ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ ಉತ್ಸಾಹ
Last Updated 13 ಮೇ 2018, 9:56 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಶನಿವಾರ ಶಾಂತಿಯುತ ಮತದಾನ ನಡೆದಿದೆ. ಬೆಳಿಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆದಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಉತ್ಸಾಹ ಹೆಚ್ಚು ಕಂಡುಬಂತು. ಜಿಲ್ಲಾ ಕೇಂದ್ರ ಹಾಗೂ ಗಂಗಾವತಿಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮತಗಟ್ಟೆಗಳಿಗೆ ಸಮೀಪವಿರುವ ಹೋಟೆಲ್‌ಗಳನ್ನೂ ಮುಚ್ಚಲಾಗಿತ್ತು. ಅಘೋಷಿತ ಬಂದ್‌ ವಾತಾವರಣ ಮೂಡಿತ್ತು.

ಟಂಟಂ, ಆಟೋರಿಕ್ಷಾಗಳಲ್ಲಿ ಮತದಾರರು ಬಂದು ಹೋಗುವುದು ಸಾಮಾನ್ಯವಾಗಿತ್ತು. ಬೆಳಿಗ್ಗೆ 9ರ ವೇಳೆಗೆ ಶೇ 9ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಸಂಜೆ 5ರ ಹೊತ್ತಿಗೆ ಶೇ 77 ಮತದಾನ ನಡೆಯಿತು.

ಮೊದಲ ಬಾರಿಗೆ ಮತದಾನ ಮಾಡುವ ಯುವ ಮತದಾರರಲ್ಲಿ ಕುತೂಹಲ ಮತ್ತು ಉತ್ಸಾಹ ಮನೆಮಾಡಿತ್ತು. ಮತಗಟ್ಟೆಗಳಲ್ಲಿ ಸಶಸ್ತ್ರ ಪಡೆಗಳ ಭದ್ರತೆ ಕೆಲವರಿಗೆ ಆತಂಕ ಸೃಷ್ಟಿಸಿತು.

ವೃದ್ಧರು, ಅಂಗವಿಕಲರಿಗೆ ಅನುಕೂಲವಾಗುವಂತೆ ಮತಗಟ್ಟೆಗಳಿಗೆ ಗಾಲಿ ಕುರ್ಚಿಗಳನ್ನು ಪೂರೈಸಲಾಗಿತ್ತಾದರೂ ಕೆಲವೆಡೆ ಕೊರತೆ ಉಂಟಾಯಿತು. ಇನ್ನು ಕೆಲವೆಡೆ ಬಳಕೆ ಆಗಲಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ ರೂಪಿಸಲಾಗಿದ್ದ ಸಖಿ ಮತಗಟ್ಟೆ, ಮುನಿರಾಬಾದ್‌ನ ಮಾದರಿ ಮತಗಟ್ಟೆ, ತಮ್ಮ ವಿಶೇಷ ಬಣ್ಣ ಮತ್ತು ಸೌಲಭ್ಯಗಳಿಂದ ಗಮನ ಸೆಳೆದವು.

ಮತಗಟ್ಟೆ ಸಿಬ್ಬಂದಿಗೆ ಅಕ್ಷರ ದಾಸೋಹದ ಅಡುಗೆಯವರು ಭರ್ಜರಿ ಉಪಾಹಾರದ ವ್ಯವಸ್ಥೆಯನ್ನು ಆಯಾ ಮತಗಟ್ಟೆಯಲ್ಲಿ ಮಾಡಿದ್ದರು. ಉಪ್ಪಿಟ್ಟು, ಕೇಸರಿಬಾತ್‌, ಮೊಳಕೆ ಕಾಳು, ರೊಟ್ಟಿ ಪಲ್ಯದ ಊಟ, ಸಂಜೆ ವೇಳೆ ಮಂಡಾಳು ಒಗ್ಗರಣೆ ಮತಗಟ್ಟೆ ಅಧಿಕಾರಿಗಳ ಹೊಟ್ಟೆ ತಣಿಸಿತು.

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ

ಭಾಗ್ಯನಗರದ ಕವಿ ಅಕ್ಬರ್‌ ಸಿ. ಕಾಲಿಮಿರ್ಚಿ ಮತ್ತು ಅವರ ಪತ್ನಿಯ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿತ್ತು. ಚುನಾವಣಾ ಆಯೋಗದ ಸಹಾಯವಾಣಿಗೆ ಸಂದೇಶ ಕಳುಹಿಸಿದೆ. ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ, ವಾರ್ಡ್‌ ಸದಸ್ಯರಿಗೆ ಮನವಿ ಮಾಡಿದೆ. ಎಲ್ಲ ಮಾಹಿತಿ ನೀಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಕೊನೆಗೂ ನಾನು ಮತ್ತು ಪತ್ನಿ ಮತದಾನದಿಂದ ದೂರ ಉಳಿಯಬೇಕಾಯಿತು ಎಂದು ಅಕ್ಬರ್‌ ಬೇಸರ ವ್ಯಕ್ತಪಡಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ, ತಕರಾರುಗಳು, ಲಘು ಲಾಠಿ ಪ್ರಹಾರ ನಡೆದಿವೆ.

ಗುಡುಗು ಸಹಿತ ಮಳೆ

ಕೊಪ್ಪಳದಲ್ಲಿ ಸಂಜೆ 5 ಗಂಟೆ ವೇಳೆ ನಗರದಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. 5.35ರ ವೇಳೆಗೆ ಮಳೆ ಹನಿಯುತ್ತಿದ್ದಂತೆಯೇ ಮತಗಟ್ಟೆಯತ್ತ ಬರುವವರ ಸಂಖ್ಯೆ ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT