ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದರು..

7

ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದರು..

Published:
Updated:
ಮೊದಲ ಬಾರಿ ಮತ ಚಲಾಯಿಸಿ ಸಂಭ್ರಮಿಸಿದರು..

ಬೀದರ್‌: ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಅನೇಕ ಯುವಕ, ಯುವತಿಯರು ಮೊದಲ ಬಾರಿಗೆ ಮತ ಹಕ್ಕು ಚಲಾಯಿಸುವ ಮೂಲಕ ಖುಷಿ ಹಂಚಿಕೊಂಡರು.

ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ನಿಂತಿದ್ದ ಸುಜಾತಾ ಶಂಕ್ರಪ್ಪ ಅವರು ‘ನಾನು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡು ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮನ್ನು ಪರಿಚಯಿಸಿಕೊಂಡರು.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ನನಗೂ ಅವಕಾಶ ಸಿಕ್ಕಿರುವುದು ಖುಷಿ ಉಂಟು ಮಾಡಿದೆ’ ಎಂದು ಸುಜಾತಾ ಹೇಳಿದರು.

ಮರಕಲ್‌ ಗ್ರಾಮದ ಶ್ರೀದೇವಿ ಶಿವಕುಮಾರ ಅವರು ಮೊದಲ ಬಾರಿಗೆ ಮತ ಚಲಾಯಿಸಿ ಮತಗಟ್ಟೆಯಿಂದ ಹೊರ ಬಂದು ಎಡಗೈ ತೋರು ಬೆರಳಿಗೆ ಹಚ್ಚಿದ್ದ ಶಾಯಿ ಗುರುತನ್ನು ತೋರಿಸಿ ಸಂಭ್ರಮಪಟ್ಟರು.

ಭಾಲ್ಕಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿ ಪಾಲಿಟೆಕ್ನಿಕ್‌ ವಿದ್ಯಾರ್ಥಿನಿ ರೇಣುಕಾ ಏಕಲೂರೆ ಮತದಾನದ ನಂತರ ಮತಗಟ್ಟೆಯಿಂದ ಹೊರಬಂದು ಬೆರಳು ತೋರಿಸಿ ವಿಜಯ ಸಂಕೇತ ಪ್ರದರ್ಶಿಸಿದರು. ‘ಗೋಪ್ಯ ಮತದಾನ ಮಾಡುವ ಅವಕಾಶ ಸಿಕ್ಕಿದೆ. ಮತ ಯಾರಿಗೆ ಹಾಕಿದ್ದೇನೆ ಎಂದು ಹೇಳಲಾರೆ. ಅಭಿವೃದ್ಧಿಯ ಪರವಾಗಿ ನನ್ನ ಹಕ್ಕು ಚಲಾಯಿಸಿದ್ದೇನೆ’ ಎಂದು ಮುಗುಳ್ನಗೆ ಬೀರಿದರು.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯ ಪಿಕೆಪಿಎಸ್‌ ಮತಗಟ್ಟೆಯಲ್ಲಿ ಪ್ರಣಿತಾ ಮಹೇಂದ್ರಕುಮಾರ, ಸ್ವಾತೇಶ್ವರಿ ಮಲ್ಲಿಕಾರ್ಜುನ ಹಾಗೂ ವಿಠ್ಠಲ ಮಾದಪ್ಪ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು.

‘ಭಯದಿಂದ ಮತಗಟ್ಟೆಗೆ ಬಂದಿದ್ದೆ. ಕರಪತ್ರದಲ್ಲಿ ನೀಡಿದ್ದ ಮಾಹಿತಿಯನ್ನು ನೋಡಿಕೊಂಡಿದ್ದರಿಂದ ಕಷ್ಟ ಆಗಲಿಲ್ಲ. ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶ ನನಗೂ ದೊರಕಿತು’ ಎಂದು ಪ್ರಣಿತಾ ಖುಷಿಪಟ್ಟರು.

ಮತದಾನದ ಬಗೆಗೆ ಗೊತ್ತಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ ನಂತರ ಮತದಾನದ ಅರಿವಾಗಿದೆ. ಮುಂದಿನ ಚುನಾವಣೆಯಲ್ಲೂ ಯಾವುದೇ ಅಮಿಷಕ್ಕೆ ಒಳಗಾದೆ ಮತದಾನ ಮಾಡುವೆ. ಒಳ್ಳೆಯ ಅಭ್ಯರ್ಥಿಗಳು ಇರದಿದ್ದರೆ ನೋಟಾ ಚಲಾಯಿಸಲೂ ಅವಕಾಶ ಇದೆ. ತಪ್ಪದೆ ಮತ ಚಲಾಯಿಸುವೆ ಎಂದು ಬಗದಲ್‌ನ ಪವನಕುಮಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry