ಶುಕ್ರವಾರ, ಮಾರ್ಚ್ 5, 2021
24 °C
ಸರದಿ ಸಾಲಲ್ಲಿ ನಿಂತು ಮತ ಚಲಾಯಿಸಿದ ನಾಗರಿಕರು; ಬೆಳಿಗ್ಗೆ ಬಿಸಿಲಿನ ಝಳದಿಂದ ಮತದಾನ ಪ್ರಮಾಣ ಕಡಿಮೆಯಾದರೆ ಸಂಜೆ ಮಳೆಯಿಂದ ತೊಂದರೆ

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿಯುತ ಮತದಾನ

ಗದಗ: ಸಣ್ಣಪುಟ್ಟ ಗೊಂದಲ ಹೊರತು ಪಡಿಸಿದರೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಶಾಂತಿಯುತ ಮತದಾನ ನಡೆಯಿತು

ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ಮುಂದುವರಿಯಿತು. ಮತಗಟ್ಟೆಯಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ಉಳಿದಿದ್ದ ಮತದಾರರಿಗೆ ಸಂಜೆ 6 ಗಂಟೆ ನಂತರವೂ ಮತದಾನಕ್ಕೆ ಅವಕಾಶ ನೀಡಲಾಯಿತು. 5 ಗಂಟೆ ವೇಳೆಗೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆ ಮತ್ತು ಜೋರು ಗಾಳಿಯಿಂದ ಮತದಾನಕ್ಕೆ ಕೊಂಚ ಅಡಚಣೆ ಎದುರಾಯಿತು. ಮತಗಟ್ಟೆಗೆ ಬರಲು ಮಳೆ ಅಡ್ಡಿಯಾಯಿತು.

ಗದಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು ಸ್ವಗ್ರಾಮ ಹುಲಕೋಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮತಗಟ್ಟೆ ಸಂಖ್ಯೆ 133ರಲ್ಲಿ ತಾಯಿ ಪದ್ಮಮ್ಮ ಅವರೊಂದಿಗೆ ಬಂದು ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ, ಪತ್ನಿ ವಾಣಿ ಮೆಣಸಿನಕಾಯಿ ಅವರೊಂದಿಗೆ ಗದುಗಿನ ಕೆವಿಎಸ್ಆರ್ ಕಾಲೇಜಿನ 99ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಮತಗಟ್ಟೆ ಸಂಖ್ಯೆ 85ರಲ್ಲಿ ಮತ ಚಲಾಯಿಸಿದರು.

ಅಡಚಣೆ, ಗೊಂದಲ: ರೋಣ ತಾಲ್ಲೂ ಕಿನ ಬೆಳವಣಿಕಿ, ಚಿಕ್ಕ ಹಂದಿಗೋಳ ಗ್ರಾಮದ ಮತಗಟ್ಟೆ ಸಂಖ್ಯೆ 131ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಮತದಾನ ಪ್ರಾರಂಭವಾಗಲು ಸ್ವಲ್ಪ ವಿಳಂಬವಾಯಿತು.

ಮತಗಟ್ಟೆ ಸಿಬ್ಬಂದಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮುಂಡರಗಿ ಪಟ್ಟಣದ 42ನೇ ಮತಗಟ್ಟೆ ಯಲ್ಲಿ ಸಾರ್ವಜನಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ನರಗುಂದ ವರದಿ: ಪಟ್ಟಣದ ಅಧ್ಯಾಪಕ ನಗರದ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ವಿವಿಪ್ಯಾಟ್‌ ಯಂತ್ರದ ಬಳಿ ನಿಂತು, ಮತದಾರರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಆರೋಪಿಸಿದರು.

ಅಲ್ಲಿಂದಲೇ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರಿಗೆ ಕರೆ ಮಾಡಿ, ಇವರನ್ನು ಬದಲಿಸುವಂತೆ ದೂರಿದರು.

ಗಮನ ಸೆಳೆದ ಪಿಂಕ್‌ ಮತಗಟ್ಟೆ: ಮತದಾನದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಪಿಂಕ್ ಮತಗಟ್ಟೆಗಳನ್ನು ತೆರೆದಿತ್ತು. ಇದಕ್ಕೆ ಉತ್ತಮ ಸ್ಪಂದನೆ ಕಂಡುಬಂತು.

ಪಿಂಕ್‌ ಮತಗಟ್ಟೆಗಳಲ್ಲಿ ಮಹಿಳೆ ಯರು ಸರತಿ ಸಾಲಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಆಯೋಗದ ಕ್ರಮಕ್ಕೆ ಸಂಭ್ರಮ ವ್ಯಕ್ತಪಡಿಸಿದರು.

ಅಂಗವಿಕಲರು, ಹಿರಿಯ ನಾಗರಿಕರಿಗೆ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ನೆರವು ಕಲ್ಪಿಸಲಾಗಿತ್ತು. ಸರದಿಯಲ್ಲಿ ಕಾಯದೆ ನೇರವಾಗಿ ತೆರಳಿ ಮತದಾನಕ್ಕೆ ಅವಕಾಶ ನೀಡಲಾಯಿತು.

ಸೆಲ್ಫಿ ಸಂಭ್ರಮ: ಯುವಕ, ಯುವತಿಯರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದರು. ಮೊದಲ ಬಾರಿ ಮತ ಚಲಾಯಿಸಿದವರು, ಸೆಲ್ಫಿ ತೆಗೆದು, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದರು.

ಗದಗ ಕ್ಷೇತ್ರದ ಮುಳಗುಂದ ನಾಕಾ ಬಳಿಯ ಮತಗಟ್ಟೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಮನೋಜ್ ಜೈನ್ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಹಣದ ಆಮಿಷ; ವಿಡಿಯೊ ವೈರಲ್‌

ಗದಗ: ಬೆಟಗೇರಿಯ 4ನೇ ವಾರ್ಡ್‌ನಲ್ಲಿ ಶನಿವಾರ ಕಾಂಗ್ರೆಸ್ ಬೆಂಬಲಿಗರೊಬ್ಬರು ಮತದಾರರಿಗೆ ಹಣ ಹಂಚುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್‌ ಆಗಿದೆ. ಮತದಾರರಿಗೆ ₹500 ನೋಟು ನೀಡಿ, ಕಾಂಗ್ರೆಸ್‌ಗೆ ವೋಟು ಹಾಕುವಂತೆ ಹೇಳುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.