ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಮೊಬೈಲ್‌ ಟಾರ್ಚ್‌ ಬೆಳಕು!

ವಿದ್ಯುತ್‌ ಪೂರೈಕೆ ಸ್ಥಗಿತ: ಚುನಾವಣಾ ಸಿಬ್ಬಂದಿ ಪರದಾಟ
Last Updated 13 ಮೇ 2018, 11:05 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡು, 15ನೇ ವಾರ್ಡಿನಲ್ಲಿನ ಮತಗಟ್ಟೆ ಸಂಖ್ಯೆ 42ರಲ್ಲಿ ರಾತ್ರಿ ಎಂಟು ಗಂಟೆಯಲ್ಲಿ ಮೊಬೈಲ್ ಫೋನ್‌ ಬ್ಯಾಟರಿ ಬೆಳಕಿನಲ್ಲೇ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ಮತಗಟ್ಟೆ ಸಂಖ್ಯೆ 43ರಲ್ಲಿ ಸಂಜೆ 6ರ ನಂತರವೂ ಮತದಾನ ಮುಂದುವರಿದು, 7.30ಕ್ಕೆ ಮುಗಿಯಿತು. ಮಹಿಳೆಯರು ಹಾಗು ಪುರುಷರು ಸೇರಿ 100ಕ್ಕೂ ಹೆಚ್ಚು ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಸಂಜೆ 5.50 ಗಂಟೆಗೆ ಸರಿಯಾಗಿ ಭಾರಿ ಗಾಳಿಯೊಂದಿಗೆ ಮಳೆ ಆರಂಭವಾಗಿದ್ದರಿಂದ ಮಹಿಳೆಯರನ್ನು ಮಾತ್ರ ಮತಗಟ್ಟೆ ಒಳಕ್ಕೆ ಕಳಿಸಲಾಗಿತ್ತು.

ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಮತಗಟ್ಟೆಯಲ್ಲಿ ಕೇವಲ ಒಂದೇ ಒಂದು ಬ್ಯಾಟರಿ ಚಾಲಿತ ವಿದ್ಯುತ್ ದೀಪ ಇತ್ತು. ಆದರೆ ಅದರ ಬೆಳಕು ಸಾಲದೆ ಮತದಾನ ಮಕ್ತಾಯದ ಪ್ರಕ್ರಿಯೆಗಳನ್ನು ಮೊಬೈಲ್ ಟಾರ್ಚ್ ಹಾಗೂ ಮೇಣದ ಬತ್ತಿ ಬೆಳಕಿನಲ್ಲಿಯೇ ಸಿಬ್ಬಂದಿ ಪೂರ್ಣಗೊಳಿಸಿದರು.

ಚುನಾವಣಾ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳಲ್ಲಿ ಮಾಹಿತಿ ಭರ್ತಿ ಮಾಡಿದ ಸಿಬ್ಬಂದಿ ವಿವಿಧ
ಪಕ್ಷಗಳ ಏಜೆಂಟರ ಸಹಿ ಪಡೆದರು. ನಂತರ ಮತ ಯಂತ್ರ, ವಿವಿ ಪ್ಯಾಟ್ ಯಂತ್ರಗಳನ್ನು ಬಾಕ್ಸ್‌ ಒಳಗೆ ಇಟ್ಟು ಏಜೆಂಟರ ಸಮ್ಮುಖದಲ್ಲಿ ಸೀಲ್ ಮಾಡಿದರು.

ಈ ಮತ ಕೇಂದ್ರದಲ್ಲಿ 1206 ಮತದಾರರ ಪೈಕಿ 479 ಪುರುಷರು ಹಾಗೂ 551 ಮಹಿಳೆಯರು ಮತ ಚಲಾಯಿಸಿದ್ದಾರೆ.
‘ಪ್ರತಿ ಮತದಾನದ ನಂತರ ಮತ್ತೆ ಮತದಾನಕ್ಕೆ ಯಂತ್ರ ಸಿದ್ಧವಾಗುವುದು ಕೆಲವು ಬಾರಿ ಒಂದು ನಿಮಿಷದವರೆಗೂ ಸಮಯ ತೆಗೆದುಕೊಳ್ಳುತ್ತಿತ್ತು. ಹೀಗಾಗಿ ಮತದಾನ ವಿಳಂಬವಾಯಿತು’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ತಾಲ್ಲೂಕಿನ ಬಣವಿಕಲ್ಲು ಗ್ರಾಮದ ಮತಗಟ್ಟೆ ಸಂಖ್ಯೆ 128ರಲ್ಲಿಯೂ ಮತದಾನ ರಾತ್ರಿ 7.50ಕ್ಕೆ ಮುಗಿಯಿತು. ಮತ ಕೇಂದ್ರದಲ್ಲಿ ಸಂಜೆ 6 ಗಂಟೆಗೆ ಸುಮಾರು 60ಕ್ಕೂ ಹೆಚ್ಚು ಮತದಾರರು ಇದ್ದರು. ‘ಎರಡು ವಾರ್ಡುಗಳ ಮತದಾರರಿಗೆ ಒಂದೇ ಮತಗಟ್ಟೆ ಇದ್ದ ಕಾರಣ ತೊಂದರೆ ಆಯಿತು’ ಎಂದು ಗ್ರಾಮದ ಎ.ಎಂ.ಕೆ.ವಿ. ಸ್ವಾಮಿ ದೂರಿದರು.

ಇಲ್ಲಿಯೂ ಸಂಜೆ 7 ಗಂಟೆಗೆ ಮಳೆ ಆರಂಭವಾಗಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಸಿಬ್ಬಂದಿ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT