ಗವಟೂರು: 2 ಗಂಟೆ ಮತದಾನ ಸ್ಥಗಿತ

7

ಗವಟೂರು: 2 ಗಂಟೆ ಮತದಾನ ಸ್ಥಗಿತ

Published:
Updated:

ರಿಪ್ಪನ್‌ಪೇಟೆ: ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯ ಕೆರೆಹಳ್ಳಿ ಹಾಗೂ ಹೊಂಬುಜ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮತದಾನ ಶಾಂತಿಯುತವಾಗಿ ನಡೆಯಿತು.

ಹುಂಚಾ ರಾಷ್ಟ್ರೀಯ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವೃದ್ಧೆ ಹೊಂಬುಜ ಗುಲಾಬಿಯಮ್ಮ (96) ಮೊಮ್ಮಕ್ಕಳೊಂದಿಗೆ ಬಂದು ಮತ ಚಲಾಯಿಸಿದರು. ಈರಣ್ಣಬೈಲು ಗ್ರಾಮದ ಗಂಗಮ್ಮ ಹಾಗೂ ಜೇನಮ್ಮ (95) ಅವರೂ ಸಹಾಯಕರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಸಾಗರ ವಿಧಾನಸಭಾ ಕ್ಷೇತ್ರದ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದಾಗಿ ಬೆಳಿಗ್ಗೆ 12ರಿಂದ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.

ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ ಮತಗಟ್ಟೆಗೆ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಭೇಟಿ ನೀಡಿ, ತಾಂತ್ರಿಕ ದೋಷದಿಂದ ವಿಳಂಬವಾದ ಮತಗಟ್ಟೆಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಹೊಂಬುಜ ಪದ್ಮಾಂಬ ಪ್ರೌಢಶಾಲೆಯಲ್ಲಿ ಹೊಂಬುಜ ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮಾಜಿ ಶಾಸಕ ಡಾ. ಜಿ.ಡಿ. ನಾರಾಯಣಪ್ಪ ಅವರು ಹುಂಚಾ ಹೋಬಳಿ ವ್ಯಾಪ್ತಿಯ ಶಿವಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪತ್ನಿ ಜೊತೆ ಬಂದು ಮತ ಚಲಾಯಿಸಿದರು.

ನೊಣಂಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಳಲಿ ಮಠದ ಪೀಠಾಧಿಕಾರಿ ಡಾ. ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry