ಗಮನ ಸೆಳೆದ ಗುಲಾಬಿ ಮತಗಟ್ಟೆ

7

ಗಮನ ಸೆಳೆದ ಗುಲಾಬಿ ಮತಗಟ್ಟೆ

Published:
Updated:

ಬೀದರ್: ಮತಗಟ್ಟೆ ಕೇಂದ್ರದವರೆಗಿನ ನೆಲಹಾಸು ಗುಲಾಬಿ, ಮತಗಟ್ಟೆಯ ಒಳಗೆ ಹಾಸಿದ ಕಾರ್ಪೇಟ್ ಗುಲಾಬಿ, ಗೋಡೆ ಬಣ್ಣಗಳು ಗುಲಾಬಿ, ಚುನಾವಣಾ ಸಿಬ್ಬಂದಿ ಧರಿಸಿದ್ದ ಸಮವಸ್ತ್ರ ಗುಲಾಬಿ, ಟೊಪ್ಪಿಗೆ ಗುಲಾಬಿ, ನಾಮಫಲಕ ಗುಲಾಬಿ, ವೋಟಿಂಗ್ ಕಂಪಾರ್ಟಮೆಂಟ್‌ ಕೂಡ ಗುಲಾಬಿ....

ನಗರದ ಪನ್ನಾಲಾಲ್‌ ಹೀರಾಲಾಲ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಹಿಳೆಯರಿಗಾಗಿ ಸ್ಥಾಪಿಸಿದ್ದ ಗುಲಾಬಿ ಮತಗಟ್ಟೆಯಲ್ಲಿ ಕಂಡ ಬಂದ ದೃಶ್ಯಗಳು ಇವು.

ಮಹಿಳೆಯರಿಗೆ ಅನುಕೂಲ ಮಾಡಿಕೊಡಲು ಚುನಾವಣಾ ಆಯೋಗ ಗುಲಾಬಿ ಮತಗಟ್ಟೆಯನ್ನು ಸ್ಥಾಪಿಸಿತ್ತು. ಕೇಂದ್ರದಲ್ಲಿ ಬಹುತೇಕ ಗುಲಾಬಿ ಬಣ್ಣಕ್ಕೆ ಪ್ರಾಧಾನ್ಯತೆ ಕೊಟ್ಟಿತ್ತು.

ಕೇಂದ್ರದ ಪ್ರವೇಶ ದ್ವಾರ ಪಕ್ಕದಲ್ಲಿ ಶಾಮಿಯಾನ ಹಾಕಿ ಮಹಿಳೆಯರಿಗೆ ಕುಳಿತುಕೊಳ್ಳಲು ಎಂಟು ಕುರ್ಚಿಗಳನ್ನು ಇಡಲಾಗಿತ್ತು. ಅಲ್ಲಿಂದ ಕೇಂದ್ರದವರೆಗೆ ಗುಲಾಬಿ ಬಣ್ಣದ ನೆಲಹಾಸು ಹಾಕಲಾಗಿತ್ತು. ಕೇಂದ್ರದಲ್ಲಿದ್ದ ಅಧೀಕ್ಷಕಿ ಮತಗಟ್ಟೆ ಅಧಿಕಾರಿ, ಗೃಹ ರಕ್ಷಕ ಸಿಬ್ಬಂದಿ ಸೇರಿ ಆರೂ ಜನ ಮಹಿಳಾ ಸಿಬ್ಬಂದಿ ಗುಲಾಬಿ ಬಣ್ಣದ ಸಮವಸ್ತ್ರ ಧರಿಸಿದ್ದರು. ತಲೆ ಮೇಲೂ ಗುಲಾಬಿ ಬಣ್ಣದ ಟೊಪ್ಪಿಗೆ ಧರಿಸಿ ಗಮನ ಸೆಳೆದರು.

‘ಕೇಂದ್ರದಲ್ಲಿ ಮೂರು ಫ್ಯಾನ್‌ಗಳನ್ನು ಕೂಡಿಸಲಾಗಿದೆ. ಕುಡಿಯುವ ನೀರು, ವಿಶ್ರಾಂತಿ ಸೇರಿ ಮತದಾರರಿಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರದ ಎಲ್ಲ ಸಿಬ್ಬಂದಿ ಮಹಿಳೆಯರೇ ಇದ್ದಾರೆ’ ಎಂದು ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

‘ಮತಗಟ್ಟೆಯಲ್ಲಿ 1,223 ಮತದಾರರು ಇದ್ದಾರೆ. ಮಧ್ಯಾಹ್ನ 12.30 ರ ವೇಳೆಗೆ 298 ಜನ ಮತ ಹಕ್ಕು ಚಲಾಯಿಸಿದ್ದಾರೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry