ಸಣ್ಣಪುಟ್ಟ ಗೊಂದಲ, ಗಲಾಟೆ ನಡುವೆ ಮತದಾನ ಶಾಂತ

7
ಕೆಲವೆಡೆ ಇವಿಎಂ ದೋಷ, ಕಾಂಗ್ರೆಸ್‌– ಜೆಡಿಎಸ್‌ ಕಾರ್ಯಕರ್ತರ ಜಗಳ, ಶೇ 83.28 ಮತದಾನ

ಸಣ್ಣಪುಟ್ಟ ಗೊಂದಲ, ಗಲಾಟೆ ನಡುವೆ ಮತದಾನ ಶಾಂತ

Published:
Updated:

ಮಂಡ್ಯ: ವಿದ್ಯುನ್ಮಾನ ಯಂತ್ರಗಳಲ್ಲಿ ದೋಷ, ಸಣ್ಣ ಪುಟ್ಟ ಜಗಳ, ಲಘು ಲಾಠಿ ಪ್ರಹಾರ ಹೊರತುಪಡಿಸಿ ಶನಿವಾರ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆಯಿತು. ಶೇ 83.28ರಷ್ಟು ಜನರು ಹಕ್ಕು ಚಲಾಯಿಸಿದರು.

ಬೆಳಿಗ್ಗೆ ನಿಧಾನಗತಿಯಲ್ಲಿ ಆರಂಭವಾದ ಮತದಾನ 10 ಗಂಟೆಯಷ್ಟರಲ್ಲಿ ವೇಗ ಪಡೆದುಕೊಂಡಿತು. ಮತ್ತೆ ಮಧ್ಯಾಹ್ನ ಬಿರು ಬಿಸಿಲು ಇದ್ದ ಕಾರಣ ಮತದಾನ ನಿಧಾನಗತಿಯಲ್ಲಿ ಸಾಗಿತು. ಮತ್ತೆ ನಾಲ್ಕು ಗಂಟೆಯ ನಂತರ ವೇಗವಾಗಿ ಮತದಾನ ನಡೆಯಿತು. ಜನರಿಗೆ ಭಾವಚಿತ್ರವುಳ್ಳ ಮತ ಪತ್ರ ವಿತರಣೆ ಮಾಡಿದ್ದ ಕಾರಣ ಪ್ರಕ್ರಿಯೆ ಸುಲಭವಾಗಿ ನಡೆಯಿತು. ಮತದಾರರ ಗುರುತಿನ ಚೀಟಿ ಜೊತೆಗೆ ಭಾವಚಿತ್ರವುಳ್ಳ ವಿವಿಧ ಗುರುತಿನ ಚೀಟಿ ಹಿಡಿದು ಜನರು ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತಿದ್ದರು.

ಪಿಂಕ್‌ ಮತಗಟ್ಟೆಗಳ ಆಕರ್ಷಣೆ: ಜಿಲ್ಲೆಯಾದ್ಯಂತ ಸ್ಥಾಪಿಸಿದ್ದ 22 ಪಿಂಕ್‌ (ತಿಳಿನೇರಳೆ) ಮತಗಟ್ಟೆಗಳು ಮಹಿಳೆಯರ ಗಮನ ಸೆಳೆದವು. ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲರೂ ಗುಲಾಬಿ ಬಣ್ಣದ ಸಮವಸ್ತ್ರ ಧರಿಸಿದ್ದರು. ಬಾಗಿಲಿಗೆ ಅದೇ ಬಣ್ಣದ ಬಲೂನ್‌ಗಳನ್ನು ಕಟ್ಟಿ ಅಲಂಕಾರ ಮಾಡಲಾಗಿತ್ತು.

ಮಂಡ್ಯ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಪಿಂಕ್‌ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರಬಂದ ಮಹಿಳೆಯರಿಗೆ ಗುಲಾಬಿ ಹೂಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ 184ನೇ ಮತಗಟ್ಟೆಯಲ್ಲಿ ಸ್ಥಾಪಿಸಲಾಗಿದ್ದ ಪಿಂಕ್‌ ಮತಗಟ್ಟೆಯಲ್ಲಿ ಮಹಿಳೆಯರಿಗೆ ಪಿಂಕ್‌ ರಿಬ್ಬನ್‌ ಉಡುಗೊರೆ ನೀಡಲಾಯಿತು. ನಂತರ ತಿಳಿ ನೇರಳೆಯ ಉಗುರು ಬಣ್ಣ ಹಚ್ಚಲಾಯಿತು. ಇಲ್ಲಿ ಪುರುಷರಿಗೂ ಮತ ಹಾಕುವ ಅವಕಾಶ ನೀಡಲಾಗಿತ್ತು. ಶ್ರೀರಂಗಪಟ್ಟಣ ಪಿಂಕ್‌ ಮತಗಟ್ಟೆಯಲ್ಲಿ ಮಹಿಳೆಯರಿಗೆ ಅರ್ಧ ಡಜನ್‌ ಪಿಂಕ್‌ ಬಳೆ ಉಡುಗೊರೆ ನೀಡಲಾಯಿತು.

ವಿಶೇಷ ಮತಗಟ್ಟೆ: ಅಂಗವಿಕಲ ಮತದಾನ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ 8 ವಿಶೇಷ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿತ್ತು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ 183ನೇ ವಿಶೇಷ ಮತಗಟ್ಟೆ ಗಮನ ಸೆಳೆಯಿತು. ಅಂಗವಿಕಲರನ್ನು ಪ್ರೀತಿಯಿಂದ ಮಾತನಾಡಿಸಿ ಮತದಾನಕ್ಕೆ ಸಹಕಾರ ನೀಡಲಾಯಿತು. ‘ನಮ್ಮನ್ನೂ ವಿಶೇಷವಾಗಿ ಪರಿಗಣಿಸಿದ್ದು ಸಂತಸ ತಂದಿದೆ. ನಾವೂ ಚುನಾವಣಾ ಕರ್ತವ್ಯವನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಿ ತೋರಿಸಿದ್ದೇವೆ. ನಮಗೆ ಕರುಣೆ ಬೇಕಿಲ್ಲ, ಪ್ರೋತ್ಸಾಹ ಸಾಕು ಎಂಬ ಮಾತನ್ನು ಸಾಕಾರ ಮಾಡಿದ್ದೇವೆ’ ಎಂದು ಮತಗಟ್ಟೆ ಅಧಿಕಾರಿ ಶ್ರೀನಿವಾಸ್‌ ಹೇಳಿದರು.

ಬಿಗಿ ಭದ್ರತೆ: ಜಿಲ್ಲೆಯಾದ್ಯಂತ 359 ಅತಿ ಸೂಕ್ಷ್ಮ ಮತಗಟ್ಟೆ, 90 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ ಅರೆ ಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಬ್ಯಾಡರಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಬಿಗಿ ಬಂದೋಬಸ್ತ್‌ ನಡುವೆ ಮತದಾನ ನಡೆಯಿತು. ಕಾರ್ಯಕರ್ತರು ಧರಿಸಿದ್ದ ರೈತಸಂಘದ ಹಸಿರು ಟವೆಲ್‌ ಹಾಗೂ ಜೆಡಿಎಸ್‌ ಬಾವುಟದ ಟವೆಲ್‌ಗಳನ್ನು ಭದ್ರತಾ ಸಿಬ್ಬಂದಿ ತೆಗೆಸಿದರು.

ಮತದಾನ ಸೇವಾ ಕೇಂದ್ರ: ಮತದಾರರಿಗೆ ಅನುಕೂಲವಾಗಲೆಂದು ವಿವಿಧೆಡೆ ಮತದಾನ ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ಮತದಾನ ಪತ್ರ ಪಡೆಯದ ಮತದಾರರು ಸೇವಾ ಕೇಂದ್ರದಲ್ಲಿ ತಮ್ಮ ಚೀಟಿ ಪಡೆದು ಮತದಾನ ಮಾಡಿದರು.

ಕೆಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಉಂಟಾಗಿದ್ದ ಗೊಂದಲ ನಿವಾರಣೆಗೆ ಈ ಕೇಂದ್ರಗಳು ಪ್ರಮುಖ ಪಾತ್ರ ನಿರ್ವಹಿಸಿದವು.

ಇವಿಎಂಗಳಲ್ಲಿ ದೋಷ

ಮಂಡ್ಯ ಕ್ಷೇತ್ರದ ಎಸ್‌.ಐ.ಕೋಡಿಹಳ್ಳಿ ಮತಗಟ್ಟೆಯ ಇವಿಎಂನಲ್ಲಿ ದೋಷ ಕಾಣಿಸಿಕೊಂಡ ಕಾರಣ ಬೆಳಿಗ್ಗೆ 9 ಗಂಟೆಯಾದರೂ ಮತದಾನ ಆರಂಭವಾಗಿರಲಿಲ್ಲ.

ದ್ಯಾಪಸಂದ್ರ ಮತಗಟ್ಟೆಯಲ್ಲಿ ಇವಿಎಂ ಸಮಸ್ಯೆಯಾಗಿ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಷುಗರ್‌ಟೌನ್‌ ಮತಗಟ್ಟೆಯಲ್ಲಿ ಮತದಾನ 2 ಗಂಟೆ ತಡವಾಯಿತು. ಶ್ರೀರಂಗಪಟ್ಟಣ ಕ್ಷೇತ್ರದ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ಇವಿಎಂ ದೋಷದಿಂದಾಗಿ ಮತದಾನ ಪ್ರಕ್ರಿಯೆ ಆರಂಭವಾಗುವುದು ತಡವಾಯಿತು.

ಬಿ.ಯರಹಳ್ಳಿ ಮತಗಟ್ಟೆಯಲ್ಲೂ ಕೆಲಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಮತದಾನ ಬಹಿಷ್ಕಾರ, ಮನವೊಲಿಕೆ

ಮದ್ದೂರು ಕ್ಷೇತ್ರ ಹೆಮ್ಮನಹಳ್ಳಿ ಗ್ರಾಮದ ದಲಿತರು, ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದರು. ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿ ನಂತರ ಗ್ರಾಮಸ್ಥರು ಬಹಿಷ್ಕಾರ ತ್ಯಜಿಸಿ ಹಕ್ಕು ಚಲಾಯಿಸಿದರು.

ಮನೆ ಮುಂದೆ ಹಣದ ಕವರ್

ದೇವರ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿರುವ ಪಕ್ಷಗಳು ಸಾಯಿಬಾಬಾ, ಮಂಜುನಾಥಸ್ವಾಮಿ ಚಿತ್ರ ಇರುವ ಕವರ್‌ನಲ್ಲಿ ₹ 2 ಸಾವಿರ ಹಣ ಹಾಕಿ ಮನೆಯ ಮುಂದೆ ಇಟ್ಟು ಹೋಗಿದ್ದಾರೆ. ಹಣದ ಜೊತೆಗೆ ಪಕ್ಷಗಳ ಪ್ರಚಾರ ಪತ್ರವನ್ನೂ ಹಾಕಿದ್ದಾರೆ. ಹಣ ಸ್ವೀಕರಿಸದ ಮನೆಗಳ ಮುಂದೆ ಹಣ ಇಟ್ಟಿದ್ದಾರೆ. ಬೆಳಿಗ್ಗೆ ಎದ್ದು ಬಾಗಿಲು ತೆರೆದಾಗ ಹಣ ಇರುವುದು ಪತ್ತೆಯಾಗಿದೆ.

ಕುಟುಂಬ ಸಮೇತ ಅಭ್ಯರ್ಥಿಗಳ ಮತದಾನ

ಮಂಡ್ಯ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದರು. ಎಂ.ಶ್ರೀನಿವಾಸ್‌ ಹನಕೆರೆ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು. ಕಾಂಗ್ರೆಸ್‌ ಅಭ್ಯರ್ಥಿ ಗಣಿಗ ಪಿ ರವಿಕುಮಾರ್‌ಗೌಡ ಗಣಿಗ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ ಚಂದಗಾಲು ಗ್ರಾಮದಲ್ಲಿ ಕುಟುಂಬ ಸಮೇತ ಮತ ಚಲಾವಣೆ ಮಾಡಿದರು. ಐದು ರೂಪಾಯಿ ವೈದ್ಯ ಬಂದೀಗೌಡ ಬಡಾವಣೆಯಲ್ಲಿ ಮತ ಚಲಾವಣೆ ಮಾಡಿದರು.

ಹಸಿರು ಹಾಸಿನ ಸ್ವಾಗತ

ಜಿಲ್ಲೆಯಾದ್ಯಂತ 45 ಮಾದರಿ ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಗೇಟ್‌ನಿಂದ ಮತಗಟ್ಟೆವರೆಗೆ ಹಸಿರು ಹಾಸಿನ ಸ್ವಾಗತವನ್ನು ಮತದಾರರಿಗೆ ನೀಡಲಾಯಿತು. ಹೊರಗೆ ಶಾಮಿಯಾನ, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯಲು ನೀರು ಮುಂತಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry