ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ಶೇ 81.09 ಮತದಾನ

ಸೊರಬದಲ್ಲಿ ಶಾಂತಿಯುತ ಮತದಾನ: ಕೆಲವೆಡೆ ಮತಯಂತ್ರ ಸಮಸ್ಯೆ
Last Updated 13 ಮೇ 2018, 7:35 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತದಾನ ಪ್ರಕ್ರಿಯೆ ಶನಿವಾರ ಶಾಂತಿಯುತವಾಗಿ ನಡೆದಿದ್ದು, ತಾಲ್ಲೂಕಿನಲ್ಲಿ ಶೇ 81.09ರಷ್ಟು ಮತದಾನವಾಗಿದೆ.

ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಮತಗಟ್ಟೆ ಕೇಂದ್ರದ ಸಮೀಪ ಕಾರ್ಯಕರ್ತರು ಹಾಗೂ ಮುಖಂಡರು ಮತಯಾಚಿಸಿದರು.

ಪಿಂಕ್‌ ಮತಗಟ್ಟೆ: ಮಹಿಳಾ ಮತದಾರರನ್ನು ಸೆಳೆಯಲು ನಿರ್ಮಿಸಿದ ‘ಸಖಿ ಪಿಂಕ್‌’ ಮತಗಟ್ಟೆ ಕೇಂದ್ರ ಮಹಿಳೆಯರನ್ನು ಆಕರ್ಷಿಸುವಲ್ಲಿ ಬಹುತೇಕ ಯಶಸ್ವಿಯಾಯಿತು.

ಪಟ್ಟಣದ ಸಿದ್ದಲಿಂಗೇಶ್ವರ ಸರ್ಕಾರಿ ಪೇಟೆ ಹೆಣ್ಣುಮಕ್ಕಳ ಶಾಲೆ ಹಾಗೂ ಜವಾಹರಲಾಲ್‌ ನೆಹರೂ ಶಾಲೆಯಲ್ಲಿ ಸಖಿ ಪಿಂಕ್‌ ಮತಗಟ್ಟೆ ಕೇಂದ್ರ ನಿರ್ಮಿಸಲಾಗಿತ್ತು. ಮದುವೆ ಮನೆಯಂತೆ ಈ ಮತಗಟ್ಟೆ ಕೇಂದ್ರಗಳು ಸಿಂಗಾರಗೊಂಡಿತ್ತು. ಮಹಿಳೆಯರು ಪಿಂಕ್‌ ಮತಗಟ್ಟೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗವಿಕಲರಿಗೆ ವ್ಹೀಲ್‌ಚೇರ್‌: ಬಹುತೇಕ ಮತಗಟ್ಟೆ ಕೇಂದ್ರಗಳಲ್ಲಿ ಅಂಗವಿಕಲರಿಗಾಗಿ ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿತ್ತು. ವ್ಹೀಲ್‌ಚೇರ್‌ ಮೂಲಕ ಮತಗಟ್ಟೆ ಕೇಂದ್ರಕ್ಕೆ ತೆರಳಿದ ಅಂಗವಿಕಲರಾದ ಆಶ್ರಫ್‌ ಹಾಗೂ ಹಳದಮ್ಮ ಚುನಾವಣಾ ಆಯೋಗದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಿಎಸ್‌ಐ ವಿರುದ್ಧ ಆರೋಪ: 140ನೇ ಮತಗಟ್ಟೆ ಕೇಂದ್ರಕ್ಕೆ ಮತದಾನ ಮಾಡಲು ಬಂದ ತಮ್ಮ ಮೇಲೆ ಪಟ್ಟಣ ಠಾಣೆ ಪಿಎಸ್‌ಐ ಜಗದೀಶ್‌ ಲಾಠಿ ಮುರಿಯುವರೆಗೂ ಹೊಡೆದಿದ್ದಾರೆ ಎಂದು ಎಂ.ಎಸ್‌. ಕೇರಿ ನಿವಾಸಿಯ ನೂತನ ಮತದಾರ ಕಿರಣ್‌ ಆರೋಪಿಸಿದರು.

ಚಿಕಿತ್ಸೆಗಾಗಿ ಕಿರಣ್‌ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ಭೇಟಿ ನೀಡಿ ಕಿರಣ್‌ ಆರೋಗ್ಯ ವಿಚಾರಿಸಿದರು.

ಸೊರಬ:ಶೇ 84.14 ಮತದಾನ

ಸೊರಬ: ತಾಲ್ಲೂಕಿನಾದ್ಯಂತ ಬಹುತೇಕ ಶಾಂತಿಯುತ ಚುನಾವಣೆ ನಡೆದಿದ್ದು, ಶೇ 84.14ರಷ್ಟು ಮತದಾನ ನಡೆದಿದೆ.

ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಕುಗ್ವೆ ಹಾಗೂ ಪಟ್ಟಣದ ಕಾನಕೇರಿ ಬಡಾವಣೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 145 ಅನ್ನು ಪಿಂಕ್ ಮತಗಟ್ಟೆಗಳು ಗುರುತಿಸಿದ್ದು, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಪಿಂಕ್ ಸೀರೆ ಧರಿಸಿ ಮತ ಚಲಾಯಿಸಿ ಗಮನ ಸೆಳೆದರು. ಈ ಮತಗಟ್ಟೆಗಳಲ್ಲಿ ಶೇ 69.93ರಷ್ಟು ಮತದಾನ ನಡೆದಿದೆ.

ತಾಳಗುಪ್ಪ ಹೋಬಳಿಯಲ್ಲಿ 238 ಮತಗಟ್ಟೆಗಳಲ್ಲಿ 24 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಂತ್ರಿಕ ದೋಷ

ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿ ಕುಗ್ವೆ ಗ್ರಾಮದ ಮತಗಟ್ಟೆ ಸಂಖ್ಯೆ 232 ಹಾಗೂ ಕುಮ್ಮೂರು ಗ್ರಾಮದ ಮತಗಟ್ಟೆ ಸಂಖ್ಯೆ 129ರಲ್ಲಿ ವಿದ್ಯುನ್ಮಾನ ಮತ ಪೆಟ್ಟಿಗೆಯಲ್ಲಿ ತಾಂತ್ರಿಕ ಸಮಸ್ಯೆ(ಲಿಂಕ್ ಎರರ್ ಅಥವಾ ಮುದ್ರಣ ದೋಷ) ಕಂಡು ಬಂದಿದ್ದು, ಬೆಳಿಗ್ಗೆ 11ರಿಂದ 12ರವರೆಗೆ ಗೊಂದಲವಾಯಿತು. ಅಧಿಕಾರಿಗಳು ತಕ್ಷಣವೇ ಮತ ಯಂತ್ರವನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ನಂತರ ಮತದಾನ ಸುಗಮವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT