‘ಒಂದರಲ್ಲಿ ಶಬ್ದ ಬರಲಿಲ್ಲ, ಇನ್ನೊಂದು ಒತ್ತಿದೆ’

7
ಉಳ್ಳಾಲ; ಶೇಕಡ 70 ಆರಂಭಿಕ ಮತದಾನ– ಯುವಜನತೆಯ ಉತ್ಸಾಹ

‘ಒಂದರಲ್ಲಿ ಶಬ್ದ ಬರಲಿಲ್ಲ, ಇನ್ನೊಂದು ಒತ್ತಿದೆ’

Published:
Updated:

ಉಳ್ಳಾಲ:  ‘ನಾನು ಒತ್ತಿದ ಮೊದಲ ಬಟನ್‌ನಲ್ಲಿ ಶಬ್ದ ಕೇಳಲಿಲ್ಲ. ಅದಕ್ಕಾಗಿ ಇನ್ನೊಂದು ಬಟನ್ ಒತ್ತಿದೆ. ಆ ವೇಳೆ ಶಬ್ದ ಕೇಳಿತು. ಆದರೆ ಯಾವ ಚಿಹ್ನೆಗೆ ಮತ ಚಲಾಯಿಸಿದ್ದೇನೆ ಅನ್ನುವುದು ಕೊನೆಗೂ ಗೊತ್ತಾಗಲಿಲ್ಲ’– ಸೋಮೇಶ್ವರದಲ್ಲಿ ಮತದಾನ ಮಾಡಿದ ಮಹಿಳೆಯೊಬ್ಬರು ಹೇಳಿದ ಮಾತಿದು.

ಮತಯಂತ್ರದ ಮಾಹಿತಿಯ ಕೊರತೆಯಿಂದ ಮಹಿಳೆಯೊಬ್ಬರು ಗೊಂದಲಕ್ಕೀಡಾಗಿ ಮತಚಲಾವಣೆ ನಡೆಸಿದ ಪ್ರಸಂಗ ಸೋಮೇಶ್ವರ ವ್ಯಾಪ್ತಿಯ ಮತಗಟ್ಟೆಯಲ್ಲಿ ನಡೆಯಿತು. ‘ಬಟನ್ ಒತ್ತಿದಲ್ಲಿ ಶಬ್ದ ಬರುತ್ತದೆ ಅನ್ನುವುದನ್ನು ಕೇಳಿ ತಿಳಿದಿದ್ದೆ. ಮತಗಟ್ಟೆಯಲ್ಲೂ ಒತ್ತಿದ ನಂತರ ಶಬ್ದ ಕೇಳಿದಲ್ಲಿ ಮಾತ್ರ ಮತ ಚಲಾವಣೆ ಆಗುತ್ತದೆ ಅನ್ನುವ ಸೂಚನೆ ನೀಡಿದ್ದರು’ ಎಂದು ಅವರು ತಿಳಿಸಿದರು.

ಶಾಮಿಯಾನ ತೆರವು : ಮುನ್ನೂರು ಮತಗಟ್ಟೆಗಳಲ್ಲಿ ವಿವಿದೆಡೆ ಪಕ್ಷದ ಕಾರ್ಯಕರ್ತರು ಹಾಕಲಾಗಿದ್ದ ಬೂತ್‌ಗಳನ್ನು ಪೊಲೀಸರು ತೆರವುಗೊ ಳಿಸಿದರು. ಚುನಾವಣೆ ಆರಂಭದ ಸಂದರ್ಭ ಶಾಮಿಯಾನ ಹಾಕದಂತೆ ಸೂಚಿಸಿದ್ದರೂ, ಎಲ್ಲಾ ಪಕ್ಷದವರು ಶಾಮಿಯಾನ ಹಾಕಿ ಕುಳಿತಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಚುನಾವಣೆ ವೀಕ್ಷಕರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ತೆರವುಗೊಳಿಸಿದರು. ಬಿಸಿಲನ್ನು ತಡೆಯಲು ದೊಡ್ಡ ಗಾತ್ರದ ಛತ್ರಿಯನ್ನು ಅಳವಡಿಸಿ ಕಾರ್ಯಕರ್ತರು ಬೂತುಗಳಲ್ಲಿ ಕುಳಿತರು.

ಶಾಂತಿಯುತ ಮತದಾನ : ಕುತ್ತಾರು, ಉಳ್ಳಾಲ, ಬಬ್ಬುಕಟ್ಟೆ ಭಾಗಗಳಲ್ಲಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಸಿಬ್ಬಂದಿ ಹಾಗೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಬ್ಬುಕಟ್ಟೆ ಮತಗಟ್ಟೆಯ ಸಮೀಪ ಎರಡು ಪಕ್ಷದ ಮುಖಂಡರು ಗೇಟಿನವರೆಗೆ ಹೋಗುತ್ತಿರುವುದನ್ನು ಎರಡು ಪಕ್ಷದವರು ವಿರೋಧಿಸಿ, ಆನಂತರ ಪೊಲೀಸರು ಸುಣ್ಣದ ಮೂಲಕ ಮತಗಟ್ಟೆಯ 100 ಮೀ ಅಂತರದ ಎರಡೂ ಭಾಗದಲ್ಲಿ ಗೆರೆ ಹಾಕಿ ಅದರೊಳಗೆ ವಾಹನಗಳು ಮತ್ತು ಪಕ್ಷದ ಮುಖಂಡರು ಪ್ರವೇಶಿಸದಂತೆ ನೋಡಿಕೊಂಡರು.

ಬಬ್ಬುಕಟ್ಟೆ ಮತಗಟ್ಟೆಯಲ್ಲಿ 97ವಯಸ್ಸಿನ ರಾಧಾ ಮೂಲ್ಯ ಅವರನ್ನು ಪುತ್ರ ಮತಗಟ್ಟೆಗೆ ಎತ್ತಿ ಕರೆದು ತಂದು ಮತ ಚಲಾಯಿಸಿದರು. ಅಂಬ್ಲಮೊಗರು, ಕುಂಪಲ, ಮಡ್ಯಾರು ಭಾಗದಲ್ಲಿಯೂ ಹಿರಿಯರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಗವಿಕಲ ಮತದಾರರು ಸಂಬಂಧಿಕರ ಆಶ್ರಯದೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕನ್ನು ಚಲಾಯಿಸಿದರು.

ಮಹಿಳಾ ಸ್ನೇಹಿ ಮತದಾನ ಕೇಂದ್ರ : ಉಳ್ಳಾಲ ಭಾಗದ ಬಿ.ಎಂ ಶಾಲೆ ಮತ್ತು ಮೊಗವೀರಪಟ್ನ ಶಾಲೆಯಲ್ಲಿ ಇದ್ದಂತಹ ಮಹಿಳಾ ಸ್ನೇಹಿ ಮತದಾನ ಕೇಂದ್ರ ಮಹಿಳೆಯರಿಗೆ ಸಹಕಾರಿಯಾಯಿತು. ‘ ಪುರಷರು ಇರುವ ಮತಗಟ್ಟೆಗಳಲ್ಲಿ ಪ್ರಶ್ನೆ ಕೇಳಲು ಹಿಂಜರಿಕೆಯಾಗುತಿತ್ತು. ಆದರೆ ಚುನಾವಣಾ ಆಯೋಗದ ನೂತನ ಪ್ರಯೋಗ ತುಂಬಾ ಸಹಕಾರಿಯಾಗಿದೆ’ ಎಂದು ಉಳ್ಳಾಲದ ಮಹಿಳಾ ಮತದಾರರೊಬ್ಬರು ಅಭಿಪ್ರಾಯ ಹಂಚಿಕೊಂಡರು.

ಬೆರಳೆಣಿಕೆಯ ಬೂತ್‍ಗಳು : ಜಾತ್ಯತೀತ ಜನತಾ ದಳ ಹಾಗೂ ಸಿಪಿಎಂ ಪಕ್ಷಗಳ ಬೂತ್ ಗಳು ಎಲ್ಲಾ ಮತಕೇಂದ್ರಗಳಲ್ಲಿ ಇರಲಿಲ್ಲ. ಕೆಲ ಕಡೆ ಸಿಪಿಎಂ ಬೂತ್‌ಗಳಿದ್ದರೆ, ಕೆಲ ಕಡೆ ಜೆಡಿಎಸ್ ಘಟಕಗಳು ಇದ್ದವು.

ಕ್ಷೇತ್ರಕ್ಕೆ ಕಾಲಿಡದ ಎಂಇಪಿ ಅಭ್ಯರ್ಥಿ !

ಎಂಇಪಿ ಪಕ್ಷದ ಅಭ್ಯರ್ಥಿ ಉಸ್ಮಾನ್ ಗುರುಪುರ ಮಧ್ಯಾಹ್ನ 1.50ಕ್ಕೆ ಗುರುಪುರ ಪದವಿಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು. ಅವರು ಚುನಾವಣೆ ನಿಗದಿ ಆದ ಬಳಿಕ ಮಂಗಳೂರು ಕ್ಷೇತ್ರದಲ್ಲಿ ಸಂಚರಿಸುತ್ತಾ ಮಿಂಚಿನ ಸಂಚಾರ ಉಂಟು ಮಾಡಿದ್ದರು. ನಾಮಪತ್ರ ಸಲ್ಲಿಸುವ ದಿನದಂದು ಕೇವಲ ಐದು ಮಂದಿ ಪಾಲ್ಗೊಂಡಿದ್ದರೂ ಬಳಿಕ ನಡೆದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸುಮಾರು ಐವತ್ತು ಮಂದಿ ಭಾಗವಹಿಸಿದ್ದರು. ಆದರೆ ಕಳೆದ ಐದು ದಿನಗಳಿಂದ ಉಸ್ಮಾನ್ ಅವರು ಕ್ಷೇತ್ರಕ್ಕೆ ಕಾಲಿಡಲಿಲ್ಲ. ಅವರನ್ನು ನಂಬಿದ್ದ ಯುವ ನಾಯಕರು ಬೇಸತ್ತು ಇನ್ನೊಂದು ಪಕ್ಷದತ್ತ ಮುಖ ಮಾಡಿದ್ದರು.

ಕೈಕೊಟ್ಟಿತೇ ಎಂಇಪಿ ಹೈಕಮಾಂಡ್: ಸುಮಾರು ₹35 ಲಕ್ಷ ಸ್ವಂತ ಹಣ ಖರ್ಚು ಮಾಡಿ ಎಂಇಪಿ ಹೈಕಮಾಂಡ್ ನಾಲ್ಕು ದಿನಗಳ ಹಿಂದೆ ಹಣ ನಿರೀಕ್ಷಿಸಬೇಡಿ ಎಂದು ಹೈಕಮಾಂಡ್ ಒಂದು ನಯಾ ಪೈಸೆ ಕೊಡದಿದ್ದರೆ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದು ಹೇಗೆ? ಬೂತ್ ಸೆಟ್ಟಿಂಗ್ ಸಾಧ್ಯವೇ?  ಅವರ ಪ್ರಶ್ನೆಗೆ ಹೇಗೆ ಉತ್ತರಿಸಲಿ. ಹಾಗಾಗಿ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಗಿಲ್ಲ. ಹಾಗಿದ್ದರೂ ಮುಂದೆ ಮಂಗಳೂರು ಕ್ಷೇತ್ರದಲ್ಲಿ ರಾಜಕೀಯವಾಗಿ ನನ್ನ ಶಕ್ತಿ ತೋರಿಸುತ್ತೇನೆ ಎಂದು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry