ಹಿತಕರವಾಗಿ ನಡೆದ ಮತದಾನ ಕಾರ್ಯ

7

ಹಿತಕರವಾಗಿ ನಡೆದ ಮತದಾನ ಕಾರ್ಯ

Published:
Updated:

ಸೋಮವಾರಪೇಟೆ: ವಿಧಾನಸಭಾ ಚುನಾವಣೆಗೆ ಮೇ 12ರ ಶನಿವಾರ ನಡೆದ ಚುನಾವಣೆಯಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಘಟನೆಗಳು ಹೊರತು ಪಡಿಸಿದಂತೆ, ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರು ಬೆಳಿಗ್ಗೆ 7ರಿಂದಲೇ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಮುಂದಾಗಿದ್ದರು. ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಇರಿಸಿದ್ದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಒಂದು ಗಂಟೆ ಮತದಾನ ತಡವಾಗಿ ಪ್ರಾರಂಭವಾಯಿತು. ಬಾಣವಾರ ರಸ್ತೆಯ ಎಸ್‌ಜೆಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭವಾಗಿ ಕಾರ್ಮಿಕರು ಪರದಾಡಿದರು. ತೋಳೂರುಶೆಟ್ಟಳ್ಳಿ, ಯಡವಾರೆ ಹಾಗೂ ಅಂಕನಳ್ಳಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುವುದನ್ನು ಹೊರತು ಪಡಿಸಿದಂತೆ ಉಳಿದೆಡೆ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯಲಿಲ್ಲ.

ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಕುಂಬೂರಿನ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಮಾಜಿ ಸಚಿವ ಮತ್ತು ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಬಿಳಿಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿದರು.

ಚುನಾವಣಾ ಆಯೋಗವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಇನ್ನೂರು ಮೀಟರ್ ದೂರದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಎಸ್‌ಜೆಎಂ ಬಾಲಿಕ ಪೌಢಶಾಲೆಯ ಮತಗಟ್ಟೆಗೆ ಪಟ್ಟಣದ 10ಭಾಗಗಳ ಮತದಾರರಿಗೆ ಒಂದೇ ಮತಕೇಂದ್ರದಲ್ಲಿ ಮತದಾನಕ್ಕೆ ಅವಕಾಶ ಮಾಡಿದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ಜನರು ಕಾಯುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಸಿ.ಕೆ.ಸುಬ್ಬಯ್ಯ ರಸ್ತೆ, ಮಾರುಕಟ್ಟೆ ರಸ್ತೆ ಮತ್ತು ಪೌರಕಾರ್ಮಿಕರ ರಸ್ತೆ ನಿವಾಸಿಗಳು ಕೆಲವರು ಮತದಾನದಿಂದ ವಂಚಿತರಾದರು. ಎಸ್.ಎಸ್.ಸುನಿತಾ, ಪದ್ಮ, ಗೌತಮಿ, ಕೃಷ್ಣಮೂರ್ತಿ, ಲಕ್ಷ್ಮೀ, ಎಂ.ಕೆ.ಆಶಾ,ಸುಮತಿ ಸೇರಿದಂತೆ ಗ್ರಾಮೀಣ ಭಾಗಗಳ ಹಲವಾರು ಮತದಾರರು ಮತದಾನದಿಂದ ವಂಚಿತರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತಪಟ್ಟವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ವ್ಯವಸ್ಥೆಯ ಬಗ್ಗೆ ಮತದಾರರು ಸಂಶಯ ವ್ಯಕ್ತಪಡಿಸಿದರು.

ಕ್ಷೇತ್ರದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆ ನೇರ ಹಣಾಹಣಿ ಇದ್ದುದ್ದು ಕಂಡುಬಂದಿತು. ಹೆಚ್ಚಿನ ಮತಕೇಂದ್ರಗಳಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಅತ್ಯತ್ಸಾಹದಿಂದ ಮತ ಕೇಳಲು ಮುಂದಾಗಿದ್ದರು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಪ್ರಸಕ್ತ ಚುನಾವನೆಯಲ್ಲಿ ಯಾವುದೇ ಉತ್ಸಾಹವನ್ನು ತೋರಲಿಲ್ಲ. ಒಂದೆರಡು ಮತಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಮತ ಕೇಳುವುದು ಹೊರತು ಪಡಿಸಿದಂತೆ ಉಳಿದೆಡೆ ಕಂಡು ಬರಲಿಲ್ಲ. ಹಂಡ್ಲಿ ಮತಗಟ್ಟೆಯೊಂದರಲ್ಲಿ ಅತೀವ ಹೆಚ್ಚಿನ ಜನಸಂದಣಿ ಕಂಡುಬಂದಿತು. ಹಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಲಿ ಶಾಸಕ ಅಪ್ಪಚ್ಚು ರಂಜನ್‌ರವರು ಈ ಭಾಗದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಬಿಜೆಪಿಯ ಹಲವು ಕಾರ್ಯಕರ್ತರು ಜೆಡಿಎಸ್‌ಗೆ ಮತಚಲಾಯಿಸಿರುವುದಾಗಿ ತಿಳಿಸಿದರು. ಕಾಂಗ್ರೆಸ್‌ ಪ್ರಮುಖರು ಜೆಡಿಎಸ್‌ ಪಕ್ಷದ ಪರವಾಗಿ ಪ್ರಚಾರ ಮಾಡಿರುವುದಾಗಿ ಪಕ್ಷದ ಕಾರ್ಯಕರ್ತರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry