ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮನಹುಂಡಿಯಲ್ಲಿ ಸಿ.ಎಂ ಮತದಾನ

ಎರಡೂ ಕ್ಷೇತ್ರಗಳಲ್ಲಿ ಗೆಲುವು: ಸಿದ್ದರಾಮಯ್ಯ ವಿಶ್ವಾಸ
Last Updated 13 ಮೇ 2018, 7:17 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶನಿವಾರ ಮತ ಚಲಾಯಿಸಿದರು.

ಮಧ್ಯಾಹ್ನ ಸುಮಾರು 1ರ ವೇಳೆಗೆ ಮುಖ್ಯಮಂತ್ರಿ ಅವರು ಪುತ್ರ ಯತೀಂದ್ರ ಸಿದ್ದರಾಮಯ್ಯ ಜತೆ ಹುಟ್ಟೂರಿಗೆ ಬಂದರು. ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಗ್ರಾಮಸ್ಥರು ಬೆಳಿಗ್ಗೆ 11 ಗಂಟೆಗೆ ಸಜ್ಜಾಗಿ ನಿಂತಿದ್ದರು.

ಗ್ರಾಮಕ್ಕೆ ಬಂದ ಮುಖ್ಯಮಂತ್ರಿ ನೇರವಾಗಿ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 82ರಲ್ಲಿ ಮತದಾನ ಮಾಡಿದರು. 1.15ರ ಸುಮಾರಿಗೆ ಮತಗಟ್ಟೆಗೆ ಬಂದ ಅವರು 10 ನಿಮಿಷಗಳಲ್ಲಿ ಹಕ್ಕು ಚಲಾಯಿಸಿ ಹೊರಬಂದರು.

ಸಿದ್ದರಾಮಯ್ಯ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಮತದಾನ ಮಾಡಿ ಹೊರ ಬಂದಾಗ ನೆರೆದಿದ್ದ ಅಭಿಮಾನಿಗಳು, ‘ಮೈಸೂರು ಹುಲಿಗೆ ಜಯವಾಗಲಿ’, ‘ಸೋಲಿಲ್ಲದ ಸರದಾರ’ ಎಂದು ಘೋಷಣೆ ಕೂಗಿದರು. ಕೆಲವರು ‘ಮುಂದಿನ ಪ್ರಧಾನಿ ಸಿದ್ದರಾಮಯ್ಯ’ ಎಂಬ ಘೋಷಣೆ ಮೊಳಗಿಸಿದರು.

ಗೆಲುವಿನ ವಿಶ್ವಾಸ: ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ಎರಡೂ ಕ್ಷೇತ್ರಗಳಲ್ಲಿ ಗೆಲುವು ಖಚಿತ. ಚಾಮುಂಡೇಶ್ವರಿಯಲ್ಲಿ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ. ವರುಣಾದಲ್ಲಿ ಯತೀಂದ್ರ 20 ಸಾವಿರಕ್ಕೂ ಅಧಿಕ ಮತಗಳ ಗೆಲುವು ಪಡೆಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನವರು ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಸೊಸೈಟಿ ಅಧ್ಯಕ್ಷನಾಗಿದ್ದವನು ಇಷ್ಟು ದುಡ್ಡು ಖರ್ಚು ಮಾಡುತ್ತಿರುವುದು ನೋಡಿದಾಗ ಆಶ್ಚರ್ಯವಾಗುತ್ತಿದೆ. ಆದರೂ ಗೆಲುವು ನನ್ನದೇ’ ಎಂದರು.

ಕೆಂಪಿರಯ್ಯ ಮನೆಯಲ್ಲಿ ಭೋಜನ: ನಂತರ ತಮ್ಮ ಗೆಳೆಯ ಕೆಂಪಿರಯ್ಯ ಮನೆಯಲ್ಲಿ ಭೋಜನ ಸವಿದರು. ಪ್ರತಿ ಚುನಾವಣೆಗೆ ಗ್ರಾಮಕ್ಕೆ ಬಂದಾಗ ಅವರು ಕೆಂಪಿರಯ್ಯ ಮನೆಯಲ್ಲೇ ಊಟ ಮಾಡುವುದು ವಾಡಿಕೆ.

ಕೆಂಪಿರಯ್ಯ ಅವರ ಪತ್ನಿ ಜಯಮ್ಮ ಅವರು ಮುಖ್ಯಮಂತ್ರಿಗೆ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಮಟನ್ ಸಾಂಬಾರು, ಅನ್ನ, ಮೊಸರುಭಜ್ಜಿ ಸಿದ್ಧಪಡಿಸಿದ್ದರು.

‘ಅಣ್ಣ ಎರಡೂ ಕಡೆ ಗೆಲ್ತಾನೆ’

ಮುಖ್ಯಮಂತ್ರಿ ಅವರ ಇಬ್ಬರು ತಮ್ಮಂದಿರಾದ ರಾಮೇಗೌಡ ಮತ್ತು ಸಿದ್ದೇಗೌಡ ಅವರು ಬೆಳಿಗ್ಗೆ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ರಾಮೇಗೌಡ, ‘ಅಣ್ಣ ಎರಡು ಕಡೆ ಸ್ಪರ್ಧಿಸಿದ್ದು, ಎರಡೂ ಕಡೆ ಗೆಲ್ತಾನೆ. ಇಲ್ಲಿ ಆತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾನೆ. ಅದರ ಬಲದಿಂದ ಯತೀಂದ್ರ ಕೂಡಾ ಗೆಲ್ತಾನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ನಾನು ಶಾಲೆಯ ಮೆಟ್ಟಿಲು ಹತ್ತಿಲ್ಲ. ಸಣ್ಣಂದಿನಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ಅಣ್ಣ ಶಾಲೆಯಲ್ಲಿ ಕಲಿತು ವಿದ್ಯಾವಂತನಾದ’ ಎಂದು ಹೇಳಿದರು.

‘ಮಗನಿಗೆ ವೋಟು ಹಾಕಿದೆ’

ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ ಹಿರಿಯರನ್ನು ಮಾತನಾಡಿಸಿದಾಗ ಬಹುತೇಕ ಮಂದಿ, ‘ಮಗನಿಗೆ ವೋಟು ಹಾಕಿದೆ. ಆತನೇ ಗೆಲ್ಲುತ್ತಾನೆ’ ಎಂದು ಉತ್ತರಿಸಿದರು. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಈ ಗ್ರಾಮದ ಹಿರಿಯರು ಮಗನಂತೆಯೇ ಕಂಡಿದ್ದಾರೆ. ‘ಹುಡುಗ ಆಗಿಂದಾಗ್ಗೆ ಊರಿಗೆ ಬರ್ತಾ ಇರ್ತಾನೆ. ತಂದೆಯ ಆಶೀರ್ವಾದದಿಂದ ಆತ ಗೆಲುವು ಪಡೆಯುತ್ತಾನೆ’ ಎಂದು 80 ವರ್ಷ ವಯಸ್ಸಿನ ರಾಮು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT