ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತೀರಿಸಲು ಬಂದ ‘ಡಾನ್‌’

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಡಾನ್‌ ಚಿತ್ರ ಬಿಡುಗಡೆಯಾಗಿ ಈ 12ಕ್ಕೆ40 ವರ್ಷಗಳಾಗಲಿವೆ. ಅಮಿತಾಭ್‌ ದ್ವಿಪಾತ್ರದಲ್ಲಿ ನಟಿಸಿದ ಈ ಚಿತ್ರ ಆ ಕಾಲದ ಬ್ಲಾಕ್‌ ಬಸ್ಟರ್‌ ಸಹ ಹೌದು. ಇದನ್ನೇ ಮತ್ತೆ ಶಾಹ್‌ರುಖ್‌ ಖಾನ್‌ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ಡಾನ್‌ 2 ಹೆಸರಿನಲ್ಲಿ ರಿಮೇಕ್‌ ಮಾಡಲಾಗಿತ್ತು.

40 ವರ್ಷಗಳ ಹಿಂದೆ ಡಾನ್‌ ಸಿದ್ಧ ಪಡಿಸಿದ್ದನ್ನು ನಿರ್ದೇಶಕ ಚಂದ್ರಾ ಬಾರೊಟ್‌ ನೆನಪಿಸಿಕೊಂಡಿದ್ದಾರೆ. ಈ ಚಿತ್ರ ತಯಾರಿಸಿದ್ದು ನಾರಿಮನ್‌ ಇರಾನಿ ಅವರಿಗಾಗಿ. 1972ರಲ್ಲಿ ಸುನೀಲ್‌ ದತ್‌ ಹಾಗೂ ವಹೀದಾ ರೆಹಮಾನ್‌ ಅವರ ಜಿಂದಗಿ ಜಿಂದಗಿ ಚಿತ್ರ ನಿರ್ಮಾಣ ಮಾಡಿದ್ದರು. ಆ ಚಿತ್ರ ಹೇಳಹೆಸರಿಲ್ಲದಂತೆ ಬಾಕ್ಸ್‌ ಆಫೀಸಿನಲ್ಲಿ ಕುಸಿದುಬಿತ್ತು. ಪರಿಣಾಮ ನಾರಿಮನ್‌ ಇರಾನಿ ಸಾಲದಲ್ಲಿ ಮುಳುಗಿ ಹೋದರು.

ಇರಾನಿಗೆ ಎಲ್ಲರೂ ಪ್ರೀತಿಯಿಂದ ‘ಬಾವಾ’ ಎಂದು ಕರೆಯುತ್ತಿದ್ದೆವು. ಬಾವಾನ ಸಾಲ ತೀರಿಸಲು ನಾವೆಲ್ಲ ಏನಾದರೂ ಮಾಡಬೇಕೆಂದುಕೊಂಡೆವು. ರೋಟಿ, ಕಪಡಾ ಔರ್‌ ಮಕಾನ್‌ ಚಿತ್ರೀಕರಣದ ಸಮಯದಲ್ಲಿ ಅಮಿತಾಭ್‌, ಪ್ರಾಣ್‌ ಹಾಗೂ ಜೀನತ್‌ ಅಮಾನ್‌ ಜೊತೆಗೆ ಸ್ನೇಹ ಬೆಳೆದಿತ್ತು. ಈ ಮಾತು ಅವರಿಗೂ ಒಪ್ಪಿತವಾಯಿತು. ಇರಾನಿ ಹೆಂಡತಿ ವಹಿದಾ ರೆಹಮಾನ್‌ ಅವರ ಕೇಶವಿನ್ಯಾಸಕಿಯಾಗಿದ್ದರು. ಸಲೀಮ್‌ ಅವರಿಗೆ ಯಾವುದಾದರೂ ಕತೆ ಬರೆದುಕೊಡಲು ಕೇಳಿದರು.

ಆಗ ಸಲೀಮ್‌ ನನ್ನ ಬಳಿಯೊಂದು ಕತೆಯಿದೆ. ಆದರೆ ಸಿಕ್ಕಾಪಟ್ಟೆ ರಿಸ್ಕ್‌ ತೊಗೊಬೇಕಾಗುತ್ತದೆ. ಇದು ಈ ಕಾಲಕ್ಕೆ ಹೊಂದುವಂಥದ್ದಲ್ಲ ಎಂದರು. ಇರಲಿ, ಪರವಾ ಇಲ್ಲ ಸ್ಕ್ರಿಪ್ಟ್‌ ಕೊಡಿ ಎಂದು ಕೇಳಿದೆವು. ಪೋಸ್ಟರ್‌ ಮೇಲೆ ಜಾವೇದ್‌ ಸಲೀಮ್‌ ಹೆಸರು ಕೂಡ ಪ್ರಕಟಿಸುವೆವು ಎಂದು ಹೇಳಿದೆವು. ಈಗ ನಿರ್ಮಾಣದ ಮುಂದಿನ ಹಂತ ತಾರಾಗಣದ ಆಯ್ಕೆ ಮಾಡಬೇಕಾಗಿತ್ತು.

ಅದು ಠಾಕೂರರ ದಬ್ಬಾಳಿಕೆಯ ಕತೆಗಳು ಬಂದಿದ್ದವು. ಡಾನ್‌ ಪರಿಕಲ್ಪನೆಯೇ ಹೊಸದಾಗಿತ್ತು. ಹಾಗಾಗಿ ಧರ್ಮೇಂದ್ರ, ದೇವಾನಂದ್‌, ಜಿತೇಂದ್ರ ಎಲ್ಲರೂ ಚಿತ್ರಕಥೆಯನ್ನು ಕೇಳಿ ನಿರಾಕರಿಸಿದರು. ಆಗ ಮತ್ತೆ ನಮ್ಮ ಸ್ನೇಹಿತರ ಟೋಳಿಯೇ ಈ ತಾರಾಗಣ ನಿರ್ವಹಿಸುವ ನಿರ್ಧಾರಕ್ಕೆ ಬಂದೆವು. ಪ್ರಾಣ್‌, ಅಮಿತಾಭ್‌, ಜೀನತ್‌ ಒಪ್ಪಿಕೊಂಡರು. ಆಗಿನ್ನೂ ಚಿತ್ರದ ಹೆಸರು ‘ಡಾನ್‌’ ಎಂದು ಸಹ ತೀರ್ಮಾನವಾಗಿರಲಿಲ್ಲ. ಎಲ್ಲರೂ ನಮ್ಮನ್ನು ಡಾನ್‌ವಾಲಿ ಸ್ಕ್ರಿಪ್ಟ್‌ ವಾಲೆ ಎಂದೇ ಕರೆಯುತ್ತಿದ್ದರು.‌

ಚಿತ್ರದ ಮೊದಲ ಸೀನ್‌ ‘ಯೇ ಮೇರಾ ದಿಲ್‌ ಪ್ಯಾರ್‌ ಕಾ ದೀವಾನಾ’ ಹಾಡಿನಿಂದ ಆರಂಭಿಸಬೇಕು ಎಂದುಕೊಂಡಿದ್ದೆವು. ಹಾಡಿನ ಸೆಟ್‌ಗಾಗಿ ಹಣಬೇಕಾಗಿತ್ತು. ನನ್ನ ತಂಗಿಯಿಂದ 40 ಸಾವಿರ ರೂಪಾಯಿ ಸಾಲ ಪಡೆದು ಸೆಟ್‌ ನಿರ್ಮಿಸಿದೆವು. ಡಾನ್‌ 2ರಲ್ಲಿ ಶಾರುಖ್‌ ಖಾನ್‌ ಎತ್ತರದ ವಿಮಾನದಿಂದ ಹಾರುವ ದೃಶ್ಯವೊಂದಿದೆ. ಅದೊಂದೇ ದೃಶ್ಯದ ಬಜೆಟ್‌ 84ಲಕ್ಷ ರೂಪಾಯಿ. ನಮ್ಮ ಇಡೀ ಚಿತ್ರವೇ ಈ ಬಜೆಟ್‌ನಲ್ಲಿ ಮುಗಿದುಹೋಗಿತ್ತು.

‘ಖೈಕೆ ಪಾನ್‌ ಬನೌರಸ್‌ವಾಲಾ’ ಹಾಡಿಗೆ ಮುಂಚೆ ಅಮಿತಾಭ್‌ 40 ಪಾನುಗಳನ್ನು ತಿನ್ನಬೇಕಾಯಿತು. ಈ ಹಾಡು ಸೇರ್ಪಡೆಗೊಳಿಸಿದ್ದು ಚಲನಚಿತ್ರ ಚಿತ್ರೀಕರಣ ಪೂರ್ಣವಾದ ನಂತರ. ಚಿತ್ರದ ಸ್ಕ್ರೀನಿಂಗ್‌ಗೆ ಬಂದಿದ್ದ ಮನೋಜ್‌ ಕುಮಾರ್‌ ಈ ಹಾಡನ್ನು ಸೇರಿಸಲು ಸೂಚಿಸಿದ್ದರು.

ಮಧ್ಯಂತರದ ನಂತರ ಚಿತ್ರದ ನಿರೂಪಣೆ ತುಂಬಾ ಬಿಗಿಯಾಗಿದೆ. ಪ್ರೇಕ್ಷಕರು ಬಾತ್‌ರೂಮಿಗೆ ಹೋಗಿಬರಲು ಒಂದು ಅವಕಾಶಕೊಡುವಂತೆ ಹಾಡು ಸೇರಿಸಲು ಸೂಚಿಸಿದ್ದರು. ಅದಕ್ಕೆ ಪಾನ್‌ವಾಲಾ ಹಾಡು ಸೇರ್ಪಡೆಯಾಯಿತು. ಚಿತ್ರ ಬಿಡುಗಡೆಯಾದ ನಂತರ ಹಾಡುಗಳೆಲ್ಲವೂ ಸೂಪರ್‌ ಹಿಟ್‌ ಆದವು. ಸಾರ್ವಕಾಲಿಕ ಹಿಟ್‌ ಆದವು.

ಜಾವೇದ್‌ ತಮ್ಮ ಸ್ಕ್ರಿಪ್ಟ್‌ ಬದಲಿಸದಂತೆ ಹಟಹಿಡಿದಿದ್ದರು. ಆದರೆ ಕಲ್ಯಾಣ್‌ಜಿ ಮತ್ತು ಆನಂದ್‌ ಜಿ ಅದಕ್ಕೆ ಮನವೊಲಿಸಿದರು. ಅವರು ಬನಾರಸ್‌ ಹಾಗೂ ಗಂಗಾ ಪದಗಳನ್ನು ಬಳಸಿದ ಎಲ್ಲ ಚಿತ್ರಗಳೂ ಹಿಟ್‌ ಆಗಿವೆ ಎಂದರು. ಕಲ್ಯಾಣ್‌ಜಿ ಪಾನ್‌ ಪ್ರಿಯರು. ಅವರ ತುಟಿಯಂಚಿಗೆ ಕೆಂಪು ರೇಖೆಯೊಂದು ಮೂಡುತ್ತಿತ್ತು.

ಇಷ್ಟು ನಾಜೂಕಿನ ರೇಖೆ ಮೇಕಪ್‌ನಿಂದ ಮೂಡುವುದಿಲ್ಲ. ಅದಕ್ಕೆ ಅಮಿತಾಭ್‌ಗೆ 30–40 ಪಾನ್‌ ತಿನ್ನಿಸಿದ್ದೆವು. ಮರುದಿನ ಪಾನಿನೊಳಗಿನ ಸುಣ್ಣದಿಂದಾಗಿ ಅಮಿತಾಭ್‌ಗೆ ಮಾತನಾಡಲು ಬಂದಿರಲಿಲ್ಲ. ಅದಾದ ಮೇಲೆ ಸುಣ್ಣವಿರದ ಪಾನ್‌ಗಳನ್ನು ತರಿಸಿದ್ದೆವು. ಚಿತ್ರೀಕರಣ ಮುಗಿಯುವವರೆಗೂ ಅಮಿತಾಭ್‌ ರೇಗುತ್ತಲೇ ಪಾನ್‌ ತಿನ್ನುತ್ತಿದ್ದರು.

ಸಿನಿಮಾದ ಅಡ್ವಾನ್ಸ್‌ ಬುಕಿಂಗ್‌ಗೆ ಉದ್ದಾನುದ್ದ ಸಾಲುಗಳಿದ್ದವು. ದುರಂತವೆಂದರೆ ನಾವು ಬಾವಾಗಾಗಿ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೆವು. ಚಿತ್ರ ನಿರ್ಮಿಸಿದ ಇರಾನಿ, ಚಿತ್ರ ಬಿಡುಗಡೆಗೆ ಮುಂಚೆಯೇ ಸಾವನ್ನಪ್ಪಿದರು. ಅಮಿತಾಭ್‌ ತಮ್ಮ ಎರಡೂವರೆ ಲಕ್ಷ ಸಂಭಾವನೆಯಲ್ಲಿ ಕೇವಲ ಒಂದು ಲಕ್ಷ ತೆಗೆದುಕೊಂಡರು.

ಜೀನತ್‌ ಅಮಾನ್‌ ಸಹ 1 ಲಕ್ಷ ಸಂಭಾವನೆಯಲ್ಲಿ ಅರ್ಧದಷ್ಟು ಬಿಟ್ಟುಕೊಟ್ಟರು. ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆದದ್ದು ಪ್ರಾಣ್‌ 5 ಲಕ್ಷ. ಅವರೂ ಎರಡೂವರೆ ಲಕ್ಷ ರೂಪಾಯಿಗಳಷ್ಟು ಸಂಭಾವನೆ ಬಿಟ್ಟುಕೊಟ್ಟರು.

ಪಿಕ್‌ನಿಕ್‌ನಂತೆ ಸ್ನೇಹಿತನಿಗೆ ಸಹಾಯ ಮಾಡಲು ನಿರ್ಮಿಸಿದ ಈ ಚಿತ್ರ ಇತಿಹಾಸ ನಿರ್ಮಾಣ ಮಾಡಿತು... ಎಂದು ಚಂದ್ರಾ ಬಾರೊಟ್‌ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT