ಗುರುವಾರ , ಮಾರ್ಚ್ 4, 2021
29 °C
ಸ್ವೀಪ್‌ ಸಮಿತಿಯ ಪ್ರಯತ್ನಕ್ಕೆ ನಗರ ಪ್ರದೇಶದಲ್ಲಿ ದೊರಕದ ಸ್ಪಂದನೆ

ಜಿಲ್ಲೆಯಲ್ಲಿ ಆಶಾದಾಯಕ ಮತದಾನ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಆಶಾದಾಯಕ ಮತದಾನ

ಬಳ್ಳಾರಿ: ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ನಡೆದಿದ್ದ ಮತದಾನಕ್ಕಿಂತಲೂ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗೇನೂ ಇಲ್ಲ.

ಬದಲಾವಣೆಗೆ ಒಳಪಡಿಸಿ, ರಾತ್ರಿ 9 ರ ವೇಳೆಗೆ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಶೇ 71ರಷ್ಟು ಮತದಾನವಾಗಿತ್ತು. ಒಟ್ಟಾರೆ ಮತದಾನ ಪ್ರಮಾಣ ಆಶಾದಾಯಾಕವಾಗಿಯೇ ಇದೆ.

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್‌ ಸಮಿತಿಯು ಜಿಲ್ಲೆಯಾದ್ಯಂತ ಹಮ್ಮಿಕೊಂಡ ನೂರಾರು ಕಾರ್ಯಕ್ರಮಗಳಿಗೆ ನಿರೀಕ್ಷೆಯಂತೆ ಮತದಾರರು ಸ್ಪಂದಿಸಿಲ್ಲ ಎಂಬುದು ಮೇಲುನೋಟಕ್ಕೆ ಕಂಡು ಬರುವ ಅಂಶ. ಆದರೆ ಮತದಾನದಲ್ಲಿ ಗಮನಾರ್ಹ ಇಳಿಕೆಯಾಗಿಲ್ಲ ಎಂಬುದನ್ನು ಮರೆಯುವಂತಿಲ್ಲ.

2008ರ ಚುನಾವಣೆಯಲ್ಲಿ ಆಗಿರುವ ಮತದಾನದ ಪ್ರಮಾಣ ನಂತರದ ಚುನಾವಣೆಯಲ್ಲಿ ಶೇ 6.85ರಷ್ಟು ಏರಿಕೆ ಕಂಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಇಳಿಕೆ ಕಂಡು ಬಂದಿದೆ.

ಹಡಗಲಿಯಲ್ಲಿ ಕೊಂಚ ವ್ಯತ್ಯಾಸ ಹೊರತುಪಡಿಸಿದರೆ ಹಿಂದಿನ ವರ್ಷದಷ್ಟೇ ಮತದಾನ ನಡೆದಿದೆ.ಆದರೆ ಹಗರಿಬೊಮ್ಮನಹಳ್ಳಿಯಲ್ಲಿ ಶೇ 4ರಷ್ಟು ಕಡಿಮೆಯಾಗಿದೆ. ಸಿರುಗುಪ್ಪ ಮತ್ತು ಬಳ್ಳಾರಿ ನಗರದಲ್ಲಿ ಕೊಂಚ ಏರಿಕೆ ಕಂಡಿದ್ದರೆ, ಗ್ರಾಮೀಣ ಕ್ಷೇತ್ರದಲ್ಲಿ ಕಡಿಮೆಯಾಗಿದೆ. ಕೂಡ್ಲಿಗಿಯಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದೆ.

ನಿರುತ್ಸಾಹ: ಇಡೀ ಜಿಲ್ಲೆಯ ಎಲ್ಲ ಒಂಭತ್ತು ಕ್ಷೇತ್ರಗಳಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮತದಾರರು ಹೆಚ್ಚು ಉತ್ಸಾಹದಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮತದಾರರು ನೂಕುನುಗ್ಗಲಿನಲ್ಲಿ ಮತ ಚಲಾಯಿಸಿದ್ದು ಎದ್ದುಕಂಡಿತು.

‘ಸ್ವೀಪ್‌ ಚಟುವಟಿಕೆಗಳು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹೆಚ್ಚು ನಡೆದಿದ್ದವು. ಬಯಲಾಟ, ಮ್ಯಾರಥಾನ್‌, ಪಂಜಿನ ಮೆರವಣಿಗೆಯಂಥ ಜಾಗೃತಿ ಕಾರ್ಯಕ್ರಮಗಳು ನಗರ ಪ್ರದೇಶದಲ್ಲಿ ನಿರೀಕ್ಷಿತ ಪರಿಣಾಮ ಬೀರಿಲ್ಲ. ಆದರೆ ಮತದಾನ ಪ್ರಮಾಣ ಶೇ 45–50 ಇದ್ದ ಗ್ರಾಮಗಳಲ್ಲಿ 65 ದಾಟಿರುವುದು ಸಂತಸದ ವಿಚಾರ’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ’ಪ್ರಜಾವಾಣಿ’ಗೆ ತಿಳಿಸಿದರು.

‘ಬಿರು ಬಿಸಿಲು, ಮಳೆಯಂಥ ಪ್ರತಿಕೂಲ ಸನ್ನಿವೇಶದಲ್ಲೂ ಜಿಲ್ಲೆಯಲ್ಲಿ ಮತದಾರರು ಉತ್ಸಾಹದಿಂದ ಮತದಾನ ಮಾಡಿರುವುದು ಉತ್ತಮ ಬೆಳವಣಿಗೆ. ಸ್ವೀಪ್‌ ಸಮಿತಿಯ ಅಧ್ಯಕ್ಷರಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

**

ಸ್ವೀಪ್‌ ಚಟುವಟಿಕೆಗಳು ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಿವೆ. ಆದರೆ ನಗರ ಪ್ರದೇಶದಲ್ಲಿ ನಿರೀಕ್ಷೆಯಂತೆ ಮತದಾನ ನಡೆದಿಲ್ಲ

ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.