತಿ ಬಾರಿ ಇದೇ ಮತಗಟ್ಟೆಯಲ್ಲಿ ಮತದಾನ ಮಾಡುತ್ತೇವೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರೇ ಇಲ್ಲ’ ಎಂಬಂತಹ ಆರೋಪಗಳು ಅಲ್ಲಲ್ಲಿ ಕೇಳಿಬಂದವು.

‘ಚುನಾವಣಾ ಆಯೋಗದ ನಿರ್ದೇಶನದಂತೆ ಮತಚೀಟಿ (ಓಟರ್‌ ಸ್ಲಿಪ್‌)ಗಳನ್ನು ಮನೆ ಮನೆಗೆ ತಲುಪಿಸಬೇಕು. ಆದರೆ, ನಮಗೆ ಯಾರೂ ಮತಚೀಟಿ ಕೊಟ್ಟಿಲ್ಲ’ ಎಂದು ಇಲ್ಲಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮತದಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಬಂದ್‌ ಅನುಭವ: ಮತದಾನ ಅಂಗವಾಗಿ ಶನಿವಾರ ಸರ್ಕಾರಿ ರಜೆ ಇತ್ತು. ಕಾರ್ಮಿಕರಿಗೂ ವೇತನ ಸಹಿತ ರಜೆ ಘೋಷಿಸಲಾಗಿತ್ತು.

ಹೀಗಾಗಿ ನಗರದ ಬಹುತೇಕ ಅಂಗಡಿ–ಮುಂಗಟ್ಟುಗಳು ಬಂದ್‌ ಆಗಿದ್ದವು. ಪ್ರಮುಖ ರಸ್ತೆಗಳಲ್ಲಿ ಜನ–ವಾಹನ ಸಂಚಾರ ದಟ್ಟಣೆ ಇರಲಿಲ್ಲ.

ಚುನಾವಣಾ ಸಿಬ್ಬಂದಿ ಸಾಗಿಸಲು ಹೆಚ್ಚಿನ ಬಸ್‌ಗಳನ್ನು ನಿಯೋಜಿಸಿದ್ದರಿಂದ ಪ್ರಯಾಣಿಕರ ಸೇವೆಗೆ ಕಡಿಮೆ ಬಸ್‌ಗಳಿದ್ದವು. ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಹೀಗಾಗಿ ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣಕ್ಕೆ ನಿತ್ಯದ ಕಳೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT