ನೆನಪಾಗುವ ಮೊದಲ ಮತದಾನ

7
ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಿದ ಯುವಜನರು

ನೆನಪಾಗುವ ಮೊದಲ ಮತದಾನ

Published:
Updated:

ಮಂಡ್ಯ: ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವಕ, ಯುವತಿಯರ ಮನದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಕ್ಕು ಚಲಾವಣೆ ಮಾಡಿ ಶಾಯಿ ಹಚ್ಚಿದ್ದ ಬೆರಳ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಸಂಭ್ರಮ ಪಟ್ಟರು.

ಮಂಡ್ಯ ಕ್ಷೇತ್ರದ 191 ಸಂಖ್ಯೆಯ ಮತಗಟ್ಟೆಯಲ್ಲಿ ಕೆ.ಎಸ್‌.ಮಮತಾ ಪ್ರಿಯದರ್ಶಿನಿ ಮೊದಲ ಬಾರಿಗೆ ಮತ ಚಲಾವಣೆ ಮಾಡಿದರು. ನಂತರ ಮಾತನಾಡಿದ ಅವರು ‘ಮೊದಲ ಬಾರಿಗೆ ಮತ ಹಾಕಿದ್ದು ನನಗೆ ಬಹಳ ಖುಷಿ ತಂದಿದೆ. ನಮ್ಮ ದೇಶದಲ್ಲಿ ಮತದಾನದ ಹಕ್ಕು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಮೊದಲು ನಮನ ಸಲ್ಲಿಸುತ್ತೇನೆ. ಸಾಮಾಜಿಕ ಬದ್ಧತೆ, ಸದೃಢ ಸರ್ಕಾರಕ್ಕಾಗಿ ನಾನು ಮತದಾನ ಮಾಡಿದ್ದೇನೆ. ಇದೇ ಗುರಿಯೊಂದಿಗೆ ಮುಂದೆಯೂ ನನ್ನ ಹಕ್ಕು ಚಲಾಯಿಸುತ್ತೇನೆ’ ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಬ್ಯಾಡರಹಳ್ಳಿ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಿದ ಸುಷ್ಮಾ ‘ಮತಗಟ್ಟೆಯೊಳಗೆ ಹೋಗುವವರೆಗೂ ನನಗೆ ಭಯವಿತ್ತು. ಆದರೆ ಮತ ಚಲಾವಣೆ ಮಾಡುವಾಗ ಭಯ ಇರಲಿಲ್ಲ. ಮತಗಟ್ಟೆ ಸಿಬ್ಬಂದಿ ಪ್ರೀತಿಯಿಂದ ಮಾರ್ಗದರ್ಶನ ಮಾಡಿದರು. ಮೊದಲ ಮತದಾನದ ಅನುಭವ ಸದಾ ನನ್ನ ಜೀವನದಲ್ಲಿ  ಹಸಿರಾಗಿರುತ್ತದೆ’ ಎಂದು ಹೇಳಿದರು.

ಮೇಲುಕೋಟೆ ಕ್ಷೇತ್ರದ 184ನೇ ಮತಗಟ್ಟೆಯಲ್ಲಿ ಮತದಾನ ಮಾಡಿದ ಕೃಷ್ಣವೇಣಿ ‘ಈ ಬಾರಿ ಪಿಂಕ್‌ ಮತಗಟ್ಟೆ ಮಾಡಿರುವುದು ಸಂತಸ ತಂದಿದೆ. ಇಲ್ಲಿ ಮಹಿಳಾ ಸಿಬ್ಬಂದಿ ಇದ್ದ ಕಾರಣ ಯಾವ ಭಯವೂ ಇರಲಿಲ್ಲ’ ಎಂದು ಹೇಳಿದರು. ಇದೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಪವನ್‌ ಮಾತನಾಡಿ ‘ಕಳೆದ ಎರಡು ವರ್ಷಗಳಿಮಂದಲೂ 18 ವರ್ಷ ತುಂಬುವುದಕ್ಕಾಗಿ ಕಾಯುತ್ತಿದ್ದೆ. 18 ವರ್ಷ ತುಂಬಿದೊಡನೆ ಮೊದಲು ನಾನು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆ ಮಾಡಿಸಿದೆ. ಈಗ ನನ್ನ ಕನಸು ನನಸಾಗಿದೆ. ಬಹಳ ಸಂಭ್ರಮದಿಂದ ಮತದಾನ ಮಾಡಿದ್ಧೇನೆ’ ಎಂದು ಹೇಳಿದರು. ‘ಮನೆಯಲ್ಲಿ ಎಲ್ಲರೂ ಮಾರ್ಗದರ್ಶನ ಮಾಡಿದರು. ಟಿವಿಯಲ್ಲಿ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ ಬಳಕೆಯ ಬಗ್ಗೆ ನೋಡಿದ್ದೆ. ಅದರಂತೆಯೇ ಮತದಾನ ಮಾಡಿದೆ. 10 ಸೆಕೆಂಡ್‌ಗಳಲ್ಲಿ ಎಲ್ಲವೂ ಮುಗಿಯಿತು. ಮೊದಲು ಮತದಾನ ಮಾಡಿದ ನೆನೆಪು ತುಂಬಾ ಚೆನ್ನಾಗಿದೆ’ ಎಂದು ಹೇಳಿದರು.

ರೂಪದರ್ಶಿಗೆ ಮೊದಲ ಮತದಾನ

‘ಜ್ಯೂನಿಯರ್‌ ದೀಪಿಕಾ ಪಡುಕೋಣೆ’ ಎಂದು ಪ್ರಸಿದ್ಧಿ ಪಡೆದಿರುವ ಮಂಡ್ಯದ ಹುಡುಗಿ, ವರ್ಷದ ಮಾಡೆಲ್–2018 ಕೀರ್ತಿಗೆ ಪಾತ್ರರಾದ ಐಶ್ವರ್ಯಾ ಗೌಡ ಸುಭಾಷ್‌ನಗರದ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿದರು. ‘ಹಲವು ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಹಲವರಿಗೆ ಮತದಾನ ಮಾಡುವಂತೆ ಪ್ರೇರಣೆ ನೀಡಿದ್ದೆ. ನಾನೂ ಮತದಾನ ಮಾಡುವುದು ನನ್ನ ಪರಮ ಕರ್ತವ್ಯವಾಗಿತ್ತು. ಈ ದೇಶದ ಪ್ರಜೆಯಾಗಿ ನಾನು ಮತದಾನ ಮಾಡಿದ್ದೇನೆ. ಈ ನೆನಪನ್ನೂ ಎಂದೂ ಮರೆಯಲು ಸಾಧ್ಯವಿಲ್ಲ’ ಎಂದು ಐಶ್ವರ್ಯಾ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry