ಚರ್ಚೆಗೆ ಗ್ರಾಸವಾದ ‘ಎಸ್‌ಡಿಪಿಐ ವಿಡಿಯೊ’

7

ಚರ್ಚೆಗೆ ಗ್ರಾಸವಾದ ‘ಎಸ್‌ಡಿಪಿಐ ವಿಡಿಯೊ’

Published:
Updated:

ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರು ದೇಶ ವಿರೋಧಿ ಚಟುವಟಿಕೆ ನಡೆಸಿದ ಎಸ್‌ಡಿಪಿಐ ಪದಾಧಿಕಾರಿಗಳ ಜೊತೆ ಪ್ರಚಾರ ನಡೆಸಿದ್ದಾರೆ’ ಎಂದು ಆರೋಪಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಕರಪತ್ರ ಹಂಚಿರುವುದು ಚರ್ಚೆಯ ವಸ್ತುವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ, ‘ನನ್ನ ಪ್ರತಿಸ್ಪರ್ಧಿ ಪ್ರತಿ ಚುನಾವಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಇದೊಂದು ಸುಳ್ಳು ಸುದ್ದಿಯಾಗಿದ್ದು, ನಕಲಿ ಚಿತ್ರಗಳನ್ನು ಬಳಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅವರು ಉಪಯೋಗಿಸುವ ಈ ತಂತ್ರದ ವಿರುದ್ಧ, ಈ ಬಾರಿ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.

‘ಅಲ್ಲದೇ, ನನ್ನ ವಿರೋಧ ಆರೋಪ ಮಾಡಿದ ಕರಪತ್ರವನ್ನು ಹಂಚುತ್ತಿದ್ದ ಮೂವರನ್ನು ಬಂಕಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸತ್ಯ ಶೀಘ್ರವೇ ಹೊರಬರಲಿದೆ’ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ‘ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ವೂ ತನಿಖೆ ನಡೆಸಲಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಪ್ರಕರಣದಲ್ಲಿ ಸತ್ಯ ಕಂಡುಬರುತ್ತಿದೆ’ ಎಂದರು.

ಮತಗಟ್ಟೆಯಲ್ಲಿ ಆತ್ಮಹತ್ಯೆ ಯತ್ನ

ಹಾವೇರಿ:  ಬ್ಯಾಡಗಿ ವಿಧಾನ ಸಭಾಕ್ಷೇತ್ರ ದೇವಗಿರಿ ಮತಗಟ್ಟೆಯಲ್ಲಿ ಸರದಿ ನಿಂತಿದ್ದ ಪಾರವ್ವ ಅರ್ಕಸಾಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಭದ್ರತಾ ಹಾಗೂ ಮತಗಟ್ಟೆ ಸಿಬ್ಬಂದಿ, ಸೀಮೆಎಣ್ಣೆ ಬಾಟಲಿ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ. ಬಳಿಕ ಅಧಿಕಾರಿಗಳು ಸಾಂತ್ವನ ಹೇಳಿದ್ದು, ಪಾರವ್ವ ಮತ ಚಲಾಯಿಸಿ ಮನೆಗೆ ತೆರಳಿದ್ದಾರೆ.

‘ಕೌಟುಂಬಿಕ ಗೊಂದಲ ಮತ್ತು ಕೆಲವು ಸರ್ಕಾರಿ ಸೌಲಭ್ಯಗಳು ಸಿಗದ ಕಾರಣ ನೊಂದಿದ್ದು, ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮಹಿಳೆ ತಿಳಿಸಿದ್ದಾಳೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry