ಶನಿವಾರ, ಮಾರ್ಚ್ 6, 2021
21 °C
ಒಟ್ಟು 1,140 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ, ರಾಮನಗರ ಜಿಲ್ಲೆಯಲ್ಲಿ ಶೇ 84 ಮತದಾನ; 49 ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಭದ್ರ

ಹಕ್ಕು ಚಲಾವಣೆಗೆ ಉತ್ಸಾಹ ತೋರಿದ ಮತದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಕ್ಕು ಚಲಾವಣೆಗೆ ಉತ್ಸಾಹ ತೋರಿದ ಮತದಾರ

ರಾಮನಗರ: ಜಿಲ್ಲೆಯಲ್ಲಿ ಈ ಬಾರಿ ಮತದಾನ ಪ್ರಕ್ರಿಯೆಯು ಸುಸೂತ್ರವಾಗಿ ನಡೆದಿದ್ದು, ಶೇ 84 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ82.99ರಷ್ಟು ಸರಾಸರಿ ಮತದಾನವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಶೇ1.01 ರಷ್ಟು ಮತದಾನ ಪ್ರಮಾಣ ವ್ಯತ್ಯಾಸವಾಗಿದೆ.

ಜಿಲ್ಲೆಯ ಒಟ್ಟು 1140 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು ನಡೆಯಿತು. 7410 ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಿದರು. ಇವರೊಟ್ಟಿಗೆ ಮಿಲಿಟರಿ, ಪ್ಯಾರ ಮಿಲಿಟರಿ, ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತೆ ಒದಗಿಸಿದ್ದರು. ಮತಗಟ್ಟೆಯೊಳಗೆ ಅನ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಮುಂಜಾನೆ ಆರಂಭ: ಬೆಳಿಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂಜಾನೆಯೇ ಜನರು ಮತಗಟ್ಟೆಗಳತ್ತ ಧಾವಿಸಿದ್ದರು. ಹೊತ್ತು ಕಳೆದಂತೆಲ್ಲ ಮತದಾರರ ಉತ್ಸಾಹವೂ ಹೆಚ್ಚುತ್ತಾ ಹೋಯಿತು. ಸಂಜೆ 6ರ ಹೊತ್ತಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆ ವೇಳೆಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಇದ್ದರು.

ನಗರ ಪ್ರದೇಶಗಳಲ್ಲಿ ಮುಂಜಾನೆ ಹಾಗೂ ಮಧ್ಯಾಹ್ನದ ನಂತರ ಮತದಾರದಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿತು. ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಚುನಾವಣೆಯ ಕಾವು ಏರಿತ್ತು. ರಾಮನಗರದ ಐಜೂರು, ಎಂ.ಜಿ. ರಸ್ತೆ, ವಿವೇಕಾನಂದ ನಗರ, ವಿಜಯನಗರ, ಹನುಮಂತನಗರ ಮೊದಲಾದ ಮತಗಟ್ಟೆಗಳಲ್ಲಿ ಜನರು ಸಾಲಾಗಿ ನಿಂತು ಮತ ಚಲಾವಣೆ ಮಾಡಿದ್ದರು.

ಮಾಯಗಾನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಒಂದು ಗಂಟೆಯ ಬಿಸಿಲನ್ನು ಲೆಕ್ಕಿಸದೆ ಜನರು ಸರತಿ ಸಾಲಿನಲ್ಲಿ ಮತದಾನ ಮಾಡಲು ನಿಂತಿದ್ದರು. ಬಸವನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಜನರು ಮತದಾನ ಮಾಡಲು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೇತಗಾನಹಳ್ಳಿ, ಕೆಂಪನಹಳ್ಳಿ, ಸಂಗಬಸವನದೊಡ್ಡಿ, ಕೇತೋಹಳ್ಳಿ, ಮಾದಾಪುರ, ವಡೇರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರು ಮತದಾನ ಮಾಡಲು ಸರಿ ಸಾಲಿನಲ್ಲಿ ನಿಂತಿದ್ದರು.

ಕೇತೋಹಳ್ಳಿಯಲ್ಲಿ ಒಟ್ಟು 735 ಮತದಾರರು ಇದ್ದು, ಸಂಜೆ 4.30ರ ಸುಮಾರಿಗೆ 718 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದರು. ಕೂನಮುದ್ದನಹಳ್ಳಿಯಲ್ಲಿ ಒಟ್ಟು 634 ಮತದಾರರ ಪೈಕಿ 602 ಮತದಾರರು ಮತದಾನ ಮಾಡಿದರು. ನಾಲ್ಕರು ಅಂಚೆ ಮತದಾನದಲ್ಲಿ ಪಾಲ್ಗೊಂಡರು.

ಹಿರಿಯ ಜೀವಗಳ ಉತ್ಸಾಹ: ಹಿರಿಯ ನಾಗರಿಕರೂ ಮತದಾನ ಪ್ರಕ್ರಿಯೆಯಲ್ಲಿ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡರು. ಕೆಲವರು ಊರುಗೋಲು ಹಿಡಿದು ಬಂದರೆ. ಮತ್ತೆ ಕೆಲವರು ಇನ್ನೊಬ್ಬರ ಸಹಾಯದೊಂದಿಗೆ ತಮ್ಮ ಹಕ್ಕು ಚಲಾವಣೆ ಮಾಡಿದರು.

ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮತಗಟ್ಟೆಗಳಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಿತ್ತು. ಅದರಲ್ಲಿಯೂ ಮಧ್ಯಾಹ್ನದ ಹೊತ್ತು ಸರದಿ ಸಾಲಿನಲ್ಲಿ ಸ್ತ್ರೀಯರೇ ಹೆಚ್ಚಿದ್ದರು.

‘ನನಗೆ ಕಾಲು ನೋವು, ಆದರೂ ಮತದಾನ ಜನರ ಹಕ್ಕು ಎಂದು ತಿಳಿದುಕೊಂಡು ಬಂದು ಸರತಿ ಸಾಲಿನಲ್ಲಿ ನಿಂತು ನನ್ನ ಮತವನ್ನು ಚಲಾಯಿಸಿದ್ದೇನೆ’ ಎಂದು ಬಸವನಪುರದ ಹಿರಿಯ ಮಹಿಳೆ ತಿಲಕಮ್ಮ ಹೇಳಿದರು.

‘ಮೂರನೇ ಬಾರಿ ಮತ ಚಲಾಯಿಸುತ್ತಿದ್ದೇನೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಮಾಜದ ಅಭಿವೃದ್ಧಿಯನ್ನು ಬಯಸುವ ಪಕ್ಷವನ್ನು ನಾವೇ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಕೇತಗಾನಹಳ್ಳಿ ನಿವಾಸಿ ಸುರೇಶ್‌ ತಿಳಿಸಿದರು.

ಪಿಂಕ್‌ ಮತಗಟ್ಟೆಯಲ್ಲಿ ಸೆಲ್ಫಿ ಸಂಭ್ರಮ: ಇದೇ ಮೊದಲ ಬಾರಿಗೆ ನಗರ ಪ್ರದೇಶಗಳಲ್ಲಿ ಸ್ಥಾಪಿಸಿದ್ದ ಪಿಂಕ್‌ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಿದವು.ಪಿಂಕ್ ಕಲರ್ ಬಲೂನು, ಬಟ್ಟೆಗಳಿಂದ ಅಲಂಕೃತ ಬೂತ್ ಎದುರು ಮಹಿಳೆಯರು ಮತಗಟ್ಟೆ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಇಲ್ಲಿ ಕಂಡು ಬಂದಿತು.

ಜಿಲ್ಲೆಯಲ್ಲಿ 15 ಪಿಂಕ್ ಮತಗಟ್ಟೆಗಳು ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ ವಿಶೇಷ ವಾತಾವರಣ ಕಲ್ಪಿಸ

ಲಾಗಿತ್ತು. ಮತಗಟ್ಟೆಯ ಮುಂಭಾಗ, ಬಾಗಿಲುಗಳು ಸಂಪೂರ್ಣ ಪಿಂಕ್ ಆಗಿದ್ದವು.

ಮತಗಟ್ಟೆಗಳಲ್ಲಿನ ಟೇಬಲ್ ಗಳ ಮೇಲೆ ಪಿಂಕ್ ಬಣ್ಣದ ಬಟ್ಟೆಯನ್ನು ಹಾಕಲಾಗಿತ್ತು. ಇಲ್ಲಿನ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮತ್ತು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿದ್ದರು. ಇವರೆಲ್ಲರೂ ಪಿಂಕ್ ಬಣ್ಣದ ವಸ್ತ್ರ ಧರಿಸಿ ಕಾರ್ಯನಿರ್ವಹಿಸಿದರು. ಜಿಲ್ಲೆಯ ಒಟ್ಟು 15 ಕಡೆ ಇಂತಹ ಮತಗಟ್ಟೆಗಳು ಕಾರ್ಯ ನಿರ್ವಹಿಸಿದವು.ರಾಮನಗರ ಜಿಲ್ಲಾ ಪಂಚಾಯಿತಿ ಭವನ ಹಾಗೂ ನಗರಸಭೆಯಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮಂದದೃಷ್ಟಿ ನಾಗರಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಈ ಬಾರಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸಮೀಪ ದೃಷ್ಟಿ ಕನ್ನಡಿಗಳ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಮತಗಟ್ಟೆಗಳಿಗೆ ಒಂದರಂತೆ ಜಿಲ್ಲೆಯ 1140 ಮತಗಟ್ಟೆಗಳಿಗೆ ಭೂತಗನ್ನಡಿ ಲಭ್ಯವಿರುವಂತೆ ವವಸ್ಥೆ ಮಾಡಲಾಗಿತ್ತು.

ಅಂಗವಿಕಲರ ಉತ್ಸಾಹ: ಮತ ಚಲಾಯಿಸಲು ಅನುಕೂಲವಾಗುವಂತೆ ವೀಲ್ಹ್ ಚೇರ್‍ ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟು 800 ವೀಲ್‌ ಚೇರ್‌ ಖರೀದಿಸಿ, ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಅವರೂ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ವಿ.ವಿ. ಪ್ಯಾಟ್‌ ಬಳಕೆ: ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿ.ವಿ. ಪ್ಯಾಟ್ ಯಂತ್ರಗಳ ಬಳಕೆ ಮಾಡಿತ್ತು. ಮತದಾರರು ತಾವು ಮತ ಚಲಾವಣೆಗೆ ಮಾಡಿದ ಏಳು ಸೆಕೆಂಡುಗಳ ಒಳಗೆ ತಾವು ಯಾರಿಗೆ ಮತ ನೀಡಿದ್ದೀರಿ ಎಂದು ಈ ಯಂತ್ರ ತೋರಿಸುತ್ತಿತ್ತು. ಈ ಮೂಲಕ ಇವಿಎಂ ಯಂತ್ರಗಳ ಕುರಿತ ಗೊಂದಲ ಪರಿಹಾರ ಮಾಡಿಕೊಳ್ಳುವ ಅವಕಾಶ ಇತ್ತು.

ಮೊದಲ ಮತದಾನದ ಪುಳಕ

ಜಿಲ್ಲೆಯಲ್ಲಿ 2017ರ ಡಿಸೆಂಬರ್‌ನಿಂದ 2018ರ ಫೆಬ್ರುವರಿವರೆಗೆ ಜಿಲ್ಲಾಡಳಿತವು ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಸಿತ್ತು. ಈ ಸಂದರ್ಭ ಜಿಲ್ಲೆಯಲ್ಲಿನ 18–19 ವಯಸ್ಸಿನ 3585 ಯುವಕರು ಹಾಗೂ 2723 ಯುವತಿಯರು ನೋಂದಾಯಿಸಿಕೊಂಡಿದ್ದರು.

ಇವರಲ್ಲದೆ ಕಳೆದ ನಾಲ್ಕು ವರ್ಷದಲ್ಲಿ ಹೊಸತಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಸಾವಿರಾರು ಯುವ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.

‘ಮೊದಲನೇ ಬಾರಿ ಮತದಾನ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡಿದ್ದೇನೆ’ ಎಂದು ಬಸವನಪುರದ ಎಸ್. ಹರ್ಷಿತ್‌ ಗೌಡ ಹರ್ಷ ವ್ಯಕ್ತಪಡಿಸಿದರು.

‘ಮತವನ್ನು ಚಲಾಯಿಸುವುದು ಹೇಗೆ ಎಂಬ ಬಗ್ಗೆ ನನಗೆ ಗೊಂದಲವಿತ್ತು. ಆದರೆ ಮತದಾನ ಕೇಂದ್ರದ ಒಳಗೆ ಹೋದ ಮೇಲೆ ನನ್ನಲ್ಲಿದ್ದ ಗೊಂದಲವೆಲ್ಲಾ ನಿವಾರಣೆಯಾಯಿತು. ಮತದಾನ ಮಾಡುವುದು ತುಂಬಾ ಸರಳವಾಗಿದೆ’ ಎಂದು ಮೊದಲ ಬಾರಿ ಮತ ಚಲಾಯಿಸಿದ ಬಸವನಪುರದ ಕೆ.ಎಂ. ಶ್ವೇತಾ ತಿಳಿಸಿದರು.

ಬೆಳಿಗ್ಗೆ ಮಂದಗತಿ; ಮಧ್ಯಾಹ್ನ ಮತದಾನಕ್ಕೆ ಉತ್ಸಾಹ

ರಾಮನಗರ: ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ ಬಹುತೇಕ ಮತದಾರರು ಸುಡು ಬಿಸಿಲಿನಲ್ಲಿಯೇ ಹೆಚ್ಚು ಮತ ಚಲಾವಣೆಯ ಉತ್ಸಾಹ ತೋರಿದರು.

ಜಿಲ್ಲೆಯಲ್ಲಿ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಸರಾಸರಿ ಶೇ 7ರಷ್ಟು ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದರು. 11ರ ಸುಮಾರಿಗೆ ಈ ಪ್ರಮಾಣವು ಶೇ 22.18ಕ್ಕೆ ಏರಿಕೆಯಾಯಿತು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ಸಮಯದಲ್ಲಿ ಮತದಾನಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿತು. ಈ ವೇಳೆಗೆ ಜಿಲ್ಲೆಯ ಶೇ 39.43 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಪ್ರಮಾಣವು ಶೇ 59.41ಕ್ಕೆ ಏರಿಕೆ ಕಂಡಿತು.

ಕಡೆಯ ಮೂರು ಗಂಟೆಯಲ್ಲಿಯೂ ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಇಟ್ಟರು. ಸಂಜೆ 5ರ ಹೊತ್ತಿಗೆಲ್ಲ ಜಿಲ್ಲೆಯ ಶೇ 77ರಷ್ಟು ಪ್ರಬುದ್ಧರು ತಮ್ಮ ಹಕ್ಕು ಚಲಾವಣೆ ಮಾಡಿಯಾಗಿತ್ತು. ಕಡೆಯ ಒಂದು ಗಂಟೆಯ ಅವಧಿಯಲ್ಲಿಯೂ ಮತಗಟ್ಟೆಗಳಲ್ಲಿ ಅಲ್ಲಲ್ಲಿ ಜನರ ಸಾಲು ಕಂಡುಬಂದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.