6

ಎನ್‌ಬಿಎಗೆ ಹೊರಟ್ರು ಬೆಂಗ್ಳೂರ್ ಬಾಲೆಯರು

Published:
Updated:
ಎನ್‌ಬಿಎಗೆ ಹೊರಟ್ರು ಬೆಂಗ್ಳೂರ್ ಬಾಲೆಯರು

‘ರಾಷ್ಟ್ರದ ಪ್ರಮುಖ ತಂಡಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಲೀಗ್ ಹಂತದಲ್ಲಿ ಚೆನ್ನೈನೊಂದಿಗಿನ ರೋಚಕ ಹಣಾಹಣಿಯಲ್ಲಿ ಗೆಲುವಿನ ಸನಿಹದಲ್ಲಿ ಎಡವಿದೆವು. ಆದರೆ, ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ವಿಶ್ವಾಸವನ್ನೇನೂ ಬಿಡಲಿಲ್ಲ.

ಸೆಮಿಫೈನಲ್ ನಲ್ಲಿ ಬಲಿಷ್ಠ ಕೇರಳವನ್ನು ಮಣಿಸಿದೆವು. ಲೀಗ್ ಹಂತದಲ್ಲಿ ನಮ್ಮಿಂದ ಕೊನೆಯ ಕ್ಷಣಗಳಲ್ಲಿ ಗೆಲುವನ್ನು ಕಿತ್ತುಕೊಂಡಿದ್ದ ಚೆನ್ನೈ ತಂಡವು ಫೈನಲ್ ನಲ್ಲಿ ನಮ್ಮ ಎದುರಾಳಿ. ಸಿಲಿಕಾನ್ ವ್ಯಾಲಿಯ ಬಾಲಕಿಯರ ಅಮೋಘ ಆಟದ ಮುಂದೆ ಚೆನ್ನೈ ಪರಾಭವಗೊಂಡಿತು. ಅಮೆರಿಕದ ಒರ್ಲಾಂಡೊದಲ್ಲಿ ವಿಶ್ವ ಚಾಂಪಿಯನ್ ಆಗುವ ಕನಸಿಗೆ ರೆಕ್ಕೆ ಮೂಡಿದ್ದು ಹೀಗೆ’

- ಅಮೆರಿಕದ ಪ್ರತಿಷ್ಠಿತ ದಿ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೊಸಿಯೇಷನ್ (ಎನ್ ಬಿಎ ) ಆಯೋಜಿಸುವ ಜೂನಿಯರ್ ವಿಶ್ವ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಬಾಲಕಿಯರ ತಂಡದ ಕೋಚ್ ಪ್ರಸನ್ನ ವೆಂಕಟೇಶ್ ಅವರ ನುಡಿಗಳಿವು.

ರಿಲಯನ್ಸ್ ಕಂಪನಿ ಪ್ರಾಯೋಜಕತ್ವದಲ್ಲಿ ಎನ್ ಬಿ ಎ ಅನೇಕ ರಾಷ್ಟಗಳಲ್ಲಿ ಪ್ರತಿವರ್ಷವೂ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟುಗಳ ಪ್ರತಿಭಾನ್ವೇಷಣೆ ನಡೆಸುತ್ತದೆ. ಆಯಾ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಆಡುವ 14 ವರ್ಷದೊಳಗಿನವರ ತಂಡಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಲು ಕೋಚ್ ಗಳನ್ನು ನೇಮಿಸುತ್ತದೆ. ನಂತರ ಜೂನಿಯರ್ ವಿಶ್ವ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ಗಾಗಿ ಆ ತಂಡಗಳ ನಡುವೆ ಟೂರ್ನಿಯೊಂದನ್ನು ಆಯೋಜಿಸುತ್ತದೆ. ಇದರಲ್ಲಿ ಗೆದ್ದವರು ಅಮೆರಿಕದಲ್ಲಿ ನಡೆಯುವ ವಿಶ್ವ ಬ್ಯಾಸ್ಕೆಟ್‌ಬಾಲ್  ಚಾಂಪಿಯನ್‌ಷಿಪ್‌ಗೆ ಪ್ರಯಾಣ ಬೆಳೆಸುತ್ತಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಈ ಆಯ್ಕೆ ಪ್ರಕ್ರಿಯೆಯಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಕ್ರಮವಾಗಿ ಗೆದ್ದ ದೆಹಲಿ ಮತ್ತು ಬೆಂಗಳೂರು ತಂಡಗಳು ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿವೆ. ಆಗಸ್ಟ್ 7ರಿಂದ 12ರವರೆಗೆ ನಿಗದಿಯಾಗಿರುವ ಈ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಜಯಿಸಿದ ತಂಡಗಳು ಎನ್ ಬಿಎ ಜಿ ಲೀಗ್ ನಲ್ಲಿ ಆಡಲು ಆಯ್ಕೆಯಾಗುತ್ತವೆ.

‘ಆಯ್ಕೆ ಪ್ರಕ್ರಿಯೆಯ ಟೂರ್ನಿಯಲ್ಲಿ ಚೆನ್ನೈ, ದೆಹಲಿ, ಹೈದರಾಬಾದ್, ಕೊಲ್ಕತ್ತ, ಕೇರಳ, ಪಂಜಾಬ್ ಹಾಗೂ ಮುಂಬೈ ತಂಡಗಳು ಸ್ಪರ್ಧಿಸಿದ್ದವು. ಇವರನ್ನೆಲ್ಲ ಹಿಂದಿಕ್ಕಿದ ಅನುಭವ ಬಹು ರೋಚಕ. ಆಟದಲ್ಲಿನ ವೇಗ, ರಕ್ಷಣಾ ತಂತ್ರಗಾರಿಕೆ, ಸಂವಹನಕ್ಕೆ ಸಂಬಂಧಿಸಿದಂತೆ ನಮ್ಮ ತಂಡವು ಯಾವುದೇ ತಪ್ಪುಗಳನ್ನು ಮಾಡದ ಕಾರಣ ಗೆಲ್ಲಲು ಸಾಧ್ಯವಾಯಿತು. ನಮಗೆ ಹೆಚ್ಚು ಸವಾಲು ಒಡ್ಡಿದ್ದು ಚೆನ್ನೈ ತಂಡ. ಕೋಚ್ ವೆಂಕಟೇಶ್ ಅವರು ತಂಡದ ಪ್ರತಿ ಆಟಗಾರ್ತಿಯ ದೌರ್ಬಲ್ಯವನ್ನು ಅರಿತು ಅದರಿಂದ ಹೊರಬರಲು ಅನುಕೂಲವಾಗುವ ರೀತಿಯಲ್ಲಿ ಸಲಹೆ ಮತ್ತು ತರಬೇತಿ ನೀಡುತ್ತಾರೆ. ಈಗ, ಭಾರತವನ್ನು ಪ್ರತಿನಿಧಿಸುತ್ತಿರುವ ಹೆಮ್ಮೆ ಒಂದು ಕಡೆಯಾದರೆ, ಅಲ್ಲಿ ಉತ್ತಮವಾಗಿ ಆಡಬೇಕಿರುವ ಸವಾಲು ಇನ್ನೊಂದು ಕಡೆ’ ಎಂದು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಓದುತ್ತಿರುವ ತಂಡದ ಶ್ರೇಯಾ ಅಶೋಕ್ ಹೇಳುತ್ತಾರೆ.

ಜೊತೆಗೆ, ಚಾಂಪಿಯನ್ ಷಿಪ್ ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಹಿಂದಿಗಿಂತ ಹೆಚ್ಚಿನ ತರಬೇತಿ ಹಾಗೂ ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಯುರೋಪ್, ಮೆಕ್ಸಿಕೊ, ಕೆನಡಾ, ಏಷ್ಯಾ ಪೆಸಿಫಿಕ್, ಚೀನಾ, ಹಾಗೂ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಅನೇಕ ರಾಷ್ಟ್ರಗಳು ಒರ್ಲಾಂಡೊದ ಇಎಸ್ ಪಿಎನ್ ಸಂಕೀರ್ಣದಲ್ಲಿ ನಡೆಯುವ ಈ ವಿಶ್ವಕಪ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಚಾಂಪಿಯನ್ ಷಿಪ್ ಗಾಗಿ ಪೂರ್ವಸಿದ್ದತೆ ಮಾಡಿಕೊಳ್ಳಲು ಜುಲೈ ತಿಂಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದನ್ನು ಸಹ ಎನ್ ಬಿಎ ಆಯೋಜಿಸುತ್ತದೆ. ಅದೇ ವೇಳೆ ಡಯಟ್ ಹಾಗೂ ಫಿಟ್ ನೆಸ್ ತಜ್ನರು ಸ್ಪರ್ಧಿಗಳಿಗೆ ಸಲಹೆಗಳನ್ನು ನೀಡುತ್ತಾರೆ. ಒಟ್ಟಿನಲ್ಲಿ ಬೆಂಗಳೂರು ತಂಡವು ತನ್ನ ಸಾಮರ್ಥ್ಯವನ್ನು ಪಣಕ್ಕಿಟ್ಟು ಹೋರಾಡಿ, ಗೆಲ್ಲುವ ವಿಶ್ವಾಸ ಹೊಂದಿದೆ’ ಎನ್ನುತ್ತಾರೆ ಕೋಚ್ ವೆಂಕಟೇಶ್.

ಜೊತೆಗೆ, ತಂಡದಲ್ಲಿನ ಹತ್ತು ಪ್ರತಿಭಾನ್ವಿತ ಆಟಗಾರ್ತಿಯರು ಇನ್ನೂ ಹೆಚ್ಚಿನ ಮತ್ತು ವಿಭಿನ್ನವಾದ ಸವಾಲನ್ನು ಚಾಂಪಿಯನ್ ಷಿಪ್ ನಲ್ಲಿ ಎದುರಿಸಬೇಕಾಗುತ್ತದೆ ಎಂದು ಹೇಳುವುದನ್ನು ವೆಂಕಟೇಶ್ ಮರೆಯುವುದಿಲ್ಲ. ವಿದೇಶಿ ತಂಡಗಳ ಸಾಮರ್ಥ್ಯ ಹಾಗೂ ತರಬೇತಿಗೆ ಹೋಲಿಸಿದರೆ, ಬೆಂಗಳೂರು ತಂಡವು ತನ್ನ ಸಾಮರ್ಥ್ಯವನ್ನು ಹೆಚ್ಚಿನ ಮಟ್ಟದಲ್ಲಿ ವೃಧ್ಧಿಸಿಕೊಳ್ಳಬೇಕಿದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

**

‘ಬ್ಯಾಸ್ಕೆಟ್ ಬಾಲ್ ಭಾರತದಲ್ಲಿ ಅಂತಹ ಪ್ರಾಮುಖ್ಯತೆ ಪಡೆದಿಲ್ಲ. ಆದರೆ, ಇಲ್ಲೂ ಕೂಡ ಇಂತಹ ಪ್ರತಿಭಾನ್ವೇಷಣಾ ಕಾರ್ಯಕ್ರಮಗಳಿಂದಾಗಿ ಈ ಕ್ರೀಡೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನನ್ನ ನಂಬಿಕೆ. ಪ್ರತಿಯೊಂದು ಪ್ರಮುಖ ನಗರಗಳಲ್ಲೂ ಎನ್ ಬಿಎ ಅಕಾಡೆಮಿಯೊಂದನ್ನು ಸ್ಥಾಪಿಸಿದೆ. ವೃತ್ತಿಪರ ಕೋಚ್ ಗಳನ್ನು ನೇಮಿಸಿದೆ. ಅತ್ಯುತ್ತಮ ಪ್ರತಿಭೆಗಳನ್ನು ಹುಡುಕಿ ಅವರಿಗೆ ತರಬೇತಿ ನೀಡುವುದು ಈ ಅಕಾಡೆಮಿಗಳ ಕೆಲಸ. ನಾನೂ ಕೂಡ ಬೆಂಗಳೂರಿನಲ್ಲಿರುವ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಪ್ರಸನ್ನ ವೆಂಕಟೇಶ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry