ಅಜ್ಜಿಯ ಮಾತು ಮೀರಿ ಮತ ಹಾಕಿದ ಮೊಮ್ಮಗ!

7
ವೃದ್ಧೆಯ ಸಹಾಯಕ್ಕೆ ಬಂದು ಜೆಡಿಎಸ್‌ಗೆ ಮತ, ವಿಡಿಯೊ ವೈರಲ್‌, ಬಂಧನ

ಅಜ್ಜಿಯ ಮಾತು ಮೀರಿ ಮತ ಹಾಕಿದ ಮೊಮ್ಮಗ!

Published:
Updated:

ಮಂಡ್ಯ: ಅಜ್ಜಿಯ ಸಹಾಯಕ್ಕೆ ಬಂದ ಮೊಮ್ಮಗ ತಾನೇ ಮತ ಚಲಾಯಿಸಿದ್ದಾನೆ. ಕಾಂಗ್ರೆಸ್‌ಗೆ ಮತ ಹಾಕುವಂತೆ ವೃದ್ಧೆ ಕೇಳಿಕೊಂಡರೂ ಜೆಡಿಎಸ್‌ಗೆ ಹಾಕಿದ್ದಾನೆ. ಈ ಪ್ರಕ್ರಿಯೆಯನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾನೆ.

ಮದ್ದೂರು ತಾಲ್ಲೂಕು ಸಾದೊಳಲು ಮತಗಟ್ಟೆಯಲ್ಲಿ ನಡೆದ ಘಟನೆ ಇದು. 80 ವರ್ಷದ ವೃದ್ಧೆ ನಿಂಗಮ್ಮ ಅವರನ್ನು ಮೊಮ್ಮಗ ಸಚಿನ್‌ ಕೈ ಹಿಡಿದು ಕರೆತಂದಿದ್ದಾನೆ. ಮತದಾನದ ಅಂಕಣಕ್ಕೆ ತೆರಳಿದ ಆತ, ಕಾಂಗ್ರೆಸ್‌ಗೆ ಮತ ಹಾಕುವಂತೆ ವೃದ್ಧೆ ಕೇಳಿಕೊಂಡರೂ ಅವರ ಮಾತು ಮೀರಿ ಜೆಡಿಎಸ್‌ ಗುಂಡಿ ಒತ್ತಿದ್ದಾನೆ. ಇದಿಷ್ಟು ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ 13 ಸೆಕೆಂಡ್‌ಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ.

ವಿಡಿಯೊ ವೈರಲ್‌ ಆಗಿದ್ದು, ಇದನ್ನು ಗಮನಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮತಗಟ್ಟೆಯೊಳಗೆ ಮೊಬೈಲ್‌ ಫೋನ್‌ ಕೊಂಡೊಯ್ಯಲು ಬಿಟ್ಟಿದ್ದಕ್ಕೆ ಹಾಗೂ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ತೀವ್ರಸ್ವರೂಪ ಪಡೆಯುತ್ತಿದ್ದಂತೆ ಮದ್ದೂರು ಪೊಲೀಸರು ಯುವಕನನ್ನು ಬಂಧಿಸಿ, ಮತಗಟ್ಟೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry